ಕಾರವಾರ: ಕಾರವಾರ ನಗರಸಭೆ ವ್ಯಾಪ್ತಿಯಲ್ಲಿದ್ದರೂ ಮೂಲಸೌಕರ್ಯಗಳ ಕೊರತೆಯಿಂದ ಹಲವು ವರ್ಷಗಳಿಂದ ಸಂಕಷ್ಟ ಎದುರಿಸುತ್ತಿರುವ ಗುಡ್ಡಳ್ಳಿ ಗ್ರಾಮಕ್ಕೆ ರಸ್ತೆ ಸಂಪರ್ಕ ಸೇರಿದಂತೆ ಅಗತ್ಯ ಸೌಲಭ್ಯ ಕಲ್ಪಿಸಲು ಸಮಗ್ರ ಯೋಜನೆ ರೂಪಿಸುವಂತೆ ಉಪಲೋಕಾಯುಕ್ತ ನ್ಯಾಯಮೂರ್ತಿ ಕೆ.ಎನ್.ಫಣೀಂದ್ರ ಅಧಿಕಾರಿಗಳಿಗೆ ಸೂಚಿಸಿದರು.
ಗುಡ್ಡಳ್ಳಿಗೆ ಖುದ್ದು ಭೇಟಿ ನೀಡಿ, ಗ್ರಾಮಸ್ಥರೊಂದಿಗೆ ಸಮಾಲೋಚನೆ ನಡೆಸಿದ ಅವರು, ರಸ್ತೆ, ಕುಡಿಯುವ ನೀರು, ಶಿಕ್ಷಣ, ಆರೋಗ್ಯ ಹಾಗೂ ಆಸ್ತಿ ಹಕ್ಕುಪತ್ರ ಸೇರಿದಂತೆ ವಿವಿಧ ಸಮಸ್ಯೆಗಳನ್ನು ಆಲಿಸಿದರು.
ಗುಡ್ಡಳ್ಳಿಗೆ ರಸ್ತೆ ಸಂಪರ್ಕ ಕಲ್ಪಿಸುವುದು ಗ್ರಾಮಸ್ಥರ ಹಲವು ವರ್ಷಗಳ ಪ್ರಮುಖ ಬೇಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಲೋಕೋಪಯೋಗಿ ಇಲಾಖೆ, ಅರಣ್ಯ ಇಲಾಖೆ ಹಾಗೂ ನಗರಸಭೆ ಅಧಿಕಾರಿಗಳು ಸಮನ್ವಯದಿಂದ ರಸ್ತೆ ನಿರ್ಮಾಣದ ಯೋಜನೆ ಸಿದ್ಧಪಡಿಸಬೇಕು. ಅಂದಾಜು ವೆಚ್ಚದ ವಿವರದೊಂದಿಗೆ 15 ದಿನಗಳೊಳಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಿ, ಅದರ ಪ್ರತಿಯನ್ನು ಲೋಕಾಯುಕ್ತ ಸಂಸ್ಥೆಗೂ ನೀಡಬೇಕು ಎಂದರು.
ಗುಡ್ಡಳ್ಳಿಯ ಸಮಸ್ಯೆ ಕುರಿತು ಲೋಕಾಯುಕ್ತ ಸಂಸ್ಥೆಯಲ್ಲಿ ಸ್ವಯಂಪ್ರೇರಿತ ಪ್ರಕರಣ ದಾಖಲಿಸಿಕೊಂಡು, ಗ್ರಾಮದ ಸಮಗ್ರ ಅಭಿವೃದ್ಧಿಗೆ ಅಗತ್ಯ ಕ್ರಮಗಳ ಕುರಿತು ಸರ್ಕಾರಕ್ಕೆ ವರದಿ ಸಲ್ಲಿಸಲಾಗುವುದು. ಅಗತ್ಯವಿದ್ದಲ್ಲಿ ಮುಖ್ಯಮಂತ್ರಿಗಳೊಂದಿಗೆ ನೇರವಾಗಿ ಚರ್ಚಿಸಿ, ಗ್ರಾಮಸ್ಥರ ಸಮಸ್ಯೆಗೆ ಶಾಶ್ವತ ಪರಿಹಾರ ಕಲ್ಪಿಸಲು ಪ್ರಯತ್ನಿಸಲಾಗುವುದು ಎಂದು ಅವರು ತಿಳಿಸಿದರು.

ಮಕ್ಕಳಿಗೆ ವಾಹನ ವ್ಯವಸ್ಥೆಗೆ ಸೂಚನೆ
ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಲು ಪ್ರತ್ಯೇಕ ಯೋಜನೆ ರೂಪಿಸುವಂತೆ ಸೂಚಿಸಿದ ಅವರು, ಗುಡ್ಡಳ್ಳಿಯ ಮಕ್ಕಳು ಪ್ರತಿದಿನ ಶಿಕ್ಷಣಕ್ಕಾಗಿ ಕಡಿದಾದ ರಸ್ತೆಯಲ್ಲಿ ಅರಣ್ಯ ಪ್ರದೇಶದ ಮೂಲಕ 8 ಕಿ.ಮೀ.ಗೂ ಹೆಚ್ಚು ದೂರ ಸಂಚರಿಸಬೇಕಾಗಿದೆ. ಹೀಗಾಗಿ ಮಕ್ಕಳ ಅನುಕೂಲಕ್ಕಾಗಿ ನಗರಸಭೆಯಿಂದ ಅಗತ್ಯ ವಾಹನ ವ್ಯವಸ್ಥೆ ಕಲ್ಪಿಸುವಂತೆ ಸೂಚಿಸಿದರು.
ಆರೋಗ್ಯ ಸೇವೆಯೂ ಸಮರ್ಪಕವಾಗಿ ದೊರೆಯುವಂತೆ ತಿಂಗಳಿಗೊಮ್ಮೆ ಆರೋಗ್ಯ ಇಲಾಖೆ ಅಧಿಕಾರಿಗಳು ಗ್ರಾಮಕ್ಕೆ ಭೇಟಿ ನೀಡಿ ಆರೋಗ್ಯ ತಪಾಸಣೆ ನಡೆಸಬೇಕು ಎಂದರು.
ಶಾಲೆ, ಅಂಗನವಾಡಿ ನಿರ್ಮಾಣ
ಗುಡ್ಡಳ್ಳಿಯಲ್ಲಿ ಹೊಸ ಶಾಲೆ ಹಾಗೂ ಅಂಗನವಾಡಿ ಕಟ್ಟಡ ನಿರ್ಮಿಸುವ ಅಗತ್ಯವಿದ್ದು, ಈ ಕುರಿತು ಶಿಕ್ಷಣ ಇಲಾಖೆ ಮತ್ತು ಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ಅಲ್ಲಿಯವರೆಗೆ ಪ್ರಸ್ತುತ ಇರುವ ಶಾಲಾ ಕಟ್ಟಡದಲ್ಲಿ ಅಗತ್ಯ ದುರಸ್ತಿ ಕಾರ್ಯಗಳನ್ನು ಕೈಗೊಳ್ಳುವಂತೆ ತಿಳಿಸಿದರು.
ಗ್ರಾಮಸ್ಥರ ಮತ್ತೊಂದು ಪ್ರಮುಖ ಸಮಸ್ಯೆಯಾಗಿರುವ ಆಸ್ತಿ ಹಕ್ಕುಪತ್ರಕ್ಕೆ ಸಂಬಂಧಿಸಿದ ಸಮಸ್ಯೆಯನ್ನು ಶೀಘ್ರವಾಗಿ ಬಗೆಹರಿಸುವಂತೆಯೂ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಅಧಿಕೃತ ವಾಹನ ಬಿಟ್ಟು ಜೀಪ್ನಲ್ಲಿ ಗ್ರಾಮಕ್ಕೆ ಭೇಟಿ
ಗುಡ್ಡಳ್ಳಿಗೆ ಸಂಪರ್ಕ ಕಲ್ಪಿಸುವ ಅತ್ಯಂತ ಕಡಿದಾದ ರಸ್ತೆಯಲ್ಲಿ ಸಂಚರಿಸಿ ಗ್ರಾಮಸ್ಥರ ಸಮಸ್ಯೆಗಳನ್ನು ನೇರವಾಗಿ ಪರಿಶೀಲಿಸುವ ಉದ್ದೇಶದಿಂದ ಉಪಲೋಕಾಯುಕ್ತರು ತಮ್ಮ ಅಧಿಕೃತ ವಾಹನವನ್ನು ಬಿಟ್ಟು ಸಾಮಾನ್ಯ ಜೀಪ್ನಲ್ಲಿ ಗುಡ್ಡ ಏರಿ ಗ್ರಾಮಕ್ಕೆ ತೆರಳಿದರು.
ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ದಿವ್ಯಶ್ರೀ ಸಿ.ಎಂ., ಅಪರ ಜಿಲ್ಲಾಧಿಕಾರಿ ಸಾಜಿದ್ ಮುಲ್ಲಾ, ಉಪಲೋಕಾಯುಕ್ತರ ಆಪ್ತ ಕಾರ್ಯದರ್ಶಿ ಕಿರಣ್ ಪಾಟೀಲ್, ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಬಿ.ಪಿ.ದಿನೇಶ್ ಕುಮಾರ್, ಡಿವೈಎಸ್ಪಿ ಧನ್ಯಾ ನಾಯ್ಕ, ನಗರಸಭೆ ಪೌರಾಯುಕ್ತ ಜಗದೀಶ್ ಹುಲಗಜ್ಜಿ ಹಾಗೂ ಗುಡ್ಡಳ್ಳಿ ಗ್ರಾಮಸ್ಥರು ಇದ್ದರು.
What do you feel about this post?
Like
Love
Happy
Haha
Sad




