ಪಾವಂಜೆ ಸೇತುವೆ ಬಳಿಯ ಬಸ್ ನಿಲ್ದಾಣಕ್ಕೆ ಕಾಯಕಲ್ಪ: ಮೀಡಿಯಾ ಮನಸುಗಳು ತಂಡದಿಂದ ಸ್ವಚ್ಛತಾ ಕಾರ್ಯ

ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ

Spread the love

ಸುರತ್ಕಲ್: ಗಿಡಗಂಟಿ, ಹುಲ್ಲಿನಿಂದ ಮುಚ್ಚಿಹೋಗಿ ಗುರುತೇ ಸಿಗದಂತಾಗಿದ್ದ ಪಾವಂಜೆ ಸೇತುವೆ ಬಳಿಯ ಬಸ್ ನಿಲ್ದಾಣಕ್ಕೆ ಮೀಡಿಯಾ ಮನಸುಗಳು ತಂಡದ ಸದಸ್ಯರು ಸ್ವಚ್ಛತೆಯ ಸ್ಪರ್ಶ ನೀಡಿದ್ದಾರೆ. ಶಾಲಾ ಮಕ್ಕಳು, ಮಹಿಳೆಯರು ಸೇರಿದಂತೆ ನಿತ್ಯ ಪ್ರಯಾಣಿಕರು ಬಸ್‌ಗಾಗಿ ಕಾಯುವ ಸ್ಥಳವನ್ನು ಸ್ವಚ್ಛಗೊಳಿಸುವಂತೆ ಸಾರ್ವಜನಿಕರಿಂದ ಬಂದ ಮನವಿಗೆ ಸ್ಪಂದಿಸಿದ ತಂಡ, ಭಾನುವಾರ ಸ್ವಯಂಪ್ರೇರಿತವಾಗಿ ಸ್ವಚ್ಛತಾ ಕಾರ್ಯ ನಡೆಸಿತು.

ತಂಡದ 12 ನೇ ಸಾಮಾಜಿಕ ಕಾರ್ಯಕ್ರಮದ ಭಾಗವಾಗಿ ನಡೆದ ಅಭಿಯಾನದಲ್ಲಿ ಬಸ್ ನಿಲ್ದಾಣದ ಸುತ್ತ ಬೆಳೆದಿದ್ದ ಗಿಡಗಂಟಿಗಳನ್ನು ಕತ್ತರಿಸಿ, ಹುಲ್ಲು ತೆರವುಗೊಳಿಸಲಾಯಿತು. ಸುತ್ತಮುತ್ತಲಿನ ಕಸವನ್ನು ಗುಡಿಸಿ ಸಂಗ್ರಹಿಸಿದ ತ್ಯಾಜ್ಯವನ್ನು ವಿಲೇವಾರಿ ಮಾಡುವ ಮೂಲಕ ಪ್ರಯಾಣಿಕರು ಕಾಯಲು ಅನುಕೂಲವಾಗುವ ವಾತಾವರಣ ನಿರ್ಮಿಸಲಾಯಿತು.

ಮುಕ್ಕ ಸಮೀಪದ ಪಾವಂಜೆ ಸೇತುವೆ ಬಳಿಯ ಈ ಬಸ್ ನಿಲ್ದಾಣವನ್ನು ಸ್ಥಳೀಯ ನಂದಿನಿ ಮಿತ್ರ ವೃಂದ ಹಲವು ವರ್ಷಗಳ ಹಿಂದೆ ನಿರ್ಮಿಸಿತ್ತು. ಆದರೆ, ನಿಲ್ದಾಣ ಕಿರಿದಾಗಿದ್ದು, ಸುಸಜ್ಜಿತ ತಂಗುದಾಣದ ಅಗತ್ಯವಿದೆ. ಹೆದ್ದಾರಿ ಪ್ರಾಧಿಕಾರವಾಗಲಿ, ಸ್ಥಳೀಯ ಪಂಚಾಯಿತಿಯಾಗಲಿ ಹೊಸ ಬಸ್ ತಂಗುದಾಣ ನಿರ್ಮಿಸಲು ಮುಂದಾಗಿಲ್ಲ. ಅಸ್ತಿತ್ವದಲ್ಲಿರುವ ನಿಲ್ದಾಣ ಹುಲ್ಲು ಮತ್ತು ಗಿಡಗಂಟಿಗಳಿಂದ ಮುಚ್ಚಿಹೋಗಿದ್ದರೂ ಸ್ವಚ್ಛತೆಗೆ ಕ್ರಮ ಕೈಗೊಳ್ಳದಿರುವುದರಿಂದ ಪ್ರಯಾಣಿಕರು ತೊಂದರೆ ಅನುಭವಿಸುವಂತಾಗಿತ್ತು.

ಈ ಸಮಸ್ಯೆಯನ್ನು ಸಾರ್ವಜನಿಕರೊಬ್ಬರು ಮೀಡಿಯಾ ಮನಸುಗಳು ತಂಡದ ಗಮನಕ್ಕೆ ತಂದಿದ್ದರು. ಮನವಿಗೆ ಸ್ಪಂದಿಸಿದ ತಂಡದ ಸದಸ್ಯರು ಸ್ವತಃ ಸ್ವಚ್ಛತಾ ಕಾರ್ಯದಲ್ಲಿ ತೊಡಗುವ ಮೂಲಕ ಸಾರ್ವಜನಿಕ ಸಮಸ್ಯೆಗಳಿಗೆ ಸ್ಪಂದಿಸುವ ಸಾಮಾಜಿಕ ಹೊಣೆಗಾರಿಕೆಯನ್ನು ಪ್ರದರ್ಶಿಸಿದರು. ತಂಡದ ಕಾರ್ಯಕ್ಕೆ ಸಾರ್ವಜನಿಕರಿಂದ ಶ್ಲಾಘನೆ ವ್ಯಕ್ತವಾಯಿತು.

ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ಹಾಗೂ ಮೀಡಿಯಾ ಮನಸುಗಳು ತಂಡದ ಶಶಿ ಬೆಳ್ಳಾಯರು, ಗಿರೀಶ್ ಮಣೇಲ್, ಶಿವು ಕುಲಾಲ್, ಸಂದೇಶ್ ಶೆಟ್ಟಿ ಮತ್ತು ಅನೂಪ್ ಸೂರಿಂಜೆ ಸ್ವಚ್ಛತಾ ಅಭಿಯಾನದಲ್ಲಿ ಸಕ್ರಿಯವಾಗಿ ಪಾಲ್ಗೊಂಡರು.

Leave a Reply

Your email address will not be published. Required fields are marked *