ಬೆಂಗಳೂರು: ರಾಜ್ಯ ಸರ್ಕಾರವು ಆರು ಮಂದಿ ಕೆಎಎಸ್ ಹಾಗೂ ಮೂವರು ಐಎಎಸ್ ಅಧಿಕಾರಿಗಳನ್ನು ವರ್ಗಾವಣೆ ಮಾಡಿದ್ದು, ಎಂಟು ಮಂದಿ ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಸೋಮವಾರ ಆದೇಶ ಹೊರಡಿಸಿದೆ.
ಐಎಎಸ್ ಅಧಿಕಾರಿಗಳ ವರ್ಗಾವಣೆ
ಸಮಾಜ ಕಲ್ಯಾಣ ಇಲಾಖೆಯ ಆಯುಕ್ತ ಡಾ. ರಾಕೇಶ್ ಕುಮಾರ್ ಕೆ. ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಬೆಂಗಳೂರು ದಕ್ಷಿಣ ಪಾಲಿಕೆಯ ಆಯುಕ್ತರನ್ನಾಗಿ ವರ್ಗಾಯಿಸಲಾಗಿದೆ. ಬೆಂಗಳೂರು ದಕ್ಷಿಣ ಪಾಲಿಕೆಯ ಆಯುಕ್ತರಾಗಿದ್ದ ರಮೇಶ್ ಕೆ.ಎನ್. ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆರೋಗ್ಯ ಮತ್ತು ಶಿಕ್ಷಣ)ರನ್ನಾಗಿ ನೇಮಿಸಲಾಗಿದೆ.
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಆರೋಗ್ಯ ಮತ್ತು ಶಿಕ್ಷಣ) ವೆಂಕಟಾಚಲಪತಿ ಆರ್. ಅವರನ್ನು ಬೆಂಗಳೂರು ಕೇಂದ್ರ ಪಾಲಿಕೆಯ ಹೆಚ್ಚುವರಿ ಆಯುಕ್ತ (ಅಭಿವೃದ್ಧಿ)ರನ್ನಾಗಿ ವರ್ಗಾಯಿಸಲಾಗಿದೆ.
8 ಐಎಎಸ್ ಅಧಿಕಾರಿಗಳಿಗೆ ಸ್ಥಳ ನಿಯುಕ್ತಿ
ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವಿಶೇಷ ಆಯುಕ್ತ (ಎಫ್‌ಇಸಿಸಿ, ಚುನಾವಣೆ, ವಿಪತ್ತು ನಿರ್ವಹಣೆ, ಸಾರ್ವಜನಿಕ ಸಂಪರ್ಕ ಹಾಗೂ ಸಂಯೋಜನೆ)ರಾಗಿ ಶಿಲ್ಪಾ ನಾಗ್ ಅವರನ್ನು ನೇಮಿಸಲಾಗಿದೆ.
ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಪುರುರಾಜ್ ಸಿಂಗ್ ಸೋಲಂಕಿ, ಕಲಬುರಗಿ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ರಿತಿಕಾ ವರ್ಮ, ವಿಜಯಪುರ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಝುಲ್ಫಿಶಾನ್ ಹಖ್, ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಅಭಿನವ್ ಜೈನ್ ಹಾಗೂ ಸವಣೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ಖೋಡೆ ಸಮೀರ್ ಪ್ರಕಾಶ್ ಅವರನ್ನು ನೇಮಿಸಲಾಗಿದೆ.
ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತರಾಗಿ ರಮ್ಯಾ ಆರ್. ಹಾಗೂ ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತರಾಗಿ ನಾಗೇಂದ್ರ ಬಾಬು ಕುಮಾರ್ ಅವರನ್ನು ಸ್ಥಳ ನಿಯುಕ್ತಿಗೊಳಿಸಲಾಗಿದೆ.
6 ಕೆಎಎಸ್ ಅಧಿಕಾರಿಗಳ ವರ್ಗಾವಣೆ
ಲಿಂಗಸುಗೂರು ಉಪ ವಿಭಾಗದ ಸಹಾಯಕ ಆಯುಕ್ತ ಬಸವಣ್ಣಪ್ಪ ಕಾಲಶೆಟ್ಟಿ ಅವರನ್ನು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಉಪ ಕಾರ್ಯದರ್ಶಿಯಾಗಿ ವರ್ಗಾಯಿಸಲಾಗಿದೆ.
ಚಿಕ್ಕಮಗಳೂರು ಉಪ ವಿಭಾಗದ ಸಹಾಯಕ ಆಯುಕ್ತ ಎಸ್. ರವಿ ಅವರನ್ನು ಕೊಟ್ಟೂರು–ಹರಿಹರ ರೈಲ್ವೆ ಬ್ರಾಡ್‌ಗೇಜ್ ನಿರ್ಮಾಣ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ನೇಮಿಸಲಾಗಿದೆ.
ಕಾರವಾರ ಉಪ ವಿಭಾಗದ ಸಹಾಯಕ ಆಯುಕ್ತ ಶಾ ಆಲಮ್ ಹುಸೇನ್ ಅವರನ್ನು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ, ಧಾರವಾಡದ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ಹಾಗೂ ವಿಜಯಪುರ ಉಪ ವಿಭಾಗದ ಸಹಾಯಕ ಆಯುಕ್ತ ಗುರುನಾಥ ಶಿವಪುತ್ರಪ್ಪ ಧಡ್ಡೆ ಅವರನ್ನು ಕೃಷ್ಣಾ ಮೇಲ್ದಂಡೆ ಯೋಜನೆಯ ವಿಶೇಷ ಭೂ ಸ್ವಾಧೀನಾಧಿಕಾರಿಯಾಗಿ ವರ್ಗಾಯಿಸಲಾಗಿದೆ.
ಬೀದರ್ ಉಪ ವಿಭಾಗದ ಸಹಾಯಕ ಆಯುಕ್ತ ಮುಹಮ್ಮದ್ ಶಕೀಲ್ ಅವರನ್ನು ಕಲಬುರಗಿ ವಿಶ್ವವಿದ್ಯಾಲಯದ ಕುಲಸಚಿವ (ಆಡಳಿತ)ರನ್ನಾಗಿ ಹಾಗೂ ಸವಣೂರು ಉಪ ವಿಭಾಗದ ಸಹಾಯಕ ಆಯುಕ್ತ ವಿಜಯಕುಮಾರ್ ಎಚ್.ಬಿ. ಅವರನ್ನು ಗ್ರೇಟರ್ ಬೆಂಗಳೂರು ಪ್ರಾಧಿಕಾರದ ಸಹಾಯಕ ಆಯುಕ್ತ (ಚುನಾವಣೆ)ರನ್ನಾಗಿ ವರ್ಗಾಯಿಸಲಾಗಿದೆ.

