ಮೂಡುಬಿದಿರೆ: ಕೃತಕ ಬುದ್ಧಿಮತ್ತೆ (ಎಐ) ಕ್ಷೇತ್ರದಲ್ಲಿ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ತಾಂತ್ರಿಕ ಅನುಭವ ಕಲ್ಪಿಸುವ ಮಹತ್ವದ ಹೆಜ್ಜೆಯಾಗಿ, ಐಬಿಎಂ ಸಾಫ್ಟ್‌ವೇರ್ ಲ್ಯಾಬ್ಸ್ ಸಹಯೋಗದಲ್ಲಿ ಮೂಡುಬಿದಿರೆಯ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಎಂಜಿನಿಯರಿಂಗ್ ಅಂಡ್ ಟೆಕ್ನಾಲಜಿ (ಎಐಇಟಿ)ಯಲ್ಲಿ ದೇಶದ ಮೊದಲ ಐಬಿಎಂ ಎಐ ಲ್ಯಾಬ್‌ಗೆ ಬುಧವಾರ ಚಾಲನೆ ನೀಡಲಾಯಿತು.
ವಿದ್ಯಾರ್ಥಿಗಳು ಮತ್ತು ಅಧ್ಯಾಪಕರಿಗೆ ಅತ್ಯಾಧುನಿಕ ಕೃತಕ ಬುದ್ಧಿಮತ್ತೆ ತಂತ್ರಜ್ಞಾನಗಳ ನೇರ ಪ್ರಾಯೋಗಿಕ ಅನುಭವ ಒದಗಿಸುವ ಉದ್ದೇಶದಿಂದ ಸ್ಥಾಪಿಸಲಾದ ಈ ಲ್ಯಾಬ್‌ನಲ್ಲಿ ಐಬಿಎಂ ವಾಟ್ಸನ್‌ಎಕ್ಸ್.ಎಐ, ವಾಟ್ಸನ್‌ಎಕ್ಸ್ ಆರ್ಕೆಸ್ಟ್ರೇಟ್ ಸೇರಿದಂತೆ ಎಐ ಆಧಾರಿತ ಡೆವಲಪರ್ ಉಪಕರಣಗಳನ್ನು ಅಳವಡಿಸಲಾಗಿದೆ. ಇದರ ಮೂಲಕ ಎಂಟರ್‌ಪ್ರೈಸ್ ಎಐ ವೇದಿಕೆಗಳು ಹಾಗೂ ಕೈಗಾರಿಕಾ ಅನ್ವಯಿಕೆಗಳ ಬಗ್ಗೆ ನೈಜ ಅನುಭವ ಪಡೆಯುವ ಅವಕಾಶ ವಿದ್ಯಾರ್ಥಿಗಳಿಗೆ ಲಭ್ಯವಾಗಲಿದೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಐಬಿಎಂ ಇಂಡಿಯಾದ ವಾಟ್ಸನ್‌ಎಕ್ಸ್ ಎಐ ವಿಭಾಗದ ಕಾರ್ಯಕ್ರಮ ನಿರ್ದೇಶಕ ಹಾಗೂ ಮುಖ್ಯಸ್ಥ ರತೀಶ್ ಮುರಳೀಧರನ್, ದೇಶದ ಮೊದಲ ಐಬಿಎಂ ಎಐ ಲ್ಯಾಬ್ ಸ್ಥಾಪಿಸಿದ ಎಂಜಿನಿಯರಿಂಗ್ ಕಾಲೇಜು ಎಂಬ ಹೆಗ್ಗಳಿಕೆಯನ್ನು ಆಳ್ವಾಸ್ ಪಡೆದುಕೊಂಡಿದೆ ಎಂದು ಹೇಳಿದರು. ಎಐ ಜ್ಞಾನವನ್ನು ಎಲ್ಲರಿಗೂ ಸುಲಭವಾಗಿ ತಲುಪಿಸುವ ಶಕ್ತಿಯುತ ತಂತ್ರಜ್ಞಾನವಾಗಿದ್ದು, ಭವಿಷ್ಯದಲ್ಲಿ ಯಶಸ್ಸಿಗೆ ತಂತ್ರಜ್ಞಾನದ ಜೊತೆಗೆ ಕಲಿಯುವ ಮನೋಭಾವ, ಬದಲಾವಣೆಗಳಿಗೆ ಹೊಂದಿಕೊಳ್ಳುವ ಸಾಮರ್ಥ್ಯ ಮತ್ತು ಸಮಾಜಮುಖಿ ಚಿಂತನೆಯೂ ಅಗತ್ಯ ಎಂದರು.
ಅಧ್ಯಕ್ಷತೆ ವಹಿಸಿದ್ದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ವ್ಯವಸ್ಥಾಪಕ ಟ್ರಸ್ಟಿ ವಿವೇಕ್ ಆಳ್ವ ಮಾತನಾಡಿ, ಕೃತಕ ಬುದ್ಧಿಮತ್ತೆ ಮಾನವ ಸಾಮರ್ಥ್ಯವನ್ನು ವೃದ್ಧಿಸುವ ಸಾಧನವಾಗಿದ್ದು, ಮಾನವನನ್ನು ಬದಲಿಸುವ ತಂತ್ರಜ್ಞಾನವಲ್ಲ ಎಂದು ಹೇಳಿದರು. ಎಐ ಹೊಸ ಉದ್ಯೋಗಾವಕಾಶಗಳನ್ನು ಸೃಷ್ಟಿಸಲಿದ್ದು, ಶೈಕ್ಷಣಿಕ ಸಂಸ್ಥೆಗಳು ಕಾಲಾನುಗುಣವಾಗಿ ಪಠ್ಯಕ್ರಮಗಳನ್ನು ಪರಿಷ್ಕರಿಸಿ ವಿದ್ಯಾರ್ಥಿಗಳನ್ನು ಭವಿಷ್ಯದ ಸವಾಲುಗಳಿಗೆ ಸಜ್ಜುಗೊಳಿಸಬೇಕೆಂದು ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಎಐಇಟಿಯ ಹಿರಿಯ ವಿದ್ಯಾರ್ಥಿ ಹಾಗೂ ಐಬಿಎಂ ಇಂಡಿಯಾದ ಎಐ ತಜ್ಞ ಮನೋಜ್ ಬಿ. ಶೆಟ್ಟಿ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು. ಎಐಇಟಿ ಪ್ರಾಂಶುಪಾಲ ಡಾ. ಪೀಟರ್ ಫೆರ್ನಾಂಡಿಸ್, ಅಧ್ಯಾಪಕರು, ವಿದ್ಯಾರ್ಥಿಗಳು ಹಾಗೂ ಐಬಿಎಂ ಸಾಫ್ಟ್‌ವೇರ್ ಲ್ಯಾಬ್ಸ್ ಪ್ರತಿನಿಧಿಗಳು ಉಪಸ್ಥಿತರಿದ್ದರು.
ಕಂಪ್ಯೂಟರ್ ಸೈನ್ಸ್ ವಿಭಾಗದ ಮುಖ್ಯಸ್ಥ ಡಾ. ಮಂಜುನಾಥ ಕೊಠಾರಿ ಸ್ವಾಗತಿಸಿದರು. ರಕ್ಷಿತಾ ರೈ ಕಾರ್ಯಕ್ರಮ ನಿರೂಪಿಸಿ, ಸಂಪತ್ ಶೆಟ್ಟಿ ವಂದಿಸಿದರು.
What do you feel about this post?
Like
Love
Happy
Haha
Sad







