ಮಂಗಳೂರು: ಗ್ರಾಹಕರೊಬ್ಬರು ಆರ್ಡರ್ ಮಾಡಿದ್ದ ಕೋಳಿ ಆಹಾರದಿಂದ ಕೆಟ್ಟ ವಾಸನೆ ಬರುತ್ತಿದೆ ಎಂಬ ದೂರಿನ ಬೆನ್ನಲ್ಲೇ ಮಂಗಳೂರಿನ ಕೆ.ಎಸ್. ರಾವ್ ರಸ್ತೆಯ ಮಾಲ್‌ನಲ್ಲಿರುವ ಮಳಿಗೆಗೆ ಆರೋಗ್ಯ ಹಾಗೂ ಆಹಾರ ಸುರಕ್ಷತಾ ಅಧಿಕಾರಿಗಳು ದಿಢೀರ್ ದಾಳಿ ನಡೆಸಿದ್ದಾರೆ. ಪರಿಶೀಲನೆ ನಡೆಸಿದ ವೇಳೆ ಹಳಸಿದ ಮಾಂಸ, ಅವಧಿ ಮೀರಿದ ಎಣ್ಣೆ ಹಾಗೂ ಅನೈರ್ಮಲ್ಯ ಪತ್ತೆ ಆಗಿದ್ದು, ಮಳಿಗೆ ಬಂದ್ ಮಾಡಲಾಗಿದೆ.
ಗ್ರಾಹಕಯೊಬ್ಬರು ಮಳಿಗೆಯೊಂದರಿಂದ ಚಿಕನ್ ಫೆರಿ ಆರ್ಡರ್ ಮಾಡಿದ್ದರು. ಆಹಾರದ ಬಾಕ್ಸ್ ತೆರೆದಾಗ ಮಾಂಸದಿಂದ ಕೆಟ್ಟ ವಾಸನೆ ಬಂದ ಹಿನ್ನೆಲೆಯಲ್ಲಿ ಅವರು ಈ ವಿಚಾರವನ್ನು ಜಿಲ್ಲಾ ಉಸ್ತುವಾರಿ ಸಚಿವ, ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಗಮನಕ್ಕೆ ತಂದಿದ್ದರು. ಸಚಿವರ ಸೂಚನೆ ಮೇರೆಗೆ ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಹಾಗೂ ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ಜಂಟಿಯಾಗಿ ಮಳಿಗೆಗೆ ದಾಳಿ ನಡೆಸಿ ಪರಿಶೀಲನೆ ನಡೆಸಿದರು.
ಈ ವೇಳೆ ಮಳಿಗೆ ಶೇಖರಣಾ ಕೊಠಡಿಯಲ್ಲಿ ಹಳೆಯ ಮಾಂಸ ದಾಸ್ತಾನು ಮಾಡಿರುವುದು ಪತ್ತೆ ಆಗಿದೆ. ಅಧಿಕಾರಿಗಳು ಶೇಖರಣಾ ಕೊಠಡಿಗೆ ಪ್ರವೇಶಿಸಿದಾಗ ಗಬ್ಬು ವಾಸನೆ ಬರುತ್ತಿತ್ತು ಎನ್ನಲಾಗಿದೆ. ಸಿಬ್ಬಂದಿ ಈ ಕುರಿತು ಪ್ರಶ್ನಿಸಿದಾಗ ಸಮರ್ಪಕ ಉತ್ತರ ದೊರೆಯಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಶೇಖರಣಾ ಕೊಠಡಿಯಲ್ಲಿ ಮೂರು ಮಾದರಿ ಕೋಳಿ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಪತ್ತೆಯಾಗಿದ್ದು, ಅಧಿಕಾರಿಗಳು ಅವುಗಳನ್ನು ವಶಕ್ಕೆ ಪಡೆದಿದ್ದಾರೆ. ಕೆಎಫ್‌ಸಿಗೆ ಬೆಂಗಳೂರಿನಿಂದ ಕೋಳಿ ಮಾಂಸ ಪೂರೈಕೆಯಾಗುತ್ತಿದ್ದು, ಹಲವು ತಿಂಗಳ ಹಿಂದಿನ ಮಾಂಸವನ್ನು ದಾಸ್ತಾನು ಮಾಡಲಾಗಿತ್ತು ಎನ್ನಲಾಗಿದೆ.
ಪತ್ತೆಯಾದ ಮಾಂಸ ಹಾಗೂ ಎಣ್ಣೆಯ ಮಾದರಿಗಳನ್ನು ಗುಣಮಟ್ಟ ಪರಿಶೀಲನೆಗಾಗಿ ಮೈಸೂರಿನ ಆಹಾರ ಪರೀಕ್ಷಾ ಪ್ರಯೋಗಾಲಯಕ್ಕೆ ಕಳುಹಿಸಲಾಗುವುದು. ಪ್ರಯೋಗಾಲಯದ ವರದಿ ಬಂದ ಬಳಿಕ ಮುಂದಿನ ಕಾನೂನು ಕ್ರಮ ಕೈಗೊಳ್ಳಲಾಗುವುದು. ಮೇಲ್ನೋಟಕ್ಕೆ ಕಲುಷಿತ ಆಹಾರ ಪೂರೈಕೆ, ಅನೈರ್ಮಲ್ಯ, ಹಳಸಿದ ಮಾಂಸ ಹಾಗೂ ಅವಧಿ ಮೀರಿದ ಎಣ್ಣೆ ಬಳಕೆ ಮಾಡಿರುವುದು ಕಂಡು ಬಂದಿದೆ. ಹೀಗಾಗಿ ಮಳಿಗೆಯನ್ನು ಬಂದ್ ಮಾಡಿ, ಅಲ್ಲಿರುವ ಎಲ್ಲ ಉತ್ಪನ್ನಗಳನ್ನು ತೆರವುಗೊಳಿಸಿ ಸಂಪೂರ್ಣ ಸ್ವಚ್ಛಗೊಳಿಸುವಂತೆ ಸೂಚಿಸಲಾಗಿದೆ ಎಂದು ಎಂದು ಜಿಲ್ಲಾ ಆಹಾರ ಸುರಕ್ಷತಾ ಅಧಿಕಾರಿ ಪ್ರವೀಣ್ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad





