ತಣ್ಣೀರು ಬಾವಿ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಸರ್ಫಿಂಗ್ ಸ್ಪರ್ಧೆ 29 ರಿಂದ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಕ್ರೀಡೆ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಇದೇ 29 ರಿಂದ 31 ರವರಿಗೆ ತಣ್ಣೀರು ಬಾವಿ ಬೀಚ್‌ನಲ್ಲಿ ರಾಷ್ಟ್ರ ಮಟ್ಟದ ಸರ್ಫಿಂಗ್ ಸ್ಪರ್ಧೆ ನಡೆಯುತ್ತಿದ್ದು, ಇದಕ್ಕಾಗಿ ಐಚಿ ನಗೋಯಾ ಏಷ್ಯನ್ ಗೇಮ್ಸ್ 2026 ನಲ್ಲಿ ಸರ್ಫಿಂಗ್‌ನಲ್ಲಿ ಭಾರತದ ಸ್ಪರ್ಧಿಗಳು ಚೊಚ್ಚಲ ಪ್ರವೇಶಕ್ಕೆ ಸಿದ್ಧತೆ ನಡೆಸುತ್ತಿದ್ದು, ಸರ್ಫಿಂಗ್ ಸ್ಪರ್ಧಿಗಳಿಗೆ ಒಂದು ರೀತಿಯ ಹಬ್ಬದ ವಾತಾವರಣ ಕಟ್ಟಿಕೊಡುವುದಕ್ಕೆ ವೇದಿಕೆ ಸಿದ್ದವಾಗುತ್ತಿದೆ ಎಂದು ಜಿಲ್ಲಾಧಿಕಾರಿ ದರ್ಶನ್ ಎಚ್.ವಿ ಅವರು ಸೋಮವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಸರ್ಫಿಂಗ್ ಫೆಡರೇಶನ್ ಆಫ್ ಇಂಡಿಯಾ ಮತ್ತು ಕರ್ನಾಟಕದ ಜತೆಗೆ, ಎನ್‌ಎಂಶಿಎ ಸಹಭಾಗಿತ್ವದಲ್ಲಿ ಮೂರು ದಿನಗಳ ಮುಕ್ತ ಸರ್ಫಿಂಗ್ ಸ್ಪರ್ಧೆ ನಡೆಯಲಿದೆ. 2017 ರಿಂದ ಮಂಗಳೂರಿನಲ್ಲಿ ಸರ್ಫಿಂಗ್ ಸ್ಪರ್ಧೆ ನಡೆಸಲಾಗುತ್ತಿದ್ದು, ಸ್ಪರ್ಧೆಯ ಚಾಂಪಿಯನ್‌ಗಳು ಏಷ್ಯನ್ ಕ್ರೀಡಾಕೂಟದಲ್ಲಿ ಭಾಗವಹಿಸಲಿದ್ದು, ರಾಜ್ಯದ ಸರಕಾರದ ಬೆಂಬಲದೊಂದಿಗೆ ಸರ್ಫಿಂಗ್ ಸ್ಪರ್ಧೆಯನ್ನು ನಡೆಸಲಾಗುತ್ತಿದ್ದು, ಇದು ಕರಾವಳಿ ಜಿಲ್ಲೆಗಳಲ್ಲಿ ಪ್ರವಾಸೋದ್ಯಮ ಉತ್ತೇಜನಕ್ಕೂ ಪೂರಕ ಆಗಿದೆ. ಸರ್ಫಿಂಗ್ ಕ್ರೀಡೆಗೆ ಮಂಗಳೂರು ಬೀಚ್ ಪೂಕರವಾಗಿದ್ದು, ಈ ಹಿನ್ನೆಲೆಯಲ್ಲಿ ವಿವಿಧ ಸರ್ಫಿಂಗ್ ಕ್ಲಬ್‌ಗಳು ಇಲ್ಲಿ ನೆಲೆ ನಿಂತಿವೆ ಎಂದರು.

ಮೀನುಗಾರ ಸಮುದಾಯ ಸೇರಿದಂತೆ ಸ್ಥಳೀಯ ಹಲವು ಪ್ರತಿಭೆಗಳಿಗೆ ವೇದಿಕೆ ಆಗಿದ್ದು, ಸ್ಪರ್ಧೆಯಲ್ಲಿ ಕರ್ನಾಟಕ, ಕೇರಳ, ಗೋವಾ, ಆಂಧ್ರ ಪ್ರದೇಶ ಸೇರಿದಂತೆ ದೇಶದ ವಿವಿಧ ಕಡೆಗಳಿಂದ ಸರ್ಫಿಂಗ್ ಚಾಂಪಿಯನ್‌ಗಳು ಹಾಗೂ ಅಂತರ ರಾಷ್ಟ್ರೀಯ ಮಟ್ಟದ ಸರ್ಫಿಂಗ್ ತೀರ್ಪುಗಾರರು ಭಾಗವಹಿಸಲಿದ್ದಾರೆ ಎಂದರು.

ಸರ್ಫಿಂಗ್ ಸ್ವಾಮಿ ಫೌಂಡೇಷನ್‌ ಧನಂಜಯ್ ಶೆಟ್ಟಿ ಅವರು ಮಾತನಾಡಿ, ಕೆಲ ವರ್ಷಗಳಲ್ಲಿ ಸರ್ಫರ್‌ಗಳ ಬೆಳವಣಿಗೆ ಆಶಾಯದಾಕವಾಗಿದೆ. ಈ ಚಾಂಪಿಯನ್‌ ಷಿಪ್‌ನಲ್ಲಿ ದೇಶದ ಅಗ್ರ ಸರ್ಫರ್‌ಗಳು ವಿವಿಧ ವಿಭಾಗಗಳ ಸ್ಪರ್ಧೆಯಲ್ಲಿ ಭಾಗವಹಿಸುವ ಮೂಲಕ ಸರ್ಫಿಂಗ್ ಕ್ಷೇತ್ರದ ರೋಮಾಂಚಕ ಕ್ಷಣಗಳಿಗೆ ಮಂಗಳೂರಿನ ಕಡಲ ಕಿನಾರೆ ಸಾಕ್ಷಿ ಆಗಲಿದೆ ಎಂದರು.

ಸರ್ಫಿಂಗ್ ಚಾಂಪಿಯನ್ ಷಿಪ್‌ ಲೋಗೋವನ್ನು ಅನಾವರಣಗೊಳಿಸಲಾಯಿತು.

ರಾಜ್ಯ ಸರ್ಫಿಂಗ್ ಅಸೋಸಿಯೇಷನ್‌ ಶಮಂತ್ ಅವರು ಮಾತನಾಡಿ, ಈ ವರ್ಷದ ಟೂರ್ನಿ ಭಾರತೀಯ ಸರ್ಫಿಂಗ್‌ಗೆ ಅತ್ಯಂತ ಮಹತ್ವದ್ದಾಗಿದೆ. ಏಷ್ಯನ್ ಗೇಮ್ಸ್ ಸಮೀಪಿಸುತ್ತಿರುವುದರಿಂದ ರಾಷ್ಟ್ರೀಯ ಮಟ್ಟದ ಪ್ರತಿಯೊಂದು ಸ್ಪರ್ಧೆಯೂ ಆಟಗಾರರಿಗಾಗಿ ನಿರ್ಣಾಯಕ ಎಂದರು.

ಜಿಲ್ಲಾ ಪಂಚಾಯಿತಿ ಸಿಇಒ ಡಾ. ನಾರ್ವಡೆ ವಿನಾಯಕ ಕರ್ಭಾರಿ, ಸರ್ಫಿಂಗ್ ಅಸೋಸಿಯೇಷನ ಶ್ಯಾಮ್, ಕ್ರೀಡಾ ಮತ್ತು ಯುವ ಸಬಲೀಕರಣ ಇಲಾಖೆಯ ಉಪ ನಿರ್ದೇಶಕ ಪ್ರದೀಪ್ ಡಿಸೋಜ, ಪ್ರವಾಸೋದ್ಯಮ ಇಲಾಖೆ ಉಪ ನಿರ್ದೇಶಕ ಪ್ರದೀಪ್ ಕುಮಾರ್ ಇದ್ದರು.

Leave a Reply

Your email address will not be published. Required fields are marked *