ಮಂಗಳೂರು: ಮಹಿಳೆಯರಲ್ಲಿ ಗರ್ಭಕಂಠದ ಕ್ಯಾನ್ಸರ್ ಅಪಾಯ ತಗ್ಗಿಸುವ ಉದ್ದೇಶದಿಂದ ಆರಂಭಿಸಿರುವ ಉಚಿತ ಎಚ್‌ಪಿವಿ ಲಸಿಕಾ ಅಭಿಯಾನವನ್ನು ಡಿಸೆಂಬರ್ 31ರವರೆಗೆ ವಿಸ್ತರಿಸಲಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ 16,350 ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಗುರಿ ಹೊಂದಲಾಗಿದ್ದು, ಈವರೆಗೆ 8,213 ಮಂದಿ ಲಸಿಕೆ ಪಡೆದಿದ್ದಾರೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ. ಎಚ್.ಆರ್. ತಿಮ್ಮಯ್ಯ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
14 ವರ್ಷ ಪೂರ್ಣಗೊಂಡು 15 ವರ್ಷ ಪೂರ್ಣವಾಗದ ಹೆಣ್ಣುಮಕ್ಕಳು ಸಮೀಪದ ಸರ್ಕಾರಿ ಆರೋಗ್ಯ ಕೇಂದ್ರಗಳಲ್ಲಿ ಉಚಿತವಾಗಿ ಲಸಿಕೆ ಪಡೆಯಬಹುದು. ಆರಂಭದಲ್ಲಿ ಮಾರ್ಚ್‌ನಿಂದ ಮೇ ತಿಂಗಳವರೆಗೆ ನಡೆಯಬೇಕಿದ್ದ ಅಭಿಯಾನವನ್ನು ಇದೀಗ ಡಿಸೆಂಬರ್ ಅಂತ್ಯದವರೆಗೆ ವಿಸ್ತರಿಸಲಾಗಿದೆ ಎಂದು ತಿಳಿಸಿದರು.
ಮಹಿಳೆಯರಲ್ಲಿ ಸ್ತನ ಕ್ಯಾನ್ಸರ್ ಮೊದಲ ಸ್ಥಾನದಲ್ಲಿದ್ದರೆ, ಗರ್ಭಕಂಠದ ಕ್ಯಾನ್ಸರ್ ಎರಡನೇ ಸ್ಥಾನದಲ್ಲಿದೆ. ಈ ಕಾಯಿಲೆ ಮೂರನೇ ಅಥವಾ ನಾಲ್ಕನೇ ಹಂತದಲ್ಲಿ ಪತ್ತೆಯಾದರೆ ಚಿಕಿತ್ಸೆ ಕಷ್ಟವಾಗುವ ಸಾಧ್ಯತೆಯಿದೆ. ಹೀಗಾಗಿ ಮುನ್ನೆಚ್ಚರಿಕೆ ಕ್ರಮವಾಗಿ ಎಚ್‌ಪಿವಿ ಲಸಿಕೆ ನೀಡಲಾಗುತ್ತಿದೆ. ಭಾರತ ಸರ್ಕಾರದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಫೆಬ್ರವರಿ 28ರಂದು ರಾಷ್ಟ್ರಮಟ್ಟದಲ್ಲಿ ಅಭಿಯಾನ ಆರಂಭಿಸಿದ್ದು, ಕರ್ನಾಟಕದಲ್ಲಿಯೂ ಉಚಿತ ಲಸಿಕೆ ನೀಡಲಾಗುತ್ತಿದೆ ಎಂದು ತಿಳಿಸಿದರು.
ಜಿಲ್ಲೆಗೆ 16 ಸಾವಿರಕ್ಕೂ ಅಧಿಕ ಲಸಿಕೆ ಪ್ರಮಾಣಗಳು ಬಂದಿದ್ದು, ಅರ್ಹ ಹೆಣ್ಣುಮಕ್ಕಳಿಗೆ ಲಸಿಕೆ ನೀಡುವ ಕಾರ್ಯ ಮುಂದುವರಿದಿದೆ. ಸಾಮಾಜಿಕ ಜಾಲತಾಣಗಳಲ್ಲಿ ಹರಡಿದ ತಪ್ಪು ಮಾಹಿತಿಯಿಂದ ಆರಂಭದಲ್ಲಿ ಗೊಂದಲ ಉಂಟಾಗಿತ್ತು. ಜಾಗೃತಿ ಮೂಡಿಸಿದ ಬಳಿಕ ಲಸಿಕೆ ಪಡೆಯುವವರ ಸಂಖ್ಯೆಯಲ್ಲಿ ಪ್ರಗತಿ ಕಂಡುಬಂದಿದೆ ಎಂದರು.
ಹೆಚ್ಚುವರಿ ಹಣ ಪಡೆದರೆ ಹಿಂದಿರುಗಿಸಲು ಕ್ರಮ
ಆಯುಷ್ಮಾನ್ ಭಾರತ್ ಆರೋಗ್ಯ ಕರ್ನಾಟಕ ಯೋಜನೆಯಡಿ ನೋಂದಾಯಿತ ಖಾಸಗಿ ಆಸ್ಪತ್ರೆಗಳು ಪ್ಯಾಕೇಜ್ ವ್ಯಾಪ್ತಿಯ ಚಿಕಿತ್ಸೆಯನ್ನು ಅರ್ಹರಿಗೆ ಉಚಿತವಾಗಿ ನೀಡಬೇಕು. ಹೆಚ್ಚುವರಿ ಹಣ ಪಡೆದಿರುವ ಬಗ್ಗೆ ದೂರುಗಳು ಬಂದಿದ್ದು, ಹಣ ವಸೂಲಿ ಮಾಡಿರುವುದು ದೃಢಪಟ್ಟರೆ ಫಲಾನುಭವಿಗಳಿಗೆ ಹಿಂದಿರುಗಿಸಲು ಕ್ರಮ ಕೈಗೊಳ್ಳಲಾಗುವುದು. ಈ ಕುರಿತು ಜಿಲ್ಲಾಧಿಕಾರಿ ನೇತೃತ್ವದಲ್ಲಿ ಖಾಸಗಿ ಆಸ್ಪತ್ರೆಗಳ ಪ್ರತಿನಿಧಿಗಳ ಸಭೆ ನಡೆಸಿ ನಿಯಮ ಪಾಲನೆಗೆ ಸೂಚಿಸಲಾಗಿದೆ. ಯೋಜನೆಯಡಿ ಒಂದು ಕುಟುಂಬಕ್ಕೆ ವರ್ಷಕ್ಕೆ ₹5 ಲಕ್ಷದವರೆಗೆ ಉಚಿತ ಚಿಕಿತ್ಸೆಯ ಸೌಲಭ್ಯವಿದೆ ಎಂದು ತಿಳಿಸಿದರು.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತುರ್ತು ಚಿಕಿತ್ಸೆ ಒದಗಿಸುವ ಪಿಎಂ ರಾಹತ್ ಯೋಜನೆ ಜಾರಿಗೊಳಿಸುವ ಪ್ರಕ್ರಿಯೆ ನಡೆಯುತ್ತಿದೆ. ಇದರಡಿ ಕೇಂದ್ರ ಸರ್ಕಾರದಿಂದ ₹1.5 ಲಕ್ಷದವರೆಗೆ ಹಾಗೂ ರಾಜ್ಯ ಸರ್ಕಾರದಿಂದ ಹೆಚ್ಚುವರಿಯಾಗಿ ₹1 ಲಕ್ಷದವರೆಗೆ ನೆರವು ದೊರೆಯಲಿದೆ. ಅಪಘಾತ ಸಂತ್ರಸ್ತರಿಗೆ ತುರ್ತು ಚಿಕಿತ್ಸೆ ನಿರಾಕರಿಸುವಂತಿಲ್ಲ; ಎಪಿಎಲ್, ಬಿಪಿಎಲ್ ಎಂಬ ಭೇದವೂ ಇಲ್ಲ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಡಾ. ನವೀನ್‌ಚಂದ್ರ ಕುಲಾಲ್ ಹಾಗೂ ಡಾ. ರಾಜೇಶ್ ಇದ್ದರು.



