ಮೂಡುಬಿದಿರೆ: ಆಯುರ್ವೇದ ವೈದ್ಯಕೀಯ ಕ್ಷೇತ್ರವು ದೇಶದ ಗಡಿಗಳನ್ನು ಮೀರಿ ಜಾಗತಿಕ ಮಟ್ಟದಲ್ಲಿ ಬೆಳೆಯುತ್ತಿರುವ ಹಿನ್ನೆಲೆಯಲ್ಲಿ ವಿದ್ಯಾರ್ಥಿಗಳು ವಿಶಾಲ ಮನೋಭಾವ ಮತ್ತು ಸಮಗ್ರ ವೈದ್ಯಕೀಯ ದೃಷ್ಟಿಕೋನವನ್ನು ಅಳವಡಿಸಿಕೊಳ್ಳಬೇಕು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಮೋಹನ್ ಆಳ್ವ ಕರೆ ನೀಡಿದರು.
ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ 26ನೇ ಬ್ಯಾಚ್ ವಿದ್ಯಾರ್ಥಿಗಳ ಬೀಳ್ಕೊಡುಗೆ ಸಮಾರಂಭ ‘ಸಂಪನ್ನಮ್’ ಬುಧವಾರ ಕಾಲೇಜಿನ ವಿಎಸ್ ಆಚಾರ್ಯ ಸಭಾಂಗಣದಲ್ಲಿ ನಡೆಯಿತು.

ಮುಖ್ಯ ಅತಿಥಿಯಾಗಿ ಮಾತನಾಡಿದ ಅವರು, ಆಯುರ್ವೇದವು ಈಗಾಗಲೇ 17ಕ್ಕೂ ಹೆಚ್ಚು ರಾಷ್ಟ್ರಗಳಿಗೆ ವಿಸ್ತರಿಸಿದ್ದು, 25ಕ್ಕೂ ಅಧಿಕ ಯುರೋಪಿನ ರಾಷ್ಟ್ರಗಳಲ್ಲಿ ಮಾನ್ಯತೆ ಪಡೆಯುತ್ತಿರುವುದು ಅದರ ಜಾಗತಿಕ ಬೆಳವಣಿಗೆಯ ಸಂಕೇತವಾಗಿದೆ ಎಂದು ಹೇಳಿದರು. ಆಯುಷ್ ಕ್ಷೇತ್ರದ ಅಭಿವೃದ್ಧಿಗೆ ಕೇಂದ್ರ ಸರ್ಕಾರ ಸುಮಾರು ₹3,500 ಕೋಟಿ ಅನುದಾನ ಮೀಸಲಿಟ್ಟಿರುವುದರ ಜೊತೆಗೆ ಪ್ರತ್ಯೇಕ ಆಯುಷ್ ಸಚಿವಾಲಯ ಸ್ಥಾಪಿಸಿರುವುದು ಈ ಕ್ಷೇತ್ರಕ್ಕೆ ಸರ್ಕಾರ ನೀಡುತ್ತಿರುವ ಆದ್ಯತೆಯನ್ನು ತೋರಿಸುತ್ತದೆ ಎಂದರು.
ಆಯುರ್ವೇದದಲ್ಲಿ ಔಷಧ, ಚಿಕಿತ್ಸಾ ವಿಧಾನ ಹಾಗೂ ಸಂಶೋಧನೆ ಕ್ಷೇತ್ರಗಳಲ್ಲಿ ಗಣನೀಯ ಪ್ರಗತಿ ಕಂಡುಬಂದಿದ್ದು, ವೈದ್ಯರು ನಿರಂತರವಾಗಿ ಹೊಸ ಜ್ಞಾನವನ್ನು ಅಳವಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಅಲೋಪಥಿ, ದಂತ ವೈದ್ಯಕೀಯ, ಭೌತಚಿಕಿತ್ಸೆ, ಪ್ರಕೃತಿ ಚಿಕಿತ್ಸೆ ಹಾಗೂ ಹೋಮಿಯೋಪಥಿ ಸೇರಿದಂತೆ ವಿವಿಧ ವೈದ್ಯಕೀಯ ಪದ್ಧತಿಗಳ ಬಗ್ಗೆ ಅರಿವು ಹೊಂದಿದರೆ ವೈದ್ಯರಿಗೆ ಹೆಚ್ಚುವರಿ ಸಾಮರ್ಥ್ಯ ದೊರೆಯುತ್ತದೆ ಎಂದು ತಿಳಿಸಿದರು.
ವೈದ್ಯಕೀಯ ಕ್ಷೇತ್ರದಲ್ಲಿ ಜ್ಞಾನ ವಿನಿಮಯ ಮತ್ತು ಸಹಕಾರದ ಮನೋಭಾವ ಅಗತ್ಯವಾಗಿದೆ. ಆಯುರ್ವೇದದ ಮೂಲ ತತ್ವಗಳನ್ನು ಉಳಿಸಿಕೊಂಡೇ ಪ್ರಾಯೋಗಿಕ ದೃಷ್ಟಿಕೋನದೊಂದಿಗೆ ಸೇವೆ ಸಲ್ಲಿಸಿದರೆ ವೈದ್ಯಕೀಯ ಜೀವನದಲ್ಲಿ ಯಶಸ್ಸು ಸಾಧಿಸಬಹುದು ಎಂದು ಡಾ. ಮೋಹನ್ ಆಳ್ವ ಹೇಳಿದರು.
ಕಾರ್ಯಕ್ರಮದಲ್ಲಿ ಆಳ್ವಾಸ್ ಆಯುರ್ವೇದ ವೈದ್ಯಕೀಯ ಕಾಲೇಜಿನ ವೈದ್ಯಕೀಯ ಅಧೀಕ್ಷಕಿ ಡಾ. ಸುರೇಖಾ ಪೈ, ಸ್ನಾತಕೋತ್ತರ ವಿಭಾಗದ ಡೀನ್ ಡಾ. ಮಂಜುನಾಥ್ ಭಟ್, ಪದವಿ ವಿಭಾಗದ ಡೀನ್ ಡಾ. ಸ್ವಪ್ನ ಕುಮಾರಿ, ಸಂಯೋಜಕರಾದ ಡಾ. ವಿಜಯಲಕ್ಷ್ಮಿ ಹಾಗೂ ಡಾ. ಸುರಭಿ ಕೃಷ್ಣ ಇದ್ದರು.
ಈ ವೇಳೆ ವಿದ್ಯಾರ್ಥಿಗಳು ತಮ್ಮ ಅನುಭವಗಳನ್ನು ಹಂಚಿಕೊಂಡರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು. ಕಾಲೇಜಿನ ಪ್ರಾಂಶುಪಾಲ ಡಾ. ಸುಶೀಲ ಶೆಟ್ಟಿ ಸ್ವಾಗತಿಸಿದರು. ಡಾ. ಗೀತಾ ಮಾರ್ಕೆಂಡೇಯ ನಿರೂಪಿಸಿದರು. ಡಾ. ಸ್ವಪ್ನ ವಂದಿಸಿದರು.



