₹4.34 ಕೋಟಿ ವೆಚ್ಚದಲ್ಲಿ ಗಂಗಾವಳಿ ನದಿಯ ಮಣ್ಣಿನ ದಿಬ್ಬ ತೆರವು ಕಾಮಗಾರಿ: ಶಾಸಕ ಸತೀಶ್ ಸೈಲ್ ಚಾಲನೆ

ಜಿಲ್ಲಾ ಸುದ್ದಿ ಕಾರವಾರ ಶಿರಸಿ
<

Spread the love

ಅಂಕೋಲಾ: ತಾಲ್ಲೂಕಿನ ಶಿರೂರು ಗ್ರಾಮದಲ್ಲಿ ಭೂಕುಸಿತದಿಂದ ಗಂಗಾವಳಿ ನದಿಗೆ ಬಿದ್ದಿರುವ ಮಣ್ಣಿನ ದಿಬ್ಬವನ್ನು ತೆರವುಗೊಳಿಸುವ ಕಾಮಗಾರಿಗೆ ಶಾಸಕ ಹಾಗೂ ಕೆಎಂಸಿಎ ಅಧ್ಯಕ್ಷ ಸತೀಶ್ ಕೆ. ಸೈಲ್ ಗುರುವಾರ ಚಾಲನೆ ನೀಡಿದರು.

<

₹4.34 ಕೋಟಿ ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿರುವ ಕಾಮಗಾರಿಯಿಂದ ನದಿಯಲ್ಲಿ ನಿರ್ಮಾಣವಾಗಿರುವ ಕೃತಕ ಮಣ್ಣಿನ ದಿಬ್ಬವನ್ನು ತೆರವುಗೊಳಿಸಿ ನೀರಿನ ಹರಿವನ್ನು ಸುಗಮಗೊಳಿಸುವ ಉದ್ದೇಶ ಹೊಂದಲಾಗಿದೆ.

ಈ ಹಿಂದೆ ಉಳುವರೆ ಗ್ರಾಮ ಮತ್ತು ರಾಷ್ಟ್ರೀಯ ಹೆದ್ದಾರಿಗೆ ತೊಂದರೆಯಾಗದಂತೆ ಮಣ್ಣಿನ ದಿಬ್ಬ ತೆರವುಗೊಳಿಸಲು ಜಿಲ್ಲಾಡಳಿತದ ಮೂಲಕ ಪ್ರಸ್ತಾವನೆ ಸಲ್ಲಿಸಲಾಗಿತ್ತು. ಅದರಂತೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ₹2 ಕೋಟಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ನಾಲ್ಕು ಬಾರಿ ಟೆಂಡರ್ ಕರೆದರೂ ಗುತ್ತಿಗೆದಾರರು ಮುಂದೆ ಬಂದಿರಲಿಲ್ಲ ಎಂದು ಸೈಲ್ ಹೇಳಿದರು.

ನದಿಯ ಆಳ ಹಾಗೂ ಮಣ್ಣಿನ ಸಂಗ್ರಹದ ಪ್ರಮಾಣ ತಿಳಿಯಲು ಹೈಡ್ರೋಗ್ರಾಫಿಕ್ ಸಮೀಕ್ಷೆ ಅಗತ್ಯವಾಗಿದ್ದ ಹಿನ್ನೆಲೆಯಲ್ಲಿ ಮುಖ್ಯಮಂತ್ರಿ ಮತ್ತು ಉಪ ಮುಖ್ಯಮಂತ್ರಿ ಅವರೊಂದಿಗೆ ಚರ್ಚಿಸಿ ಹೆಚ್ಚುವರಿಯಾಗಿ ₹2.34 ಕೋಟಿ ಅನುದಾನ ಬಿಡುಗಡೆ ಮಾಡಿಸಲಾಗಿದೆ. ಒಟ್ಟು ₹4.34 ಕೋಟಿ ವೆಚ್ಚದ ಕಾಮಗಾರಿಯನ್ನು 4ಜಿ ವಿನಾಯಿತಿಯಡಿ ಅಬಿಷೇಯಾ ಓಷನ್ ಸರ್ವಿಸ್ ಸಂಸ್ಥೆಗೆ ವಹಿಸಲಾಗಿದೆ ಎಂದು ತಿಳಿಸಿದರು.

ಶಿರೂರು ಭೂಕುಸಿತ ದುರಂತದಲ್ಲಿ 11 ಮಂದಿ ಮೃತಪಟ್ಟಿದ್ದರು. ಎನ್‌ಡಿಆರ್‌ಎಫ್, ಎಸ್‌ಡಿಆರ್‌ಎಫ್, ನೌಕಾಪಡೆ ಸಿಬ್ಬಂದಿ, ಅಧಿಕಾರಿಗಳು ಹಾಗೂ ಸ್ಥಳೀಯ ಮೀನುಗಾರರ ಸಹಕಾರದೊಂದಿಗೆ 72 ದಿನಗಳ ಕಾಲ ಕಾರ್ಯಾಚರಣೆ ನಡೆಸಲಾಗಿತ್ತು. ಈ ವೇಳೆ ಕೇರಳದ ಅರ್ಜುನ ಅವರ ಮೃತದೇಹ ಪತ್ತೆಯಾಗಿದ್ದರೂ, ಸ್ಥಳೀಯ ಇಬ್ಬರ ಮೃತದೇಹಗಳು ಇನ್ನೂ ಪತ್ತೆಯಾಗಿಲ್ಲ ಎಂಬ ನೋವು ಉಳಿದಿದೆ ಎಂದು ಹೇಳಿದರು.

‘ಜನರಿಂದ ಆಯ್ಕೆಯಾದ ಪ್ರತಿನಿಧಿಗಳಿಗೆ ಜನರ ಸಮಸ್ಯೆಗಳ ಅರಿವು ಇರಬೇಕು. ಜನರಿಗಾಗಿ ಕೈಗೊಂಡ ಕೆಲಸಗಳಿಗೆ ಟೀಕೆಗಿಂತ ಪ್ರೋತ್ಸಾಹ ಸಿಕ್ಕರೆ ಅಭಿವೃದ್ಧಿ ಕಾರ್ಯಗಳಿಗೆ ಮತ್ತಷ್ಟು ವೇಗ ಸಿಗುತ್ತದೆ. ಕ್ಷೇತ್ರದ ಜನತೆ ನೀಡಿರುವ ಅವಕಾಶವನ್ನು ಸದುಪಯೋಗಪಡಿಸಿಕೊಂಡು ಮುಂದಿನ ಎರಡು ವರ್ಷಗಳಲ್ಲಿ ಹೆಚ್ಚಿನ ಅಭಿವೃದ್ಧಿ ಕಾಮಗಾರಿಗಳನ್ನು ಕೈಗೊಳ್ಳಲಾಗುವುದು’ ಎಂದು ಸೈಲ್ ಹೇಳಿದರು.

ಜಿಲ್ಲಾ ಗ್ಯಾರಂಟಿ ಅನುಷ್ಠಾನ ಪ್ರಾಧಿಕಾರದ ಉಪಾಧ್ಯಕ್ಷ ಪುರುಷೋತ್ತಮ ನಾಯ್ಕ, ತಾಲೂಕು ಕಾಂಗ್ರೆಸ್ ಅಧ್ಯಕ್ಷ ಪಾಂಡುರಂಗ ಗೌಡ, ತಹಶೀಲ್ದಾರ್ ನಿಶ್ಚಲ್ ನರೋನ್ಹಾ, ಬಂದರು ಇಲಾಖೆಯ ಕಾರ್ಯನಿರ್ವಾಹಕ ಅಭಿಯಂತರ ರಾಥೋಡ್, ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ರಾಜಕುಮಾರ್ ಮತ್ತಿತರರು ಕಾರ್ಯಕ್ರಮದಲ್ಲಿ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *