ಮಂಗಳೂರು: ಕನ್ನಡ ನಾಡು-ನುಡಿ, ಸಂಸ್ಕೃತಿ, ಕಲೆ, ಸಾಹಿತ್ಯ, ವಿಜ್ಞಾನ ಹಾಗೂ ಯುವ ಪ್ರತಿಭೆಗಳಿಗೆ ವೇದಿಕೆಯಾಗಿರುವ ಆಳ್ವಾಸ್ ನುಡಿಸಿರಿ–ವಿರಾಸತ್ 2027 ಈ ಬಾರಿ ಮತ್ತಷ್ಟು ವೈವಿಧ್ಯಮಯ ಕಾರ್ಯಕ್ರಮಗಳೊಂದಿಗೆ ನಡೆಯಲಿದೆ. ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಆಶ್ರಯದಲ್ಲಿ ಜನವರಿ 6ರಿಂದ 10ರವರೆಗೆ ಐದು ದಿನಗಳ ಕಾಲ ಮೂಡುಬಿದಿರೆಯಲ್ಲಿ ಮಹೋತ್ಸವ ನಡೆಯಲಿದ್ದು, ಕನ್ನಡ ನಾಡು-ನುಡಿ ಮತ್ತು ಸಂಸ್ಕೃತಿಯ ರಾಷ್ಟ್ರೀಯ ಸಮ್ಮೇಳನ ‘ಆಳ್ವಾಸ್ ನುಡಿಸಿರಿ’ ಜನವರಿ 7ರಂದು ಉದ್ಘಾಟನೆಗೊಂಡು ಜನವರಿ 9ರಂದು ಸಮಾಪನಗೊಳ್ಳಲಿದೆ ಎಂದು ಗುರುವಾರ ಸುದ್ದಿಗೋಷ್ಠಿಯಲ್ಲಿ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರು ತಿಳಿಸಿದರು.
ಈ ಬಾರಿಯ ಆಳ್ವಾಸ್ ನುಡಿಸಿರಿಯ ಮುಖ್ಯ ಪರಿಕಲ್ಪನೆ ‘ಕನ್ನಡ ಮನಸ್ಸು : ಭವಿಷ್ಯದ ಕನಸು’. ಬದಲಾಗುತ್ತಿರುವ ಸಮಾಜದಲ್ಲಿ ಜ್ಞಾನ, ವಿಜ್ಞಾನ ಮತ್ತು ತಂತ್ರಜ್ಞಾನವನ್ನು ಸಮರ್ಪಕವಾಗಿ ಬಳಸಿಕೊಂಡು ಕನ್ನಡ ನಾಡು-ನುಡಿ ಹಾಗೂ ಸಂಸ್ಕೃತಿಯ ಅಸ್ಮಿತೆಯೊಂದಿಗೆ ಕರ್ನಾಟಕದ ಭವಿಷ್ಯವನ್ನು ಕಟ್ಟುವ ಸಂಕಲ್ಪವನ್ನು ಈ ಪರಿಕಲ್ಪನೆ ಹೊಂದಿದೆ. ಯುವಜನರನ್ನು ಕೇಂದ್ರವಾಗಿಟ್ಟುಕೊಂಡು ಕಾರ್ಯಕ್ರಮಗಳನ್ನು ರೂಪಿಸಲಾಗಿದೆ ಎಂದರು.
ನರಹಳ್ಳಿ ಬಾಲಸುಬ್ರಹ್ಮಣ್ಯ ಸರ್ವಾಧ್ಯಕ್ಷ
ಕನ್ನಡದ ಪ್ರಮುಖ ವಿಮರ್ಶಕ, ಸಾಹಿತಿ ಹಾಗೂ ವಿದ್ವಾಂಸ ಡಾ. ನರಹಳ್ಳಿ ಬಾಲಸುಬ್ರಹ್ಮಣ್ಯ ಅವರು ಆಳ್ವಾಸ್ ನುಡಿಸಿರಿ–2027ರ ಸರ್ವಾಧ್ಯಕ್ಷರಾಗಿ ಆಯ್ಕೆಯಾಗಿದ್ದಾರೆ. ಕನ್ನಡ ವಿಮರ್ಶಾ ಕ್ಷೇತ್ರದಲ್ಲಿ ತಮ್ಮದೇ ಆದ ವಿಶಿಷ್ಟ ಛಾಪು ಮೂಡಿಸಿರುವ ಅವರು ಹಲವು ವಿಮರ್ಶಾ ಕೃತಿಗಳು, ಪ್ರಬಂಧ ಸಂಕಲನಗಳು, ಅನುವಾದಿತ ಕೃತಿಗಳು ಹಾಗೂ ಸಂಪಾದಿತ ಕೃತಿಗಳನ್ನು ಪ್ರಕಟಿಸಿದ್ದಾರೆ ಎಂದರು.
ಶೇಷಾದ್ರಿಪುರಂ ಕಾಲೇಜಿನ ಕನ್ನಡ ವಿಭಾಗದಲ್ಲಿ ಪ್ರಾಧ್ಯಾಪಕ, ವಿಭಾಗದ ಮುಖ್ಯಸ್ಥ ಹಾಗೂ ಪ್ರಾಂಶುಪಾಲರಾಗಿ ಸೇವೆ ಸಲ್ಲಿಸಿರುವ ನರಹಳ್ಳಿ ಬಾಲಸುಬ್ರಹ್ಮಣ್ಯ ಅವರಿಗೆ ವಿವಿಧ ಪ್ರತಿಷ್ಠಿತ ಪ್ರಶಸ್ತಿಗಳು ಲಭಿಸಿವೆ. ಆಳ್ವಾಸ್ ನುಡಿಸಿರಿ–2027ರ ಸರ್ವಾಧ್ಯಕ್ಷ ಸ್ಥಾನವನ್ನು ಅವರು ಅಲಂಕರಿಸುತ್ತಿರುವುದು ಕನ್ನಡ ಸಾಹಿತ್ಯ ವಲಯದಲ್ಲಿ ವಿಶೇಷ ಗಮನ ಸೆಳೆದಿದೆ ಎಂದರು.

ವಿಶ್ವೇಶ್ವರ ಭಟ್‌ರಿಂದ ನುಡಿಸಿರಿ ಉದ್ಘಾಟನೆ
ಹಿರಿಯ ಪತ್ರಕರ್ತ, ಚಿಂತಕ, ಅಂಕಣಕಾರ ಹಾಗೂ ವಿಶ್ವವಾಣಿ ದಿನಪತ್ರಿಕೆಯ ಪ್ರಧಾನ ಸಂಪಾದಕ ವಿಶ್ವೇಶ್ವರ ಭಟ್ ಅವರು ಆಳ್ವಾಸ್ ನುಡಿಸಿರಿ–2027ನ್ನು ಉದ್ಘಾಟಿಸಲಿದ್ದಾರೆ. ಆಳ್ವಾಸ್ ವಿರಾಸತ್–2027ರ ಉದ್ಘಾಟನಾ ಸಮಾರಂಭ ಜನವರಿ 6ರಂದು ಸಂಜೆ ನಡೆಯಲಿದೆ. ವೇದಘೋಷ, ಭಜನೆ, ಪುಷ್ಪಪಲ್ಲಕ್ಕಿ ಮತ್ತು ಮಂಗಳವಾದ್ಯಗಳೊಂದಿಗೆ ಸಾಂಸ್ಕೃತಿಕ ರಥದ ಮೆರವಣಿಗೆ ನಡೆಯಲಿದ್ದು, ಭಾರತೀಯ ಸಂಸ್ಕೃತಿಯ ವೈವಿಧ್ಯಮಯ ಪರಂಪರೆಗಳು ಅನಾವರಣಗೊಳ್ಳಲಿವೆ ಎಂದರು.
ಹರಿದ್ವಾರದಿಂದ ಆಗಮಿಸುವ ಗಂಗಾರತಿ ತಂಡವು ಮಂತ್ರಘೋಷ ಹಾಗೂ ಸಾಂಪ್ರದಾಯಿಕ ವಿಧಿವಿಧಾನಗಳೊಂದಿಗೆ ರಥಾರತಿಯನ್ನು ನೆರವೇರಿಸಲಿದೆ. ಇದೇ ಸಂದರ್ಭದಲ್ಲಿ ಶಾಸ್ತ್ರೀಯ ಮತ್ತು ಜನಪದ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಇಬ್ಬರು ಸಾಧಕರಿಗೆ ‘ಆಳ್ವಾಸ್ ವಿರಾಸತ್ ಪ್ರಶಸ್ತಿ’ ಪ್ರದಾನ ಮಾಡಲಾಗುವುದು. ಜನವರಿ 6ರಿಂದ ಪ್ರತಿದಿನ ಸಂಜೆ 6ರಿಂದ ರಾತ್ರಿ 10ರವರೆಗೆ ಸಂಗೀತ, ನೃತ್ಯ, ಶಾಸ್ತ್ರೀಯ ಮತ್ತು ಜಾನಪದ ಕಲಾ ಕಾರ್ಯಕ್ರಮಗಳು ನಡೆಯಲಿವೆ ಎಂದರು.
50ಕ್ಕೂ ಅಧಿಕ ಗ್ರಾಮಗಳಲ್ಲಿ ‘ಹಸಿರು ಸಂವಾದ’
ಆಳ್ವಾಸ್ ನುಡಿಸಿರಿ–ವಿರಾಸತ್‌ನ ಅಂಗವಾಗಿ ಜನವರಿ 6 ಮತ್ತು 7ರಂದು ‘ಹಸಿರು ಸಂವಾದ’ ರಾಷ್ಟ್ರೀಯ ಸಮ್ಮೇಳನ ನಡೆಯಲಿದೆ. ಕರಾವಳಿ ಪರಿಸರ ಸಂರಕ್ಷಣೆ, ವೈಜ್ಞಾನಿಕ ತ್ಯಾಜ್ಯ ನಿರ್ವಹಣೆ ಮತ್ತು ಸಮುದಾಯದ ಸಹಭಾಗಿತ್ವದ ಮೂಲಕ ಸುಸ್ಥಿರ ಪರಿಸರ ವ್ಯವಸ್ಥೆ ರೂಪಿಸುವ ಉದ್ದೇಶ ಈ ಕಾರ್ಯಕ್ರಮದ್ದಾಗಿದೆ ಎಂದರು.
ಪಾವಂಜೆ, ನಂದಿನಿ ಹಾಗೂ ಶಾಂಭವಿ ನದಿಗಳ ಜಲಾನಯನ ಪ್ರದೇಶದ 50ಕ್ಕೂ ಅಧಿಕ ಗ್ರಾಮಗಳನ್ನು ಯೋಜನೆಗೆ ಆಯ್ಕೆ ಮಾಡಲಾಗಿದೆ. ಗ್ರಾಮಮಟ್ಟದಲ್ಲಿಯೇ ತ್ಯಾಜ್ಯ ವಿಂಗಡಣೆ, ಸಂಗ್ರಹ, ವೈಜ್ಞಾನಿಕ ಸಂಸ್ಕರಣೆ ಮತ್ತು ಮರುಬಳಕೆಯ ವ್ಯವಸ್ಥೆ ರೂಪಿಸುವ ಪ್ರಯತ್ನ ನಡೆಯುತ್ತಿದೆ. ಶಾಲಾ-ಕಾಲೇಜು ವಿದ್ಯಾರ್ಥಿಗಳನ್ನು ಪರಿಸರ ಸಂರಕ್ಷಣೆಯಲ್ಲಿ ತೊಡಗಿಸಿಕೊಳ್ಳಲು ‘ಚೋಟಾ ಕಾಪ್’ ಯೋಜನೆ ರೂಪಿಸಲಾಗಿದ್ದು, ಯುವಜನರ ಪರಿಸರ ಸ್ನೇಹಿ ಆಲೋಚನೆಗಳಿಗೆ ಉತ್ತೇಜನ ನೀಡಲು ಐಡಿಯಾಥಾನ್ ಆಯೋಜಿಸಲಾಗುತ್ತಿದೆ. ಆಯ್ಕೆಯಾಗುವ ಆವಿಷ್ಕಾರಗಳಿಗೆ ಅಭಿವೃದ್ಧಿ ನಿಧಿಯ ನೆರವು ನೀಡಲಾಗುವುದು ಎಂದರು.
5 ಸಾವಿರಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್ ಭಾಗಿ
ಆಳ್ವಾಸ್ ನುಡಿಸಿರಿ–ವಿರಾಸತ್ 2027ರ ಮತ್ತೊಂದು ಪ್ರಮುಖ ಆಕರ್ಷಣೆಯಾಗಿ ಭಾರತ್ ಸ್ಕೌಟ್ಸ್ ಆ್ಯಂಡ್ ಗೈಡ್ಸ್ ರಾಜ್ಯಮಟ್ಟದ ಸಾಂಸ್ಕೃತಿಕ ಜಂಬೂರಿ ನಡೆಯಲಿದೆ. ರಾಜ್ಯದ ವಿವಿಧ ಜಿಲ್ಲೆಗಳಿಂದ 5,000ಕ್ಕೂ ಅಧಿಕ ಸ್ಕೌಟ್ಸ್, ಗೈಡ್ಸ್, ರೋವರ್ಸ್ ಮತ್ತು ರೇಂಜರ್ಸ್ ಭಾಗವಹಿಸಲಿದ್ದಾರೆ. ಯೋಗ, ಸ್ವಚ್ಛತೆ, ದೇಶಪ್ರೇಮ, ಸೇವಾ ಮನೋಭಾವ, ಕ್ರೀಡಾಸ್ಫೂರ್ತಿ, ಪರಿಸರ ಸಂರಕ್ಷಣೆ ಮತ್ತು ಶಿಸ್ತು ಸೇರಿದಂತೆ ಹಲವು ವಿಷಯಗಳ ಕುರಿತು ಪ್ರಾಯೋಗಿಕ ತರಬೇತಿ ನೀಡಲಾಗುವುದು ಎಂದರು.
800 ವಿದ್ಯಾರ್ಥಿ ಕಲಾವಿದರಿಗೆ ಉಚಿತ ತರಬೇತಿ
ದೇಶೀಯ ಕಲೆಗಳಿಗೆ ಉತ್ತೇಜನ ನೀಡುವ ಉದ್ದೇಶದಿಂದ 800 ವಿದ್ಯಾರ್ಥಿ ಕಲಾವಿದರಿಗೆ ಉಚಿತ ತರಬೇತಿ ಕಾರ್ಯಾಗಾರ ಆಯೋಜಿಸಲಾಗಿದೆ. ಶಾಸ್ತ್ರೀಯ ನೃತ್ಯ, ಸಂಗೀತ, ಪಕ್ಕವಾದ್ಯ ಮತ್ತು ಏಕವ್ಯಕ್ತಿ ಪ್ರದರ್ಶನ ಸೇರಿದಂತೆ ವಿವಿಧ ಕಲಾ ಪ್ರಕಾರಗಳಲ್ಲಿ ತರಬೇತಿ ಪಡೆಯುತ್ತಿರುವ ಕಲಾವಿದರು ಇದರಲ್ಲಿ ಭಾಗವಹಿಸಬಹುದಾಗಿದೆ. 30 ವರ್ಷದೊಳಗಿನ ವಿದ್ಯಾರ್ಥಿ ಕಲಾವಿದರು ಹಾಗೂ ಹವ್ಯಾಸಿ ಕಲಾವಿದರಿಗೆ ಅವಕಾಶ ಕಲ್ಪಿಸಲಾಗಿದ್ದು, ಅನುಭವಿ ಕಲಾವಿದರಿಂದ ಮಾರ್ಗದರ್ಶನ ಪಡೆಯುವ ಮೂಲಕ ಯುವ ಪ್ರತಿಭೆಗಳನ್ನು ಬೆಳೆಸುವುದು ಕಾರ್ಯಾಗಾರದ ಉದ್ದೇಶ ಎಂದರು.
ಜ.8ರಂದು ವಿದ್ಯಾರ್ಥಿಸಿರಿ, ಜ.9ರಂದು ಮೊದಲ ‘ಯುವಸಿರಿ’
ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಿಗಾಗಿ ಜನವರಿ 8ರಂದು ‘ಆಳ್ವಾಸ್ ವಿದ್ಯಾರ್ಥಿಸಿರಿ’ ಒಂದು ದಿನದ ಸಮ್ಮೇಳನ ನಡೆಯಲಿದೆ. ವಿದ್ಯಾರ್ಥಿಗಳ ಜ್ಞಾನ, ಪ್ರತಿಭೆ ಮತ್ತು ಸೃಜನಶೀಲತೆಗೆ ವೇದಿಕೆ ಕಲ್ಪಿಸುವುದು ಇದರ ಉದ್ದೇಶ. ಇದೇ ಮೊದಲ ಬಾರಿಗೆ ಜನವರಿ 9ರಂದು ‘ಆಳ್ವಾಸ್ ಯುವಸಿರಿ’ ಆಯೋಜಿಸಲಾಗುತ್ತಿದೆ. ಪದವಿ, ಸ್ನಾತಕೋತ್ತರ ಹಾಗೂ ವಿವಿಧ ಕ್ಷೇತ್ರಗಳ ಯುವಜನರನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸಿ, ಅವರ ಚಿಂತನೆ, ಪ್ರತಿಭೆ ಮತ್ತು ಕನಸುಗಳಿಗೆ ಸ್ಪಂದಿಸುವ ಸಮ್ಮೇಳನವಾಗಿ ಇದನ್ನು ರೂಪಿಸಲಾಗಿದೆ ಎಂದರು.
ಕೃಷಿ, ವಿಜ್ಞಾನ, ಆಹಾರ, ಪುಸ್ತಕ ಮತ್ತು ಕಲಾ ಮೇಳ
ನುಡಿಸಿರಿ–ವಿರಾಸತ್‌ನ ಭಾಗವಾಗಿ ಕೃಷಿಮೇಳ, ವಿಜ್ಞಾನ ಮೇಳ, ಆಹಾರ ಮೇಳ, ಪುಸ್ತಕ ಮೇಳ ಹಾಗೂ ಕಲಾ ಮೇಳಗಳು ನಡೆಯಲಿವೆ. ಕೃಷಿಮೇಳದಲ್ಲಿ ಆಧುನಿಕ ಕೃಷಿ ಪದ್ಧತಿ, ಕೃಷಿ ತಂತ್ರಜ್ಞಾನ, ವಿವಿಧ ಬೆಳೆಗಳು ಮತ್ತು ಕೃಷಿ ಉತ್ಪನ್ನಗಳ ಪರಿಚಯ ಇರಲಿದೆ. ವಿಜ್ಞಾನ ಮೇಳದಲ್ಲಿ ನವೀನ ಆವಿಷ್ಕಾರಗಳು ಹಾಗೂ ವಿದ್ಯಾರ್ಥಿಗಳ ಸೃಜನಶೀಲ ಪ್ರಯತ್ನಗಳು ಪ್ರದರ್ಶನಗೊಳ್ಳಲಿವೆ ಎಂದರು.
ಆಹಾರ ಮೇಳದಲ್ಲಿ ಕರ್ನಾಟಕದ ವಿವಿಧ ಭಾಗಗಳ ಸ್ಥಳೀಯ ಮತ್ತು ಸಾಂಪ್ರದಾಯಿಕ ಆಹಾರ ಸಂಸ್ಕೃತಿಯ ಪರಿಚಯವಾಗಲಿದ್ದು, ಪುಸ್ತಕ ಮೇಳದಲ್ಲಿ ಸಾಹಿತ್ಯ, ಸಂಸ್ಕೃತಿ, ಇತಿಹಾಸ ಮತ್ತು ವಿಜ್ಞಾನ ಸೇರಿದಂತೆ ವಿವಿಧ ವಿಷಯಗಳ ಪುಸ್ತಕಗಳ ಪ್ರದರ್ಶನ ಹಾಗೂ ಮಾರಾಟ ನಡೆಯಲಿದೆ. ಕಲಾ ಮೇಳದಲ್ಲಿ ಚಿತ್ರಕಲೆ, ಕರಕುಶಲ ಮತ್ತು ಸಾಂಪ್ರದಾಯಿಕ ಕಲೆಗಳ ಪ್ರದರ್ಶನ ಇರಲಿದೆ ಎಂದರು.
ಪ್ರತಿನಿಧಿಗಳ ನೋಂದಣಿಗೆ ಅವಕಾಶ
ಆಳ್ವಾಸ್ ನುಡಿಸಿರಿ–ವಿರಾಸತ್ 2027ರಲ್ಲಿ ಪ್ರತಿನಿಧಿಯಾಗಿ ಭಾಗವಹಿಸಲು ಆಸಕ್ತಿ ಹೊಂದಿರುವವರು ಐದು ದಿನಗಳಿಗಾಗಿ ರೂ.500 ಪ್ರತಿನಿಧಿ ಶುಲ್ಕ ಪಾವತಿಸಿ ನೋಂದಣಿ ಮಾಡಿಕೊಳ್ಳಬಹುದು. ಸಾಹಿತ್ಯ, ಕಲೆ, ಸಂಸ್ಕೃತಿ ಮತ್ತು ಜ್ಞಾನಪರ ಕಾರ್ಯಕ್ರಮಗಳ ಈ ಮಹೋತ್ಸವದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಪ್ರತಿನಿಧಿಗಳು ಪಾಲ್ಗೊಳ್ಳುವಂತೆ ಆಯೋಜಕರು ಮನವಿ ಮಾಡಿದ್ದಾರೆ ಎಂದರು.
ನುಡಿಸಿರಿ–ವಿರಾಸತ್ ಕಾರ್ಯದರ್ಶಿ ವೇಣುಗೋಪಾಲ ಶೆಟ್ಟಿ ಹಾಗೂ ನುಡಿಸಿರಿ–ವಿರಾಸತ್ ಕಾರ್ಯಕಾರಿ ಸಮಿತಿ ಸದಸ್ಯ ಪ್ರಸಾದ್ ಶೆಟ್ಟಿ ಇದ್ದರು.
What do you feel about this post?
Like
Love
Happy
Haha
Sad


