ಮಂಗಳೂರು: ಹಬ್ಬಗಳ ಸಂದರ್ಭದಲ್ಲಿ ಆಹಾರ ಉತ್ಪನ್ನಗಳ ಸುರಕ್ಷತೆಗೆ ಒತ್ತು ನೀಡಿರುವ ಆಹಾರ ಸುರಕ್ಷತಾ ಅಧಿಕಾರಿಗಳು, ನಗರದ ಕದ್ರಿ ದೇವಸ್ಥಾನದ ಸಮೀಪದ ಕುಡ್ಪೀಸ್ ಫುಡ್ಸ್ ತಯಾರಿಕಾ ಘಟಕದ ಮೇಲೆ ಶನಿವಾರ ದಿಢೀರ್ ದಾಳಿ ನಡೆಸಿದ್ದಾರೆ.
ಈ ವೇಳೆ ತಯಾರಿಕಾ ಘಟಕದಲ್ಲಿ ನೈರ್ಮಲ್ಯದ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ನೋಟಿಸ್ ನೀಡಲಾಗಿದ್ದು, ಅನೈರ್ಮಲ್ಯದಿಂದ ತಯಾರಿಸಲಾಗಿದೆ ಎಂದು ಗುರುತಿಸಲಾದ ಹಲ್ವಾ ಹಾಗೂ ಖರ್ಜೂರ ಉತ್ಪನ್ನಗಳನ್ನು ವಶಕ್ಕೆ ಪಡೆದು, ಸೀಲ್ ಮಾಡಿ ಪ್ರಯೋಗಾಲಯದ ಪರೀಕ್ಷೆಗೆ ಕಳುಹಿಸಲಾಗಿದೆ.
ಆಹಾರ ಉತ್ಪಾದನಾ ಘಟಕದಲ್ಲಿ ಸ್ವಚ್ಛತೆಯ ಕೊರತೆ ಕಂಡುಬಂದ ಹಿನ್ನೆಲೆಯಲ್ಲಿ ಅಧಿಕಾರಿಗಳು ಅಗತ್ಯ ಕ್ರಮ ಕೈಗೊಂಡರು. ವಶಪಡಿಸಿಕೊಂಡ ಉತ್ಪನ್ನಗಳ ಗುಣಮಟ್ಟ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು ಪ್ರಯೋಗಾಲಯಕ್ಕೆ ರವಾನಿಸಲಾಗಿದೆ. ಪರೀಕ್ಷಾ ವರದಿ ಆಧಾರದಲ್ಲಿ ಮುಂದಿನ ಕ್ರಮ ಕೈಗೊಳ್ಳುವ ಸಾಧ್ಯತೆ ಇದೆ.
ಸ್ವಚ್ಛತೆಗೆ ಆದ್ಯತೆ ನೀಡಲು ಸೂಚನೆ
ಹಬ್ಬಗಳ ಸಂದರ್ಭದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಆಹಾರ ಉತ್ಪನ್ನಗಳನ್ನು ತಯಾರಿಸುವ ಹಿನ್ನೆಲೆಯಲ್ಲಿ,ಸುರಕ್ಷತಾ ಮಾನದಂಡಗಳನ್ನು ಪಾಲಿಸಿ ಉತ್ಪಾದನೆ ನಡೆಸುವಂತೆ ಅಧಿಕಾರಿಗಳು ಸೂಚಿಸಿದರು. ಆಹಾರದಿಂದ ಉಂಟಾಗಬಹುದಾದ ವಿಷಬಾಧೆ ಪ್ರಕರಣಗಳನ್ನು ತಡೆಯಲು ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು ಎಂದು ನಿರ್ದೇಶನ ನೀಡಿದರು.
ತಯಾರಿಕಾ ಘಟಕದಲ್ಲಿನ ಒಳಚರಂಡಿ ವ್ಯವಸ್ಥೆಯನ್ನು ಸರಿಪಡಿಸಿಕೊಳ್ಳಬೇಕು. ಕೀಟಗಳು, ಜಿರಳೆಗಳು, ಇಲಿಗಳು ಹಾಗೂ ಹೆಗ್ಗಣಗಳು ಘಟಕದೊಳಗೆ ಪ್ರವೇಶಿಸದಂತೆ ಸೂಕ್ತ ವ್ಯವಸ್ಥೆ ಮಾಡಬೇಕು. ಆಹಾರ ತಯಾರಿಕೆಗೆ ಬಳಸುವ ಸ್ಥಳ ಮತ್ತು ಸಾಮಗ್ರಿಗಳನ್ನು ಸಂಪೂರ್ಣವಾಗಿ ಸ್ವಚ್ಛಗೊಳಿಸಿದ ಬಳಿಕವೇ ಉತ್ಪಾದನಾ ಚಟುವಟಿಕೆಗಳನ್ನು ಮುಂದುವರಿಸಬೇಕು ಎಂದು ಸೂಚಿಸಲಾಯಿತು.
ನೈರ್ಮಲ್ಯಕ್ಕೆ ಸಂಬಂಧಿಸಿದಂತೆ ಅಸಮರ್ಪಕ ಸ್ಥಿತಿಯಲ್ಲಿದ್ದ ಸಾಮಗ್ರಿಗಳನ್ನು ವಶಕ್ಕೆ ಪಡೆದು ಸೀಲ್ ಮಾಡಲಾಗಿದೆ.ಆಹಾರ ಉತ್ಪನ್ನಗಳ ತಯಾರಿಕೆ,ಸಂಗ್ರಹಣೆ ಮತ್ತು ನಿರ್ವಹಣೆಯ ವೇಳೆ ಸ್ವಚ್ಛತೆ ಕಾಪಾಡುವಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದರು.
ಸಚಿವರ ಸೂಚನೆ ಮೇರೆಗೆ ಕಾರ್ಯಾಚರಣೆ
ಆರೋಗ್ಯ ಸಚಿವ ಯು.ಟಿ. ಖಾದರ್ ಅವರ ಸೂಚನೆ ಮೇರೆಗೆ ಜಿಲ್ಲಾ ಆಹಾರ ಸುರಕ್ಷತಾ ಅಂಕಿತ ಅಧಿಕಾರಿ ಡಾ.ಪ್ರವೀಣ್ ಕುಮಾರ್ ಸಿ.ಎಚ್. ಅವರ ನೇತೃತ್ವದ ತಂಡ ಈ ಕಾರ್ಯಾಚರಣೆ ನಡೆಸಿತು.
ಹಬ್ಬಗಳ ಸಂದರ್ಭದಲ್ಲಿ ಸಾರ್ವಜನಿಕರಿಗೆ ಸುರಕ್ಷಿತ ಆಹಾರ ದೊರೆಯುವಂತೆ ಆಹಾರ ತಯಾರಿಕಾ ಘಟಕಗಳಲ್ಲಿ ನೈರ್ಮಲ್ಯ ಮತ್ತು ಆಹಾರ ಸುರಕ್ಷತಾ ನಿಯಮಗಳ ಪಾಲನೆಗೆ ಅಧಿಕಾರಿಗಳು ಒತ್ತು ನೀಡಿದ್ದಾರೆ.



