ಮಂಗಳೂರು: ರಾಜ್ಯದಲ್ಲಿ ‘ಲಂಚ ಗ್ಯಾರಂಟಿ’ ಸರ್ಕಾರದ ಆಡಳಿತ ನಡೆಯುತ್ತಿದ್ದು, ಸಚಿವರಿಗೆ ಕಮಿಷನ್ ನೀಡಲು ಅಧಿಕಾರಿಗಳು ಲಂಚ ಸಂಗ್ರಹಿಸುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಶಾಸಕ ಡಾ. ವೈ. ಭರತ್ ಶೆಟ್ಟಿ ಅವರು ಬುಧವಾರ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ಹೊರಹಾಕಿದರು.
ಸರ್ಕಾರದ ಸಚಿವರೇ ಭ್ರಷ್ಟಾಚಾರದಲ್ಲಿ ಭಾಗಿ ಆಗಿದ್ದಾರೆ ಎಂದು ಆಡಳಿತ ಪಕ್ಷದ ಶಾಸಕರೇ ಆರೋಪಿಸಿರುವುದು ಗಮನಾರ್ಹ ಸಂಗತಿ. ಪಾವತಿ ಕೋಟಾದಡಿ ಸಚಿವರಾಗಿರುವವರು ಅಧಿಕಾರಿಗಳ ಮೂಲಕ ಭ್ರಷ್ಟಾಚಾರದಲ್ಲಿ ತೊಡಗಿದ್ದಾರೆ ಎಂಬ ಆರೋಪಗಳು ಕೇಳಿಬರುತ್ತಿದ್ದು, ಇತ್ತೀಚಿನ ವಿದ್ಯಮಾನಗಳು ಇದಕ್ಕೆ ಸಾಕ್ಷಿ ಆಗಿವೆ ಎಂದರು.
ಉಪ ಲೋಕಾಯುಕ್ತರಾದ ಎನ್. ಬಿ. ವೀರಪ್ಪ ಅವರು ರಾಜ್ಯದ 100 ಮಂದಿಯಲ್ಲಿ 63 ಮಂದಿ ಲಂಚ ನೀಡಬೇಕಾದ ಪರಿಸ್ಥಿತಿ ಇದೆ ಎಂದು ಹೇಳಿರುವುದು ರಾಜ್ಯದಲ್ಲಿ ಭ್ರಷ್ಟಾಚಾರದ ಪ್ರಮಾಣಕ್ಕೆ ಸಾಕ್ಷಿ ಆಗಿದೆ ಎಂದು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಕಿಶೋರ್ ಕುಮಾರ್, ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಪ್ರೇಮಾನಂದ ಶೆಟ್ಟಿ, ಬಿಜೆಪಿ ಮುಖಂಡರಾದ ಸಂದೀಪ್ ಪಚ್ಚನಾಡಿ, ಗುರುಚರಣ್ ಹಾಗೂ ಮಾಧ್ಯಮ ಸಂಚಾಲಕ ಅರುಣ್ ಶೇಟ್ ಇದ್ದರು.
What do you feel about this post?
Like
Love
Happy
Haha
Sad





