ಮೂಡುಬಿದಿರೆ: ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಆಯೋಜಿಸುವ ರಾಷ್ಟ್ರಮಟ್ಟದ ಸಾಹಿತ್ಯ ಮತ್ತು ಸಾಂಸ್ಕೃತಿಕ ಉತ್ಸವ ಆಳ್ವಾಸ್ ನುಡಿಸಿರಿ–ವಿರಾಸತ್ ಅನ್ನು ಮುಂಬರುವ ವರ್ಷದ ಜನವರಿಯಲ್ಲಿ ಅದ್ದೂರಿಯಾಗಿ ಆಯೋಜಿಸಲು ತೀರ್ಮಾನಿಸಲಾಗಿದೆ. ಈ ಬಾರಿ ನುಡಿಸಿರಿ ಮತ್ತು ವಿರಾಸತ್ ಉತ್ಸವಗಳನ್ನು ಒಂದೇ ವೇದಿಕೆಯಲ್ಲಿ ನಡೆಸುವ ಮೂಲಕ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯ ವಿಶಿಷ್ಟ ಸಂಗಮಕ್ಕೆ ವೇದಿಕೆ ಕಲ್ಪಿಸಲಾಗುತ್ತಿದೆ.
ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ ಆಳ್ವ ಅವರ ಸ್ವಗೃಹದಲ್ಲಿ ನಡೆದ ಪ್ರಾಥಮಿಕ ಸಮಾಲೋಚನಾ ಸಭೆಯಲ್ಲಿ ಉತ್ಸವದ ರೂಪುರೇಷೆಗಳ ಕುರಿತು ಸುದೀರ್ಘ ಚರ್ಚೆ ನಡೆಯಿತು.
ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ, ಪ್ರತಿವರ್ಷ ಹೊಸ ಪರಿಕಲ್ಪನೆಗಳು ಮತ್ತು ಹೊಸ ತಲೆಮಾರಿನ ಭಾಗವಹಿಸುವಿಕೆಗೆ ಆದ್ಯತೆ ನೀಡುತ್ತಾ ಉತ್ಸವವನ್ನು ವಿಸ್ತರಿಸಲಾಗುತ್ತಿದೆ ಎಂದರು. ಜನವರಿಯಲ್ಲಿ ನಡೆಯಲಿರುವ ಉತ್ಸವದಲ್ಲಿ ಸಾಂಸ್ಕೃತಿಕ ಶ್ರೀಮಂತಿಕೆಯ ಅನಾವರಣದ ಜೊತೆಗೆ ಯುವಜನತೆ, ಕನ್ನಡದ ಭವಿಷ್ಯ, ದೇಶೀಯತೆ, ಪರಿಸರ ಸಂರಕ್ಷಣೆ ಹಾಗೂ ಸಹಬಾಳ್ವೆಯಂತಹ ಸಮಕಾಲೀನ ವಿಷಯಗಳ ಕುರಿತು ಗಂಭೀರ ಚರ್ಚೆಗಳಿಗೆ ಅವಕಾಶ ಕಲ್ಪಿಸಲಾಗುವುದು ಎಂದರು.
ಹಿರಿಯ ಸಾಹಿತಿ ಪಾದೆಕಲ್ಲು ವಿಷ್ಣು ಭಟ್ ಅವರು ಮಾತನಾಡಿ, ಪ್ರಜಾಪ್ರಭುತ್ವದ ಮೌಲ್ಯಗಳು, ಸಹಿಷ್ಣುತೆ ಹಾಗೂ ವೈಚಾರಿಕತೆಯನ್ನು ಬೆಳೆಸುವ ವೇದಿಕೆಯಾಗಿ ನುಡಿಸಿರಿ ರೂಪುಗೊಂಡಿದೆ ಎಂದು ಹೇಳಿದರು. ಹೊಸ ವಿಚಾರಗಳು, ಹೊಸ ತಲೆಮಾರಿನ ಭಾಗವಹಿಸುವಿಕೆ ಮತ್ತು ಸಮಾಜಮುಖಿ ಕಾರ್ಯಕ್ರಮಗಳಿಗೆ ಹೆಚ್ಚಿನ ಆದ್ಯತೆ ನೀಡುವ ಮೂಲಕ ನುಡಿಸಿರಿ ಇನ್ನಷ್ಟು ಜನಮುಖಿಯಾಗಿ ಬೆಳೆಯಲಿ ಎಂದು ಆಶಿಸಿದರು.
ಪ್ರಾಧ್ಯಾಪಕ ಡಾ. ಧನಂಜಯ ಕುಂಬ್ಳೆ ಅವರು ಮಾತನಾಡಿ, ಡಾ. ಮೋಹನ ಆಳ್ವ ಅವರು ಶಿಕ್ಷಣ ಕ್ಷೇತ್ರದ ಜೊತೆಗೆ ಕನ್ನಡ ಸಾಹಿತ್ಯ, ಕಲೆ ಮತ್ತು ಸಂಸ್ಕೃತಿಯನ್ನು ಜನಸಾಮಾನ್ಯರಿಗೆ ತಲುಪಿಸುವ ಮಹತ್ವದ ಕಾರ್ಯವನ್ನು ನಿರಂತರವಾಗಿ ಮಾಡುತ್ತಿದ್ದಾರೆ ಎಂದು ಪ್ರಶಂಸಿಸಿದರು. ಈ ಬಾರಿಯ ನುಡಿಸಿರಿ–ವಿರಾಸತ್ ಉತ್ಸವ ಮತ್ತಷ್ಟು ವೈವಿಧ್ಯಮಯ ಹಾಗೂ ಯಶಸ್ವಿಯಾಗಲಿ ಎಂದರು.
ಸಭೆಯಲ್ಲಿ ಡಾ. ಎಂ.ಪಿ. ಶ್ರೀನಾಥ್, ಬಾಲಕೃಷ್ಣ ಶೆಟ್ಟಿ, ತುಕಾರಾಮ್ ಪೂಜಾರಿ, ಶಕುಂತಲಾ ಶೆಟ್ಟಿ, ಸತ್ಯನಾರಾಯಣ ಮಲ್ಲಿಪಟ್ಣ, ವೇಣುಗೋಪಾಲ ಶೆಟ್ಟಿ ಸೇರಿದಂತೆ ವಿವಿಧ ಕ್ಷೇತ್ರಗಳ ಗಣ್ಯರು ಇದ್ದರು. ಡಾ. ಯೋಗೀಶ್ ಕೈರೋಡಿ ನಿರ್ವಹಿಸಿದರು.
What do you feel about this post?
Like
Love
Happy
Haha
Sad







