ಕಾರವಾರ: ನಿವೃತ್ತ ಚರ್ಮರೋಗ ತಜ್ಞರ ಹಾಗೂ ಕಾರವಾರ ಜಿಲ್ಲಾ ಆಸ್ಪತ್ರೆಯಲ್ಲಿ ಹಲವು ವರ್ಷಗಳ ಕಾಲ ನುರಿತ ವೈದ್ಯರಾಗಿ ಸೇವೆ ಸಲ್ಲಿಸಿದ್ದ ಡಾ. ಸುಭಾಷ್ ತಾಂಡೇಲ್ ಅವರು ಇದೇ 21 ರಂದು ರಾತ್ರಿ 9 ರಿಂದ 9.30ರ ವೇಳೆಗೆ ಮಾಜಾಳಿ ಸಮೀಪ ಸಂಭವಿಸಿದ ರಸ್ತೆ ಅಪಘಾತದಲ್ಲಿ ದುರಂತ ಸಾವು ಕಂಡಿರುವುದು ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಎಂದು ಜನಶಕ್ತಿ ವೇದಿಕೆ ಪ್ರಕಟಣೆಯಲ್ಲಿ ತಿಳಿಸಿದೆ.
ಗೋವಾದ ಕಡೆಯಿಂದ ಬೈಕ್ ನಲ್ಲಿ ಬರುತ್ತಿದ್ದ ಸಂದರ್ಭದಲ್ಲಿ ರಸ್ತೆಯಲ್ಲಿ ಮಲಗಿದ್ದ ಬಿಡಾಡಿ ದನಕ್ಕೆ ಡಿಕ್ಕಿ ಹೊಡೆದು ಈ ಘಟನೆ ಸಂಭವಿಸಿದೆ ಎಂದು ತಿಳಿದು ಬಂದಿದೆ. ಶಾಂತ ಸ್ವಭಾವದವರಾಗಿದ್ದ ಡಾ. ಸುಭಾಷ್ ತಾಂಡೇಲ್ ಅವರು ತಮ್ಮ ವೈದ್ಯಕೀಯ ಸೇವೆ ಹಾಗೂ ಸರಳ ವ್ಯಕ್ತಿತ್ವದಿಂದ ಜನರ ಪ್ರೀತಿ, ಗೌರವ ಗಳಿಸಿದ್ದರು. ಅವರ ನಿಧನದಿಂದ ಜಿಲ್ಲೆಯ ವೈದ್ಯಕೀಯ ಕ್ಷೇತ್ರಕ್ಕೆ ತುಂಬಲಾರದ ನಷ್ಟ ಉಂಟಾಗಿದೆ.
ಡಾ. ಸುಭಾಷ್ ತಾಂಡೇಲ್ ಅವರ ಅಕಾಲಿಕ ನಿಧನಕ್ಕೆ ಜನಶಕ್ತಿ ವೇದಿಕೆಯ ಜಿಲ್ಲಾ ಘಟಕದ ಅಧ್ಯಕ್ಷ ಮಾಧವ ನಾಯಕ ಹಾಗೂ ವೇದಿಕೆಯ ಸರ್ವ ಸದಸ್ಯರು ತೀವ್ರ ಶ್ರದ್ದಾಂಜಲಿ ಸಲ್ಲಸಿದ್ದಾರೆ. ಮೃತರ ಆತ್ಮಕ್ಕೆ ಶಾಂತಿ ದೊರೆಯಲಿ ಹಾಗೂ ಈ ದುಃಖದ ಕ್ಷಣದಲ್ಲಿ ಅವರ ಕುಟುಂಬದ ಸದಸ್ಯರಿಗೆ ನೋವನ್ನು ಸಹಿಸುವ ಶಕ್ತಿ ಭಗವಂತ ನೀಡಲಿ ಎಂದು ಪ್ರಾರ್ಥಿಸಿದ್ದಾರೆ.
“ಜನರ ಆರೋಗ್ಯಕ್ಕಾಗಿ ಹಲವು ವರ್ಷ ಸೇವೆ ಸಲ್ಲಿಸಿದ ವೈದ್ಯರೊಬ್ಬರನ್ನು ಕಳೆದುಕೊಂಡಿರುವುದು ಅತ್ಯಂತ ನೋವಿನ ಸಂಗತಿ. ಅವರ ಸೇವೆ, ಸರಳತೆ ಮತ್ತು ಮಾನವೀಯ ಗುಣಗಳು ಸದಾ ಸ್ಮರಣೀಯ,” ಎಂದು ಜನಶಕ್ತಿ ವೇದಿಕೆ ತನ್ನ ಶೋಕ ಸಂದೇಶದಲ್ಲಿ ತಿಳಿಸಿದೆ.



