ಉಪ್ಪಿನಂಗಡಿ: ದಕ್ಷಿಣ ಕನ್ನಡ ಜಿಲ್ಲೆಯ ಉಪ್ಪಿನಂಗಡಿ ಸಮೀಪ ಭಾರಿ ಪ್ರಮಾಣದಲ್ಲಿ ನಕಲಿ 500 ಮುಖಬೆಲೆಯ ನೋಟುಗಳನ್ನು ತಯಾರಿಸುತ್ತಿದ್ದ ಸಂಘಟಿತ ಜಾಲವನ್ನು ಪುತ್ತೂರು ಪೊಲೀಸರು ಭೇದಿಸಿದ್ದು, ಘಟನೆಗೆ ಸಂಬಂಧಿಸಿದಂತೆ 7 ಮಂದಿಯನ್ನು ಬಂಧಿಸಿ ನಕಲಿ ನೋಟುಗಳು, ಮುದ್ರಣ ಯಂತ್ರಗಳು ಹಾಗೂ ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಖಚಿತ ಮಾಹಿತಿ ಮೇರೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ಅವರ ಮಾರ್ಗದರ್ಶನದಲ್ಲಿ ಉಪ್ಪಿನಂಗಡಿ ಪೊಲೀಸರು ಕಣಿಯೂರು ಗ್ರಾಮದ ಅಡೆಂಜ ಪ್ರದೇಶದಲ್ಲಿ ಇರುವ ಬಾಡಿಗೆ ಕಟ್ಟಡದ ಮೇಲೆ ದಾಳಿ ನಡೆಸಿದರು. ಈ ವೇಳೆ ನಕಲಿ ನೋಟುಗಳನ್ನು ಮುದ್ರಿಸಿ ಮಾರಾಟಕ್ಕೆ ಸಿದ್ಧಪಡಿಸುತ್ತಿದ್ದ ಆರೋಪಿಗಳನ್ನು ಬಂಧನ ಮಾಡಲಾಗಿದೆ.
ಬಂಧಿತರನ್ನು ಪುತ್ತೂರಿನ ಇಬ್ರಾಹಿಂ, ಸಲ್ಮಾನ್, ಕೇರಳದ ಕಾಸರಗೋಡು ಮೂಲದ ಶರೀಫ್ ಹಾಗೂ ಮೊಹಮ್ಮದ್ ನವಾಸ್, ಉತ್ತರ ಕನ್ನಡದ ಹಳಿಯಾಳದ ಸಂದೀಪ್, ಬೆಳ್ತಂಗಡಿಯ ಸಿರಾಜುದ್ದೀನ್ ಮತ್ತು ಇರ್ಷಾದ್ ಎಂದು ಗುರುತಿಸಲಾಗಿದೆ.
ಪ್ರಾಥಮಿಕ ತನಿಖೆಯ ಪ್ರಕಾರ, ಅಡೆಂಜ ನಿವಾಸಿ ಇದ್ರಿಸ್ ಅವರಿಗೆ ಸೇರಿದ ಹೊಸ ಕಟ್ಟಡದ ಮೂರು ಮನೆಗಳನ್ನು ಬಾಡಿಗೆಗೆ ಪಡೆದು ನಕಲಿ ನೋಟು ತಯಾರಿಕಾ ಕೇಂದ್ರವನ್ನಾಗಿ ಬಳಸಲಾಗುತ್ತಿತ್ತು. ಸಿರಾಜುದ್ದೀನ್ ಈ ಜಾಲದ ಪ್ರಮುಖ ಸೂತ್ರಧಾರ ಎಂದು ತಿಳಿದು ಬಂದಿದೆ.
ದಾಳಿಯ ವೇಳೆ 500 ಮುಖಬೆಲೆಯ ನಕಲಿ ನೋಟುಗಳ ಬಂಡಲ್, ಉನ್ನತ ಗುಣಮಟ್ಟದ ಮುದ್ರಣ ಯಂತ್ರಗಳು, ಸ್ಕ್ಯಾನರ್, ವಿಶೇಷ ಕಾಗದದ ಬಂಡಲ್‌ಗಳು, ವಿವಿಧ ಮಾದರಿಯ ಸೀಲುಗಳು ಹಾಗೂ ನೋಟುಗಳಿಗೆ ಅಗತ್ಯವಿರುವ ಭದ್ರತಾ ಪಟ್ಟಿಗಳ ಮಾದರಿಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಯಾರಿಗೂ ಅನುಮಾನ ಬಾರದಂತೆ ಕಾರ್ಖಾನೆ ನಡೆಸಿ, ಮುದ್ರಿಸಿದ ನಕಲಿ ನೋಟುಗಳನ್ನು ವಿವಿಧೆಡೆ ಪೂರೈಕೆ ಮಾಡಲು ಆರೋಪಿಗಳು ಸಂಚು ರೂಪಿಸಿದ್ದರು. ಕಳೆದ ಒಂದು ತಿಂಗಳಿನಿಂದ ಈ ಕೃತ್ಯ ನಡೆಯುತ್ತಿದ್ದು, ಜಾಲದ ಹಿಂದಿರುವ ಇತರರ ಪತ್ತೆಗೆ ತನಿಖೆ ಮುಂದುವರೆದಿದೆ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅರುಣ್ ಕುಮಾರ್ ತಿಳಿಸಿದ್ದಾರೆ.
ಉಪ್ಪಿನಂಗಡಿ ಠಾಣೆಯ ಸಬ್ ಇನ್ ಸ್ಪೆಕ್ಟರ್ ಸುತೇಶ್ ಕೆ ಪಿ ಅವರು ಈ ಬಗ್ಗೆ ಉಪ್ಪಿನಂಗಡಿ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಕೊಡಗು ಜಿಲ್ಲಾ ಪೊಲೀಸ್ ಅಧೀಕ್ಷಕ ಬಿಂದು ಮಣಿ ಆರ್ ಎನ್, ಹಾಗೂ ಕೊಡಗು ಜಿಲ್ಲಾ ಸಿಬ್ಬಂದಿ ಯೊಗೀಶ್ ಬಿ ಮತ್ತು ನಿರಂಜನ್ ಎಂ.ಎನ್, ದ.ಕ ಜಿಲ್ಲಾ ವಿಶೇûಷ ಘಟಕದ ಪೊಲೀಸ್ ಇನ್ ಸ್ಪೆಕ್ಟರ್ ನಂದಕುಮಾರ್ ಹಾಗೂ ಸಿಬ್ಬಂದಿ ಎ.ಎಸ್.ಐ ದೀಪಕ್, ಹೆಚ್.ಸಿ ಸತೀಶ್ ಹಾಗೂ ಎಚ್.ಸಿ ರೌಫ್ ಅವರು ಜಾಲವನ್ನು ಪತ್ತೆ ಮಾಡಿ ಪ್ರಕರಣ ದಾಖಲಿಸುವಲ್ಲಿ ಸಹಕರಿಸಿದ್ದಾರೆ.
What do you feel about this post?
Like
Love
Happy
Haha
Sad



