ಬೆಂಗಳೂರು: ರಾಜಕೀಯ ಹೈಡ್ರಾಮಾದ ನಡುವೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜೀನಾಮೆ ಸಲ್ಲಿಕೆ ಮಾಡಿದ್ದು, ನಾನೇ ಸ್ವಯಂ ಆಗಿ ಹೈಕಮಾಂಡ್ ನಿರ್ದೇಶನದ ಮೇಲೆ ರಾಜೀನಾಮೆ ನೀಡಿದ್ದೇನೆ. ಇಲ್ಲಿ ಯಾರ ಒತ್ತಡವು ಇಲ್ಲ, ಹೈಕಮಾಂಡ್ ಅವರು ಹೇಳಿದಾಗ ರಾಜೀನಾಮೆ ಕೊಡುತ್ತೇನೆ ಎಂದು ಹೇಳಿದ್ದೆ ಅದರಂತೆ ನಡೆದುಕೊಂಡಿದ್ದೇನೆ, ಇದರಲ್ಲಿ ಯಾವುದೇ ಬೇಸರ, ಒತ್ತಡ ಇಲ್ಲ ಎಂದು ಸಿದ್ದರಾಮಯ್ಯ ಅವರು ರಾಜಭವನಕ್ಕೆ ತೆರಳಿ ರಾಜೀನಾಮೆ ಪತ್ರ ಸಲ್ಲಿಕೆ ಮಾಡಿದ ನಂತರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕಾಂಗ್ರೆಸ್ ಪಕ್ಷದಲ್ಲಿ ಸುಧೀರ್ಘವಾಗಿ ಮುಖ್ಯಮಂತ್ರಿ ಆಗಿ, ವಿರೋಧ ಪಕ್ಷದ ನಾಯಕನಾಗಿ ಸೇವೆ ಸಲ್ಲಿಸಲು ಅವಕಾಶ ಮಾಡಿಕೊಟ್ಟ ಕೇಂದ್ರದ ನಾಯಕರಾದ ರಾಹುಲ್ ಗಾಂಧಿ, ಸೋನಿಯಾ ಗಾಂಧಿ, ಮಲ್ಲಿಕಾರ್ಜುನ ಖರ್ಗೆ ಸೇರಿದಂತೆ ಎಲ್ಲರಿಗೂ ಅಭಿನಂದನೆ ಸಲ್ಲಿಸುವುದಾಗಿ ತಿಳಿಸಿದರು.
ಮುಖ್ಯಮಂತ್ರಿ ಅವರ ಅಧಿಕೃತ ನಿವಾಸ ಕಾವೇರಿಯಲ್ಲಿ ಸಚಿವರ ಜತೆಗೆ ಕೊನೆ ಉಪಾಹಾರ ಸಭೆ ನಡೆಯಿತು. ಸದಾ ರಾಜಕೀಯ ಚಟುವಟಿಕೆ, ಜನಸಾಗರ ಮತ್ತು ಅಧಿಕಾರದ ಗಿಜಿಗುಡುವಿಕೆಯಿಂದ ಕಂಗೊಳಿಸುತ್ತಿದ್ದ ಕಾವೇರಿ ನಿವಾಸದಲ್ಲಿ ಮೌನ ಆವರಿಸಿತ್ತು.
ಸಭೆಯಲ್ಲಿ ಭಾಗಿಯಾಗಿದ್ದ ಸಚಿವರು ಮತ್ತು ಆಪ್ತ ನಾಯಕರು ಸಿದ್ದರಾಮಯ್ಯ ಅವರ ದೀರ್ಘ ರಾಜಕೀಯ ಪಯಣವನ್ನು ನೆನೆದು ಭಾವುಕರಾದರು. ಹಲವು ಸಚಿವರ ಕಣ್ಣಾಲಿಗಳು ತೇವಗೊಂಡಿದ್ದವು. ಈ ವೇಳೆ ಸಹೋದ್ಯೋಗಿಗಳಿಗೆ ಧೈರ್ಯ ತುಂಬಿದ ಸಿದ್ದರಾಮಯ್ಯ, ಮಧ್ಯಾಹ್ನ ಭೋಜನದ ಬಳಿಕ ರಾಜೀನಾಮೆ ಪತ್ರದೊಂದಿಗೆ ಲೋಕಭವನದತ್ತ ಹೆಜ್ಜೆ ಹಾಕಿ ಸಲ್ಲಿಕೆ ಮಾಡಿ ಬಂದು ಪತ್ರಕರ್ತರ ಜತೆಗೆ ತಮ್ಮ ರಾಜಕೀಯ ಹೆ್ಜ್ಜೆಗಳನ್ನು ಅವಲೋಕನ ಮಾಡಿದರು.


