ಮಂಗಳೂರಿನಲ್ಲಿ 12 ದಿನಗಳ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ: ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ

ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ದೇಶ ವಿದೇಶ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ಕೊಂಕಣಿ ಭಾಷೆ, ಸಂಗೀತ ಮತ್ತು ಸಾಂಸ್ಕೃತಿಕ ಪರಂಪರೆಯನ್ನು ಜಾಗತಿಕ ಮಟ್ಟದಲ್ಲಿ ಪರಿಚಯಿಸುವ ಉದ್ದೇಶದಿಂದ ಮಾಂಡ್ ಸೊಭಾಣ್ ಸಂಸ್ಥೆಯ 40ನೇ ವರ್ಷಾಚರಣೆಯ ಅಂಗವಾಗಿ ನವೆಂಬರ್ 3ರಿಂದ 15ರವರೆಗೆ ಮಂಗಳೂರಿನ ಪುರಭವನದಲ್ಲಿ ಪ್ರಥಮ ವಿಶ್ವ ಕೊಂಕಣಿ ಸಂಗೀತ ಮಹಾಸಮ್ಮೇಳನ ಆಯೋಜಿಸಲಾಗಿದೆ. ಈ ಸಂದರ್ಭದಲ್ಲಿ 12 ದಿನ, 12 ಗಂಟೆ, 12 ನಿಮಿಷಗಳ ನಿರಂತರ ಸಮೂಹ ಗಾಯನದ ಮೂಲಕ ಗಿನ್ನೆಸ್ ವಿಶ್ವ ದಾಖಲೆಗೆ ಪ್ರಯತ್ನಿಸಲಾಗುವುದು ಎಂದು ಮಾಂಡ್ ಸೊಭಾಣ್ ಅಧ್ಯಕ್ಷ ಲುವಿ ಜೆ. ಪಿಂಟೊ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕೊಂಕಣಿ ಸಂಗೀತಕ್ಕೆ ಮಹತ್ವದ ಕೊಡುಗೆ ನೀಡಿದ ಸಂಸ್ಥೆಯ ಗುರಿಕಾರ ದಿ. ಎರಿಕ್ ಒಝೇರಿಯೊ ಅವರ ಗೌರವಾರ್ಥ ಈ ಮಹಾಸಮ್ಮೇಳನ ಆಯೋಜಿಸಲಾಗಿದೆ. ನವೆಂಬರ್ 3ರಂದು ಬೆಳಿಗ್ಗೆ ಗೋವಾ ಮುಖ್ಯಮಂತ್ರಿ ಡಾ. ಪ್ರಮೋದ್ ಸಾವಂತ್ ಸಮ್ಮೇಳನ ಉದ್ಘಾಟಿಸಲಿದ್ದು, ಮಂಗಳೂರು ಬಿಷಪ್ ಡಾ. ಪೀಟರ್ ಪಾವ್ಲ್ ಸಲ್ಡಾನ್ಹಾ ಆಶೀರ್ವಚನ ನೀಡಲಿದ್ದಾರೆ. ಸ್ವಾಗತ ಸಮಿತಿ ಅಧ್ಯಕ್ಷ ಡಾ. ರೊನಾಲ್ಡ್ ಕುಲಾಸೊ ಅಧ್ಯಕ್ಷತೆ ವಹಿಸಲಿದ್ದಾರೆ ಎಂದರು.

‘ಕೊಂಕಣಿ ನಿರಂತರಿ–ಸಂಸಾರ್ ಸರಾಸರಿ’ ಹೆಸರಿನ ದಾಖಲೆಯ ಪ್ರಯತ್ನದಲ್ಲಿ ಭಾರತ, ಆಸ್ಟ್ರೇಲಿಯಾ, ಕುವೈತ್, ಓಮನ್ ಮತ್ತು ಖತಾರ್ ಸೇರಿದಂತೆ ವಿವಿಧ ದೇಶಗಳ ಗಾಯಕರನ್ನು ಒಳಗೊಂಡ 300 ತಂಡಗಳು ಭಾಗವಹಿಸಲಿವೆ. 250ಕ್ಕೂ ಅಧಿಕ ಸಂಗೀತ ಸಂಯೋಜಕರು ರಚಿಸಿದ 4,500ಕ್ಕೂ ಹೆಚ್ಚು ಕೊಂಕಣಿ ಹಾಡುಗಳನ್ನು ಹಾಡುವ ಯೋಜನೆ ರೂಪಿಸಲಾಗಿದೆ. ಪ್ರಧಾನ ಸಂಗೀತ ನಿರ್ದೇಶಕ ಜೊಯೆಲ್ ಪಿರೇರಾ ನೇತೃತ್ವದಲ್ಲಿ ಸಿದ್ಧತೆ ನಡೆದಿದೆ. ಗಿನ್ನೆಸ್ ಸಂಸ್ಥೆಯಲ್ಲಿ ನೋಂದಣಿ ಮಾಡಲಾಗಿದ್ದು, ಅಧಿಕೃತ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಸಮ್ಮೇಳನದಲ್ಲಿ ಕೊಂಕಣಿ ಸಂಗೀತದ ವಿವಿಧ ಆಯಾಮಗಳ ಕುರಿತು 12 ವಿಚಾರಗೋಷ್ಠಿಗಳು, ಸಂಗೀತ ಕ್ಷೇತ್ರದ 12 ಸಾಧಕರಿಗೆ ‘ವಿಶ್ವ ಕೊಂಕಣಿ ಸಂಗೀತ ಸಾಧನಾ ಪುರಸ್ಕಾರ’, ಮಕ್ಕಳಿಗಾಗಿ ‘ಫುಲ್ ಫುಲೊತಾ’ ಸಂಗೀತ ಕಾರ್ಯಕ್ರಮ, ಕೊಂಕಣಿ ಸಂಸ್ಕೃತಿ ಮತ್ತು ಆಹಾರ ವೈವಿಧ್ಯಗಳ ಪ್ರದರ್ಶನ ನಡೆಯಲಿದೆ. ನವೆಂಬರ್ 15ರಂದು ಸಂಜೆ ಸಮಾರೋಪ ಸಮಾರಂಭ ನಡೆಯಲಿದ್ದು, ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಭಾಗವಹಿಸಲಿದ್ದಾರೆ. ಕಾರ್ಯಕ್ರಮಕ್ಕೆ ಅಂದಾಜು 3 ಕೋಟಿ ವೆಚ್ಚವಾಗಲಿದೆ ಎಂದು ತಿಳಿಸಿದರು.

ಆರ್ಥಿಕ ಸಮಿತಿ ಅಧ್ಯಕ್ಷ ರೊಯ್ ಕ್ಯಾಸ್ತೆಲಿನೊ, ಜೊಯೆಲ್ ಪಿರೇರಾ, ಜೋಕಿಂ ಸ್ಟ್ಯಾನಿ ಆಲ್ವಾರಿಸ್, ರೊನಾಲ್ಡ್ ಕ್ರಾಸ್ತಾ, ಮೈಕಲ್ ಜೂಡ್ ಗ್ರೇಶಿಯಸ್ ಇದ್ದರು.

Leave a Reply

Your email address will not be published. Required fields are marked *