ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೈಜ ಬದ್ಧತೆ ಇಲ್ಲ: ಜಂಟಿ ಪತ್ರಿಕಾಗೋಷ್ಠಿಯಲ್ಲಿ ಕೇಶವ ಪ್ರಸಾದ್, ಕಿಶೋರ್ ಕುಮಾರ್ ಪುತ್ತೂರು ಸರಕಾರದ ವಿರುದ್ಧ ಕಿಡಿ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ರಾಜ್ಯ ಸರ್ಕಾರದ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ (ಜಾತಿ ಗಣತಿ) ವರದಿಯನ್ನು ಮುಂಬರುವ ವಿಧಾನಮಂಡಲ ಅಧಿವೇಶನದಲ್ಲಿ ಮಂಡಿಸಿ ಕನಿಷ್ಠ ಎರಡು–ಮೂರು ದಿನಗಳ ಕಾಲ ಸಮಗ್ರ ಚರ್ಚೆಗೆ ಒಳಪಡಿಸಬೇಕು ಎಂದು ಬಿಜೆಪಿ ವಿಧಾನ ಪರಿಷತ್ ಸದಸ್ಯರಾದ ಕೇಶವ ಪ್ರಸಾದ್ ಹಾಗೂ ಕಿಶೋರ್ ಕುಮಾರ್ ಪುತ್ತೂರು ಅವರು ಗುರುವಾರ ಜಂಟಿ ಪತ್ರಿಕಾಗೋಷ್ಠಿಯಲ್ಲಿ ಆರೋಪಿಸಿದರು.

ಹಿಂದುಳಿದ ವರ್ಗಗಳ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಕ್ಕೆ ನೈಜ ಬದ್ಧತೆ ಇಲ್ಲದೆ, ಕೇವಲ ಮತಬ್ಯಾಂಕ್ ರಾಜಕಾರಣ ನಡೆಸುತ್ತಿದೆ. ಹಿಂದುಳಿದ ವರ್ಗಗಳ ಕಲ್ಯಾಣದ ವಿಚಾರದಲ್ಲಿ ಕಾಂಗ್ರೆಸ್ ಸರ್ಕಾರಗಳು ನಿರಂತರವಾಗಿ ವಿಫಲವಾಗಿವೆ. 1956ರ ಕಾಕಾ ಕಾಲೇಲ್ಕರ್ ವರದಿಯಿಂದ ಹಿಡಿದು ಮಂಡಲ್ ಆಯೋಗದ ಶಿಫಾರಸುಗಳ ಅನುಷ್ಠಾನದವರೆಗೆ ಕಾಂಗ್ರೆಸ್ ಇಚ್ಛಾಶಕ್ತಿ ತೋರಲಿಲ್ಲ. 2013–18ರ ಅವಧಿಯಲ್ಲಿ ಸಿದ್ಧಗೊಂಡ ಕಾಂತರಾಜು ಆಯೋಗದ ವರದಿಯನ್ನು ಸ್ವೀಕರಿಸದೆ ವಿಳಂಬ ಮಾಡಿದ್ದು, ನಂತರದ ವರದಿಗಳ ವಿಚಾರದಲ್ಲಿಯೂ ಇದೇ ಧೋರಣೆ ಅನುಸರಿಸಲಾಗಿದೆ ಎಂದು ಕೇಶವ ಪ್ರಸಾದ್ ಅವರು ದೂರಿದರು.

ಎಂಎಲ್‌ಸಿ ಕಿಶೋರ್ ಕುಮಾರ್ ಪುತ್ತೂರು ಅವರು ಮಾತನಾಡಿ, 165 ಕೋಟಿಗೂ ಅಧಿಕ ವೆಚ್ಚದಲ್ಲಿ ಸಿದ್ಧಗೊಂಡಿರುವ ವರದಿಯ ದತ್ತಾಂಶಗಳು ಹಳೆಯದಾಗಿವೆ ಎಂದು ಆಯೋಗದ ಅಧ್ಯಕ್ಷರೇ ಹೇಳಿರುವ ಹಿನ್ನೆಲೆಯಲ್ಲಿ, ಇಂತಹ ಮಾಹಿತಿ ಆಧಾರದಲ್ಲಿ ಹಿಂದುಳಿದ ವರ್ಗಗಳಿಗೆ ನ್ಯಾಯ ದೊರಕುವುದು ಹೇಗೆ ಎಂದರು.

ಜಾತಿ ಗಣತಿಯನ್ನು ಕೇವಲ ಜಾತಿ ಸಮೀಕ್ಷೆಯಾಗಿ ಅಲ್ಲದೆ ಸಾಮಾಜಿಕ ಹಾಗೂ ಶೈಕ್ಷಣಿಕ ಸಮೀಕ್ಷೆಯಾಗಿ ಪರಿಗಣಿಸಬೇಕು ಎಂದರು. ವರದಿಯ ಕುರಿತು ವಿಧಾನಮಂಡಲದಲ್ಲಿ ಸುದೀರ್ಘ ಚರ್ಚೆ ನಡೆಸಿ ಅದರ ವಿವರಗಳನ್ನು ಸಾರ್ವಜನಿಕ ಹಾಗೂ ಜನಪ್ರತಿನಿಧಿಗಳ ಮುಂದಿಡಬೇಕು. ಹಿಂದುಳಿದ ವರ್ಗಗಳ ಅಭಿವೃದ್ಧಿಗೆ ಸರ್ಕಾರ ಪ್ರಾಮಾಣಿಕ ಕ್ರಮ ಕೈಗೊಳ್ಳುವ ಬದಲು ರಾಜಕೀಯ ಲಾಭದ ಲೆಕ್ಕಾಚಾರ ನಡೆಸುತ್ತಿದೆ ಎಂದು ಆರೋಪಿಸಿದ ಅವರು, ವರದಿಯ ಭವಿಷ್ಯದ ಬಗ್ಗೆ ಸರ್ಕಾರ ಸ್ಪಷ್ಟ ನಿಲುವು ಪ್ರಕಟಿಸಬೇಕು ಎಂದು ಒತ್ತಾಯಿಸಿದರು.

ಈ ಪತ್ರಿಕಾಗೋಷ್ಠಿಯಲ್ಲಿ ದ.ಕ ಜಿಲ್ಲಾ ಅಧ್ಯಕ್ಷ ಸತೀಶ್‌ ಕುಂಪಲ, ರಾಜ್ಯ ಒಬಿಸಿ ಮೋರ್ಚಾದ ಕಾರ್ಯದರ್ಶಿ ಆರ್.ಸಿ ನಾರಾಯಣ್‌ , ಒಬಿಸಿ ಮೋರ್ಚಾ ಜಿಲ್ಲಾ ಅಧ್ಯಕ್ಷ ಮಹೇಶ್‌ ಜೋಗಿ, ಒಬಿಸಿ ಮೋರ್ಚಾದ ಪ್ರಧಾನ ಕಾರ್ಯದರ್ಶಿಗಳಾದ ಶಶಿಧರ ಕಲ್ಮಂಜ ಮತ್ತು ಮೋನಪ್ಪ ದೇವಸ್ಯ, ರಾಜ್ನ ಕಾರ್ಯಕಾರಿಣಿ ಸದಸ್ಯರಾದ ನಿತೀನ್‌ ಕುಮಾರ್‌,ಮಾಜಿ ಮೂಡಾ ಅಧ್ಯಕ್ಷ ರವಿಶಂಕರ್‌ ಮಿಜಾರ್‌, ಜಿಲ್ಲಾ ಮಾಧ್ಯಮ ಪ್ರಮುಖ್‌ ವಸಂತ್‌ ಪೂಜಾರಿ ಇದ್ದರು.

ಸಾಮಾಜಿಕ, ಶೈಕ್ಷಣಿಕ ಸಮೀಕ್ಷೆಯಾಗಿ ಪರಿಗಣಿಸಿ: ಕಿಶೋರ್ ಕುಮಾರ್

ರಾಜ್ಯ ಸರ್ಕಾರವು ಈ ವರದಿಯನ್ನು ಕೇವಲ ‘ಜಾತಿಯ ಸಮೀಕ್ಷೆ’ಯಾಗಿ ನೋಡದೆ, ಇದನ್ನೊಂದು ‘ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯಾಗಿ ಪರಿಗಣಿಸಬೇಕು. ನಾನೊಬ್ಬ ಹಿಂದುಳಿದ ನಾಯಕ ಎಂದು ಬಿಂಬಿಸಿಕೊಳ್ಳುವ ಸಿಎಂ ಸಿದ್ದರಾಮಯ್ಯ ಅವರಿಗೆ ನಿಜಕ್ಕೂ ಕಾಳಜಿ ಇದ್ದರೆ, ಮುಂಬರುವ ಅಧಿವೇಶನದಲ್ಲಿ ವರದಿಯ ಸುದೀರ್ಘ ಚರ್ಚೆಗೆ ಅವಕಾಶ ಮಾಡಿಕೊಡಬೇಕು ಎಂದು ಕಿಶೋರ್ ಕುಮಾರ್ ಪುತ್ತೂರು ಒತ್ತಾಯಿಸಿದರು.

Leave a Reply

Your email address will not be published. Required fields are marked *