ಮಂಗಳೂರು: ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಸಾಂವಿಧಾನಿಕ ಪ್ರಕ್ರಿಯೆಯಾಗಿದ್ದು, ಇದರ ವಿರುದ್ಧ ಕಾಂಗ್ರೆಸ್ ಮಾಡುತ್ತಿರುವ ಆರೋಪಗಳು ಆಧಾರರಹಿತವಾಗಿವೆ. ಪ್ರಜಾಪ್ರಭುತ್ವದ ಹೆಸರಿನಲ್ಲಿ ಜನರಲ್ಲಿ ಗೊಂದಲ ಮೂಡಿಸುವ ಬದಲು ಕಾಂಗ್ರೆಸ್ ವಾಸ್ತವಾಂಶಗಳನ್ನು ಜನರ ಮುಂದಿಡಲಿ ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರು ಮಂಗಳವಾರ ಸುದ್ದಿಗೋಷ್ಟಿಯಲ್ಲಿ ಆರೋಪಿಸಿದರು.
ಕಾಂಗ್ರೆಸ್ ಅವಕಾಶವಾದಿ ರಾಜಕಾರಣ ಮಾಡುತ್ತಿದೆ. ‘ಹಾರ್ಡ್ವೇರ್ ಜಿಹಾದಿ’ ವಿಧಾನ ಮತ್ತು ‘ಸಾಫ್ಟ್ವೇರ್ ಅರ್ಬನ್ ನಕ್ಸಲ್’ ಮನಸ್ಥಿತಿಯೊಂದಿಗೆ ಪಕ್ಷ ಕಾರ್ಯನಿರ್ವಹಿಸುತ್ತಿದೆ. ದೇಶದಲ್ಲಿ ಈವರೆಗೆ ಎಂಟು ಬಾರಿ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ನಡೆದಿದೆ. ಇದು ವಿಕೇಂದ್ರೀಕೃತ ಹಾಗೂ ಸಾಂವಿಧಾನಿಕ ಪ್ರಕ್ರಿಯೆ. ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅಧಿಸೂಚನೆ ಹೊರಡಿಸುತ್ತಾರೆ. ಆದರೆ, ದೇಶದಾದ್ಯಂತ 11 ಲಕ್ಷಕ್ಕೂ ಅಧಿಕ ಮತಗಟ್ಟೆ ಮಟ್ಟದ ಅಧಿಕಾರಿಗಳು ಪರಿಷ್ಕರಣೆಯ ಬಹುಪಾಲು ಕಾರ್ಯವನ್ನು ನಿರ್ವಹಿಸುತ್ತಾರೆ. ಹೀಗಿರುವಾಗ ಪರಿಷ್ಕರಣೆ ವಿರುದ್ಧದ ಆರೋಪಗಳು ಈ ಅಧಿಕಾರಿಗಳ ಕಾರ್ಯವನ್ನೂ ಪ್ರಶ್ನಿಸಿದಂತಾಗುತ್ತದೆ ಎಂದು ತಿಳಿಸಿದರು.
ಕೇರಳದ ಕಾಂಗ್ರೆಸ್ ನಾಯಕರಾದ ರಮೇಶ್ ಚೆನ್ನಿತ್ತಲ ಮತ್ತು ವಿ.ಡಿ. ಸತೀಶನ್ ಹಾಗೂ ತಮಿಳುನಾಡಿನ ಟಿವಿಕೆ ಪಕ್ಷದ ವಿಜಯ್ ಅವರು ಮತಪಟ್ಟಿ ಪರಿಷ್ಕರಣೆ ಪ್ರಕ್ರಿಯೆ ಮೆಚ್ಚಿಕೊಂಡಿದ್ದಾರೆ. ಕಾಂಗ್ರೆಸ್ ನಾಯಕರು ಎತ್ತುತ್ತಿರುವ ಆಕ್ಷೇಪಗಳಿಗೆ ತಾರ್ಕಿಕ ಆಧಾರವಿಲ್ಲ. ‘ಸುಳ್ಳು ವೇಗವಾಗಿ ಹರಡುತ್ತದೆ. ಸತ್ಯ ಜನರನ್ನು ತಲುಪಲು ಸಮಯ ತೆಗೆದುಕೊಳ್ಳುತ್ತದೆ. ಆದರೆ, ಅಂತಿಮವಾಗಿ ಸತ್ಯವೇ ಮೇಲುಗೈ ಸಾಧಿಸುತ್ತದೆ’ ಎಂದರು.
ನವೆಂಬರ್ನಲ್ಲಿ ರಾಷ್ಟ್ರವ್ಯಾಪಿ ಅಭಿಯಾನ
‘ಪ್ರಜಾಪ್ರಭುತ್ವ ಉಳಿಸಿ, ಅರಾಜಕತೆ ಕೊನೆಗೊಳಿಸಿ, ಸಂವಿಧಾನ ರಕ್ಷಿಸಿ’ ಎಂಬ ಘೋಷಣೆಯೊಂದಿಗೆ ನವೆಂಬರ್ 1 ರಿಂದ 30ರವರೆಗೆ ಬಿಜೆಪಿ ರಾಷ್ಟ್ರವ್ಯಾಪಿ ಅಭಿಯಾನ ಹಮ್ಮಿಕೊಳ್ಳಲಿದೆ. ಪಾದಯಾತ್ರೆ, ರ್ಯಾಲಿ, ವಿದ್ಯಾರ್ಥಿಗಳೊಂದಿಗೆ ಸಂವಾದ ಹಾಗೂ ಬುದ್ಧಿಜೀವಿಗಳನ್ನು ಒಳಗೊಂಡ ಸಮ್ಮೇಳನಗಳ ಮೂಲಕ ಜನರನ್ನು ತಲುಪಿ ಜಾಗೃತಿ ಮೂಡಿಸುವುದು ಅಭಿಯಾನದ ಉದ್ದೇಶ ಎಂದು ತಿಳಿಸಿದರು.
ರಾಹುಲ್ ಗಾಂಧಿ ಅವರ ‘ಮೊಹಬ್ಬತ್ ಕಿ ದುಕಾನ್’ (ಪ್ರೀತಿಯ ಅಂಗಡಿ) ಪರಿಕಲ್ಪನೆ ಕುರಿತು ವ್ಯಂಗ್ಯವಾಡಿ, ಕಾಂಗ್ರೆಸ್ನ ಪ್ರೀತಿಯ ಅಂಗಡಿಯಲ್ಲಿ ಕೇವಲ ದ್ವೇಷವನ್ನು ಮಾರಾಟ ಮಾಡಲಾಗುತ್ತಿದೆ. ಪ್ರಧಾನಿ ಮೋದಿ ವಿರುದ್ಧ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ನೀಡಿರುವ ಹೇಳಿಕೆಗಳೇ ಇದಕ್ಕೆ ಸಾಕ್ಷಿ. ಭಾರತ ವಿರೋಧಿ ಶಕ್ತಿಗಳು, ತುಕ್ಡೇ-ತುಕ್ಡೇ ಗ್ಯಾಂಗ್, ಜಿಹಾದಿ ಶಕ್ತಿಗಳು ಮತ್ತು ಅರ್ಬನ್ ನಕ್ಸಲರು ಈ ಅಂಗಡಿಯ ಪಾಲುದಾರರಾಗಿದ್ದಾರೆ ಎಂದು ಎಂಎಲ್ ಸಿ ಹಾಗೂ ಮಾಜಿ ಸಚಿವ ಸಿ.ಟಿ. ರವಿ ಅವರು ದೂರಿದರು
ಶಾಸಕರಾದ ಕಿಶೋರ್ ಕುಮಾರ್ ಪುತ್ತೂರು, ಭಾಗಿರತಿ ಮುರಳ್ಯ, ಗುರ್ಮೆ ಸುರೇಶ್ ಶೆಟ್ಟಿ, ಸಂಸದ ಕ್ಯಾ. ಬ್ರಿಜೇಶ್ ಚೌಟ, ಮಾಜಿ ಎಂಎಲ್ ಸಿ ಕ್ಯಾ. ಗಣೇಶ್ ಕಾರ್ಣಿಕ್, ಬಿಜೆಪಿ ಜಿಲ್ಲಾ ಘಟಕದ ಅಧ್ಯಕ್ಷ ಸತೀಶ್ ಕುಂಪಲ್, ಮಾಜಿ ಮೇಯರ್ ಪ್ರೇಮಾನಂದ ಶೆಟ್ಟಿ ಸೇರಿದಂತೆ ಹಲವರು ಇದ್ದರು.



