ಮಂಗಳೂರು: ಪುತ್ತೂರು ವಿಧಾನಸಭಾ ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ಸ್ಟ್ರಿಂಗ್ ಆಪರೇಷನ್ ಪ್ರಕರಣದ ಸತ್ಯಾಸತ್ಯತೆ ಬಹಿರಂಗಪಡಿಸುವುದರ ಜತೆಗೆ, ದಕ್ಷಿಣ ಕನ್ನಡ ಜಿಲ್ಲೆಯ ಇತರ ವಿಧಾನಸಭಾ ಕ್ಷೇತ್ರಗಳಲ್ಲಿಯೂ ಇಂತಹ ಘಟನೆಗಳು ನಡೆದಿವೆಯೇ ಎಂಬ ಬಗ್ಗೆ ಸಮಗ್ರ ತನಿಖೆ ನಡೆಸಬೇಕು ಎಂದು ಬಿಜೆಪಿ ದಕ್ಷಿಣ ಕನ್ನಡ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ ಅವರು ಶನಿವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.
ಪ್ರಕರಣದಿಂದ ದಕ್ಷಿಣ ಕನ್ನಡ ಜಿಲ್ಲೆಗೆ ಕೆಟ್ಟ ಹೆಸರು ಬಂದಿದ್ದು, ಇದರ ಹಿಂದಿರುವ ವಾಸ್ತವಾಂಶಗಳನ್ನು ಜನರ ಮುಂದಿಡಬೇಕು. ಪುತ್ತೂರು ಕ್ಷೇತ್ರದ ಟಿಕೆಟ್ ಹಂಚಿಕೆಗೆ ಸಂಬಂಧಿಸಿದ ಸ್ಟ್ರಿಂಗ್ ಆಪರೇಷನ್ ಕುರಿತು ಹಲವು ಸಂದೇಶಗಳು ಹರಿದಾಡುತ್ತಿವೆ.ಇದರ ಹಿಂದೆ ಯಾರಿದ್ದಾರೆ. ಟಿಕೆಟ್ ಪಡೆವ ಉದ್ದೇಶದಿಂದಲೇ ಈ ಪ್ರಯತ್ನ ನಡೆದಿದೆಯೇ? ಅಥವಾ ಟಿಕೆಟ್ ಪಡೆದವರೂ ಇದರಲ್ಲಿ ಭಾಗಿಯಾಗಿದ್ದಾರೆಯೇ ಎಂಬ ಪ್ರಶ್ನೆಗಳಿಗೆ ತನಿಖೆ ಮೂಲಕ ಉತ್ತರ ದೊರೆಯಬೇಕು ಎಂದು ಒತ್ತಾಯಿಸಿದರು.
ಪುತ್ತೂರಿನ ಆಂತರಿಕ ಗೊಂದಲಗಳೇ ಬೇರೆ.ಆದರೆ, ಸ್ಟ್ರಿಂಗ್ ಆಪರೇಷನ್ ಪ್ರಕರಣದ ಸತ್ಯಾಸತ್ಯತೆ ತಿಳಿಯಲು ಸಮಗ್ರ ತನಿಖೆ ಅಗತ್ಯ. ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಆಗುವ ಮೊದಲಿನ 2011ರ ಅವಧಿಯಲ್ಲಿ ನಡೆದಿರುವುದಾಗಿ ಹೇಳಲಾಗುತ್ತಿರುವ ಈ ಪ್ರಕರಣವನ್ನು 2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ರಾಜಕೀಯ ಉದ್ದೇಶಕ್ಕೆ ಬಳಸಿಕೊಳ್ಳಲಾಗಿದೆಯೇ ಎಂಬುದನ್ನೂ ಪರಿಶೀಲಿಸಬೇಕು. ದಕ್ಷಿಣ ಕನ್ನಡ ಜಿಲ್ಲೆಯ ವಿವಿಧ ಕ್ಷೇತ್ರಗಳಲ್ಲಿ ಅಭ್ಯರ್ಥಿಗಳಿಗೆ ಟಿಕೆಟ್ ನೀಡುವ ಸಂದರ್ಭದಲ್ಲಿ ಇಂತಹ ಘಟನೆಗಳು ನಡೆದಿವೆಯೇ ಹಾಗೂ ಟಿಕೆಟ್ ಹಂಚಿಕೆಗೂ ಈ ಪ್ರಕರಣಕ್ಕೂ ಸಂಬಂಧವಿದೆಯೇ ಎಂಬುದನ್ನು ತನಿಖೆ ವ್ಯಾಪ್ತಿಗೆ ತರಬೇಕು ಎಂದರು.
ಸಿದ್ದರಾಮಯ್ಯ ಅವರ ಪುತ್ರ ಯತೀಂದ್ರ ಅವರು ತಮ್ಮ ತಂದೆ ಹೆಸರಿಗೆ ಪಕ್ಷದವರೇ ಧಕ್ಕೆ ತರುವ ಕೆಲಸ ಮಾಡಿದ್ದಾರೆ ಎಂದು ಆರೋಪಿಸಿರುವುದನ್ನು ಉಲ್ಲೇಖಿಸಿದ ಅವರು, ಪ್ರಕರಣದಲ್ಲಿ ಈಗಾಗಲೇ ಕೆಲವರ ಹೆಸರುಗಳು ಪ್ರಸ್ತಾಪ ಆಗಿರುವ ಹಿನ್ನೆಲೆಯಲ್ಲಿ ತನಿಖೆಯನ್ನು ನಿರ್ದಿಷ್ಟ ವ್ಯಕ್ತಿಗಳಿಗೆ ಸೀಮಿತಗೊಳಿಸಬಾರದು.ಎಲ್ಲ ಆಯಾಮಗಳನ್ನೂ ಪರಿಶೀಲಿಸಿ ಸತ್ಯವನ್ನು ಬಹಿರಂಗಪಡಿಸಬೇಕು ಎಂದರು.
ದಕ್ಷಿಣ ಕನ್ನಡ ಜಿಲ್ಲೆಯ ರಾಜಕೀಯ ವಲಯದಲ್ಲಿ ಚರ್ಚೆಗೆ ಕಾರಣವಾಗಿರುವ ಈ ಪ್ರಕರಣದ ಕುರಿತು ಆದಷ್ಟು ಶೀಘ್ರ ತನಿಖೆ ನಡೆಸಿ, ವಾಸ್ತವಾಂಶಗಳನ್ನು ಸಾರ್ವಜನಿಕರಿಗೆ ತಿಳಿಸಬೇಕು ಎಂದು ಅವರು ಮನವಿ ಮಾಡಿದರು.
ಬಿಜೆಪಿ ಜಿಲ್ಲಾ ಪ್ರಮುಖರಾದ ಪ್ರೇಮಾನಂದ ಶೆಟ್ಟಿ, ವಿಕಾಸ್ ಪುತ್ತೂರು, ಪ್ರಸನ್ನ ಮಾರ್ತ, ಶಾಂತಿಪ್ರಸಾದ್ ಹೆಗ್ಡೆ, ರವೀಂದ್ರ ಶೆಟ್ಟಿ ಉಳಿದೊಟ್ಟು, ಕವಿತಾ ಸನಿಲ್, ವಸಂತ ಪೂಜಾರಿ ಸೇರಿದಂತೆ ಇತರರು ಇದ್ದರು.



