ಮಂಗಳೂರು: ಆರೋಗ್ಯ ಸೇವೆ ಪಡೆಯಲು ಲೇಡಿಗೋಷನ್ ಆಸ್ಪತ್ರೆಗೆ ಆಗಮಿಸುವ ಮಹಿಳೆಯರಿಗೆ ಶುದ್ಧ ಕುಡಿಯುವ ನೀರು ಲಭ್ಯವಾಗುವಂತೆ ಸಮಾಜ ಸೇವಾ ಚಿಂತಕ ಗೆಳೆಯರ ಬಳಗದ ಬೆಸ್ಟ್ ಫ್ರೆಂಡ್ಸ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಶುದ್ಧೀಕೃತ ಜಲ ಪೂರಣ ಉಪಕರಣವನ್ನು ಕೊಡುಗೆಯಾಗಿ ನೀಡಲಾಯಿತು.
ಆಸ್ಪತ್ರೆಯ ಹೊರರೋಗಿ ವಿಭಾಗದಲ್ಲಿ ಅಳವಡಿಸಲಾಗಿರುವ ಸುಮಾರು 80 ಲೀಟರ್ ಸಾಮರ್ಥ್ಯದ ತ್ರಿ-ಇನ್-ಒನ್ ಶುದ್ಧೀಕೃತ ಜಲ ಮರುಪೂರಣ ಉಪಕರಣವನ್ನು ಸಾರ್ವಜನಿಕರ ಬಳಕೆಗೆ ಸಮರ್ಪಿಸಲಾಯಿತು.
ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್ ಅವರು ಮಾತನಾಡಿ, ಇಂತಹ ಕ್ರಿಯಾತ್ಮಕ ಹಾಗೂ ಚಿಂತನಾತ್ಮಕ ಕೊಡುಗೆಗಳು ಮಹಿಳೆಯರ ಆರೋಗ್ಯ ಕಾಪಾಡುವಲ್ಲಿ ಮಹತ್ವದ ಪಾತ್ರ ವಹಿಸುತ್ತವೆ. ಸೋಂಕುರಹಿತ ಪರಿಶುದ್ಧ ನೀರು ಮಹಿಳೆಯರ ದೈಹಿಕ ಆರೋಗ್ಯ ಹಾಗೂ ಸಾಮರ್ಥ್ಯವನ್ನು ಹೆಚ್ಚಿಸುವುದರ ಜತೆಗೆ ಆತ್ಮಸ್ಥೈರ್ಯಕ್ಕೂ ನೆರವಾಗುತ್ತದೆ ಎಂದರು.
ಆರೋಗ್ಯ ಸೇವೆಗಾಗಿ ಆಸ್ಪತ್ರೆಗೆ ಬರುವ ಯಾವುದೇ ಮಹಿಳೆ ಮೂಲಭೂತ ಸೌಕರ್ಯಗಳಿಂದ ವಂಚಿತರಾಗಬಾರದು ಎಂಬ ಉದ್ದೇಶದಿಂದ ಈ ಕೊಡುಗೆ ನೀಡಲಾಗಿದೆ ಎಂದು ಟ್ರಸ್ಟ್ ಅಧ್ಯಕ್ಷ ಶಮೀಮ್ ಕುಟ್ಟಿಕಳ ಹೇಳಿದರು.
ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಶುಭ ಹಾರೈಸಿದರು. ಡಿಜಿಟಲ್ ಮಾದರಿಯ ನೂತನ ಉಪಕರಣವನ್ನು ಟ್ರಸ್ಟ್ ಅಧ್ಯಕ್ಷರು ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಅವರಿಗೆ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಹನೀಫ್ ಸಾಲೆತ್ತೂರು, ಶಕೀಲ್ ಹೈದರ್, ಹಬೀಬ್ ಉಳಾಯಿಬೆಟ್ಟು, ರಶೀದ್ ಗಡಿಯಾರ್, ಹಿರಿಯ ತಜ್ಞ ವೈದ್ಯ ಡಾ. ದಯಾನಂದ್, ಶುಶ್ರೂಷಾ ಅಧೀಕ್ಷಕಿ ಗೀತಾ ಹಾಗೂ ನರ್ಸಿಂಗ್ ಮೇಲ್ವಿಚಾರಕಿ ಮಲ್ಲಿಕಾ ಇದ್ದರು. ಶುಶ್ರೂಷಾಧಿಕಾರಿ ಸವಿತಾ ನಿರೂಪಿಸಿದರು.
What do you feel about this post?
Like
Love
Happy
Haha
Sad





