ಪುತ್ತೂರು: ಈದ್ ಮಿಲಾದ್ ಹಿನ್ನೆಲೆಯಲ್ಲಿ ಪುತ್ತೂರು ನಗರದಲ್ಲಿ ಯಾವುದೇ ಬಲವಂತದ ಬಂದ್ ನಡೆದಿಲ್ಲ. ಸರ್ಕಾರಿ ರಜೆ ಇರುವುದರಿಂದ ಸಹಜವಾಗಿಯೇ ಅಂಗಡಿ–ಮುಂಗಟ್ಟುಗಳು ಮುಚ್ಚಿವೆ. ನಗರದಲ್ಲಿ ಪರಿಸ್ಥಿತಿ ಶಾಂತ ಆಗಿದ್ದು, ಯಾವುದೇ ಅಹಿತಕರ ಘಟನೆ ನಡೆದಿಲ್ಲ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ. ಅರುಣ್ ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಹಿಂದೂ ಜಾಗರಣ ವೇದಿಕೆ ನೀಡಿದ್ದ ಸ್ವಯಂಪ್ರೇರಿತ ಬಂದ್ ಕರೆ ಕುರಿತು ಪ್ರತಿಕ್ರಿಯಿಸಿದ ಅವರು, ದ.ಕ ಜಿಲ್ಲೆಯಾದ್ಯಂತ ಈದ್ ಮಿಲಾದ್ ಆಚರಣೆ ಶಾಂತಿಯುತವಾಗಿ ನಡೆಯುತ್ತಿದೆ. ಪುತ್ತೂರಿನಲ್ಲೂ ಬೆಳಿಗ್ಗೆ ಮಿಲಾದ್ ಮೆರವಣಿಗೆ ಯಾವುದೇ ಅಹಿತಕರ ಘಟನೆ ಇಲ್ಲದೆ ನಡೆದಿದೆ. ಸಂಜೆ ನಗರದಲ್ಲಿ ಮಿಲಾದ್ ಜಾಥಾ ನಡೆಯಲಿದ್ದು, ಮುನ್ನೆಚ್ಚರಿಕೆ ಕ್ರಮವಾಗಿ ಅಗತ್ಯ ಪೊಲೀಸ್ ಬಂದೋಬಸ್ತ್ ಕಲ್ಪಿಸಲಾಗಿದೆ ಎಂದು ತಿಳಿಸಿದರು.
ಈದ್ ಮಿಲಾದ್ ಹಿನ್ನೆಲೆಯಲ್ಲಿ ನಗರದಲ್ಲಿ ಸಹಜ ರಜೆ ವಾತಾವರಣವಿದೆ. ಯಾವುದೇ ಒತ್ತಾಯಪೂರ್ವಕ ಬಂದ್ ನಡೆದಿಲ್ಲ. ಪರಿಸ್ಥಿತಿಯ ಮೇಲೆ ಪೊಲೀಸರು ನಿಗಾ ಇರಿಸಿದ್ದು, ಬಿಗಿ ಬಂದೋಬಸ್ತ್ ಏರ್ಪಡಿಸಲಾಗಿದೆ. ಸದ್ಯ ಯಾವುದೇ ಆತಂಕಪಡುವ ಪರಿಸ್ಥಿತಿ ಇಲ್ಲ ಎಂದರು.
ದರ್ಬೆ ಪ್ರಕರಣ: ಕಾನೂನು ಪ್ರಕಾರ ಕ್ರಮ
ದರ್ಬೆಯಲ್ಲಿ ನಡೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಪ್ರಕಾರ ಬಂಧನ ಪ್ರಕ್ರಿಯೆ ನಡೆಯುತ್ತಿದೆ. ಕೆಲವು ಪ್ರಕರಣಗಳಲ್ಲಿ ಆರೋಪಿಗಳಿಗೆ ನೋಟಿಸ್ ನೀಡಿ ವಿಚಾರಣೆಗೆ ಒಳಪಡಿಸಲಾಗುತ್ತಿದೆ. ಎಲ್ಲರನ್ನೂ ಒಂದೇ ರೀತಿಯಲ್ಲಿ ಪರಿಗಣಿಸಿ ಕಾನೂನು ಕ್ರಮ ಕೈಗೊಳ್ಳಲಾಗುತ್ತಿದೆ. ಈ ವಿಚಾರದಲ್ಲಿ ಯಾವುದೇ ರೀತಿಯ ತಪ್ಪು ನಡೆದಿಲ್ಲ ಎಂದು ಎಸ್ಪಿ ಡಾ. ಅರುಣ್ ತಿಳಿಸಿದರು.
What do you feel about this post?
Like
Love
Happy
Haha
Sad





