ಮಂಗಳೂರು: ಜನರಿಗೆ ನೀಡಿದ ಭರವಸೆ ಈಡೇರಿಸುವಲ್ಲಿ ವಿಫಲ ಆಗಿರುವ ಕಾಂಗ್ರೆಸ್ ಸರಕಾರವನ್ನು ರಾಜ್ಯದ ಜನತೆ ಕ್ಷಮಿಸುವುದಿಲ್ಲ ಎಂದು ಮಂಗಳೂರು ಉತ್ತರ ಕ್ಷೇತ್ರದ ಶಾಸಕ ಡಾ. ವೈ. ಭರತ್ ಶೆಟ್ಟಿ ಆಕ್ರೋಶ ವ್ಯಕ್ತಪಡಿಸಿದರು.
ರಾಜ್ಯ ಕಾಂಗ್ರೆಸ್ ಸರಕಾರದ ಜನವಿರೋಧಿ ನೀತಿಗಳನ್ನು ಖಂಡಿಸಿ, ಭಾರತೀಯ ಜನತಾ ಪಕ್ಷದ ಮಂಗಳೂರು ನಗರ ಉತ್ತರ ಮಂಡಲದ ವತಿಯಿಂದ ಉಳಾಯಿಬೆಟ್ಟು ಗ್ರಾಮ ಪಂಚಾಯಿತಿ ಪರಿಸರದಲ್ಲಿ ‘ನಮ್ಮ ಹಕ್ಕು ನಮಗೆ ನೀಡಿ’ ಘೋಷಣೆಯೊಂದಿಗೆ ನಡೆದ ಬೃಹತ್ ಹಕ್ಕೊತ್ತಾಯ ಸಭೆಯಲ್ಲಿ ಅವರು ಮಾತನಾಡಿದರು.
ಚುನಾವಣೆ ವೇಳೆ ಉಚಿತ ಸೌಲಭ್ಯಗಳ ಭರವಸೆ ನೀಡಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ ಸರಕಾರ, ಇದೀಗ ಮಹಿಳೆಯರ ಖಾತೆಗೆ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸಮರ್ಪಕವಾಗಿ ಜಮೆ ಮಾಡುತ್ತಿಲ್ಲ. ಮಹಿಳೆಯರಿಗೆ ಸೇರಬೇಕಾದ ಹಣ ಎಲ್ಲಿ ಹೋಯಿತು? ಆ ಹಣ ಯಾರ ಜೇಬು ಸೇರಿದೆ? ಎಂಬುದಕ್ಕೆ ಸರಕಾರ ಉತ್ತರ ನೀಡಬೇಕು ಎಂದು ಅವರು ಆಗ್ರಹಿಸಿದರು.
ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತದಲ್ಲಿ ಭ್ರಷ್ಟಾಚಾರ ಮಿತಿಮೀರಿದ್ದು, ಅಗತ್ಯ ವಸ್ತುಗಳ ಬೆಲೆ ಏರಿಕೆಯಿಂದ ಜನಸಾಮಾನ್ಯರು ಸಂಕಷ್ಟ ಅನುಭವಿಸುತ್ತಿದ್ದಾರೆ. ಬಡವರು ಮತ್ತು ಮಧ್ಯಮ ವರ್ಗದ ಜನರ ಸಮಸ್ಯೆಗಳಿಗೆ ಸ್ಪಂದಿಸುವಲ್ಲಿ ಸರಕಾರ ವಿಫಲವಾಗಿದೆ. ಜನರಿಗೆ ನೀಡಿದ ಭರವಸೆಗಳನ್ನು ಈಡೇರಿಸುವ ಬದಲು ಅವರನ್ನು ಸಂಕಷ್ಟಕ್ಕೆ ದೂಡುತ್ತಿರುವ ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿ ಹೋರಾಟ ಮುಂದುವರಿಸಲಿದೆ ಎಂದರು.
ಸಭೆಯಲ್ಲಿ ಬಿಜೆಪಿ ರಾಜ್ಯ ವಕ್ತಾರ ವಿಕಾಸ್ ಕುಮಾರ್ ಪುತ್ತೂರು, ಮಂಗಳೂರು ನಗರ ಉತ್ತರ ಮಂಡಲ ಅಧ್ಯಕ್ಷ ರಾಜೇಶ್ ಕೊಟ್ಟಾರಿ, ಅಡ್ಯಾರು ಮಹಾಶಕ್ತಿ ಕೇಂದ್ರದ ಅಧ್ಯಕ್ಷ ಕಮಲಾಕ್ಷ ತಲ್ಲಿಮಾರ್, ಉಳಾಯಿಬೆಟ್ಟು ಗ್ರಾಮದ ನಿಕಟಪೂರ್ವ ಅಧ್ಯಕ್ಷ ಹರಿಕೇಶ್ ಶೆಟ್ಟಿ, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಸಂದೀಪ್ ಪಚ್ಚನಾಡಿ ಮತ್ತು ರಣದೀಪ್ ಕಾಂಚನ್, ಜಿಲ್ಲಾ ಸಹಸಂಚಾಲಕ ಲೋಹಿತ್ ಅಮಿನ್, ಪರಿಶಿಷ್ಟ ಪಂಗಡ ಮೋರ್ಚಾದ ಜಿಲ್ಲಾ ಅಧ್ಯಕ್ಷೆ ಸುಮಿತ್ರಾ ಕರಿಯ, ಹಿರಿಯ ನಾಗರಿಕರ ಪ್ರಕೋಷ್ಠದ ಜಿಲ್ಲಾ ಸಂಚಾಲಕ ರಾಮ ಅಮೀನ್, ಪರಿಶಿಷ್ಟ ಜಾತಿ ಮೋರ್ಚಾದ ಜಿಲ್ಲಾ ಪ್ರಮುಖ ಉಮೇಶ್ ಕೋಟ್ಯಾನ್, ನಿಕಟಪೂರ್ವ ಮಹಾನಗರ ಪಾಲಿಕೆ ಮೇಯರ್, ಪಂಚಾಯಿತಿ ಸದಸ್ಯರು, ಪಕ್ಷದ ಪ್ರಮುಖರು, ಕಾರ್ಯಕರ್ತರು ಹಾಗೂ ಸಾರ್ವಜನಿಕರು ಇದ್ದರು.



