ನವದೆಹಲಿ: ಮುಖ್ಯಮಂತ್ರಿ ದಿ.ಕೆ. ಶಿವಕುಮಾರ್ ಅವರು ದೆಹಲಿಯಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ರಾಜ್ಯದ ಕಾನೂನು ಸುವ್ಯವಸ್ಥೆ, ಭದ್ರತಾ ವ್ಯವಸ್ಥೆ ಹಾಗೂ ಪೊಲೀಸ್ ಇಲಾಖೆಯ ಆಧುನೀಕರಣಕ್ಕೆ ಸಂಬಂಧಿಸಿದ ಮಹತ್ವದ ಚರ್ಚೆ ನಡೆಸಿದರು.
ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಮೊದಲ ಬಾರಿಗೆ ದೆಹಲಿ ಪ್ರವಾಸ ಕೈಗೊಂಡಿರುವ ಅವರು ರಾಜ್ಯದ ಪೊಲೀಸ್ ವ್ಯವಸ್ಥೆಯನ್ನು ಬಲಪಡಿಸಲು ಕೇಂದ್ರ ಸರ್ಕಾರದ ಸಹಕಾರವನ್ನು ಕೋರಿದರು.
ರಾಜ್ಯದಲ್ಲಿ ಹೆಚ್ಚುತ್ತಿರುವ ಆನ್ಲೈನ್ ವಂಚನೆ ಮತ್ತು ಸೈಬರ್ ಅಪರಾಧಗಳನ್ನು ನಿಯಂತ್ರಿಸುವ ಉದ್ದೇಶದಿಂದ ಸುಮಾರು 360 ಕೋಟಿ ರೂಪಾಯಿ ವೆಚ್ಚದಲ್ಲಿ ಕರ್ನಾಟಕ ಸೈಬರ್ ಕ್ರೈಮ್ ನಿಯಂತ್ರಣ ಮತ್ತು ಸಂಯೋಜನಾ ಘಟಕ ಸ್ಥಾಪಿಸಲು ಸರ್ಕಾರ ಪ್ರಸ್ತಾವನೆ ಸಲ್ಲಿಸಿದೆ.
ಈ ಯೋಜನೆಗೆ ಶೀಘ್ರ ಅನುಮೋದನೆ ನೀಡುವಂತೆ ಮುಖ್ಯಮಂತ್ರಿ ಮನವಿ ಮಾಡಿದ್ದಾರೆ. ಈ ಘಟಕವು ಸೈಬರ್ ಅಪರಾಧಗಳ ಪತ್ತೆ, ತನಿಖೆ ಮತ್ತು ನಿಯಂತ್ರಣ ಕಾರ್ಯಗಳಲ್ಲಿ ಪ್ರಮುಖ ಪಾತ್ರ ವಹಿಸಲಿದೆ.
ವಿಜಯನಗರ ಮತ್ತು ರಾಮನಗರ ಜಿಲ್ಲೆಗಳಲ್ಲಿ ಹೆಚ್ಚುವರಿ ಇಂಡಿಯಾ ರಿಸರ್ವ್ ಬೆಟಾಲಿಯನ್ ಘಟಕಗಳನ್ನು ಸ್ಥಾಪಿಸಲು 243 ಕೋಟಿ ಅನುದಾನ ಬಿಡುಗಡೆ ಮಾಡುವಂತೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಇದರಿಂದ ರಾಜ್ಯದ ಭದ್ರತಾ ವ್ಯವಸ್ಥೆ ಇನ್ನಷ್ಟು ಬಲಪಡಲಿದೆ ಎಂದು ತಿಳಿಸಿದ್ದಾರೆ.

ಸುಪ್ರೀಂ ಕೋರ್ಟ್ ಮಾರ್ಗಸೂಚಿಯಂತೆ ರಾಜ್ಯದ ಪೊಲೀಸ್ ಠಾಣೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಮೇಲ್ದರ್ಜೆಗೆ ಏರಿಸುವ ಕುರಿತು ಸಭೆಯಲ್ಲಿ ಚರ್ಚೆ ನಡೆಯಿತು.
ಇದರ ಜೊತೆಗೆ ಕಾರಾಗೃಹಗಳ ಆಧುನೀಕರಣ ಹಾಗೂ ಭದ್ರತಾ ವ್ಯವಸ್ಥೆಗಳನ್ನು ತಂತ್ರಜ್ಞಾನ ಆಧಾರಿತವಾಗಿ ಸುಧಾರಿಸಲು ಕೇಂದ್ರದ ಸಹಕಾರ ಕೋರಲಾಗಿದೆ.
ರಾಜ್ಯದ ಪ್ರಸ್ತಾವನೆಗಳನ್ನು ಆಲಿಸಿದ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದೇಶದ ಭದ್ರತೆ ಹಾಗೂ ಕಾನೂನು ಸುವ್ಯವಸ್ಥೆ ವಿಚಾರದಲ್ಲಿ ಕರ್ನಾಟಕಕ್ಕೆ ಸಂಪೂರ್ಣ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದ್ದಾರೆ.
What do you feel about this post?
Like
Love
Happy
Haha
Sad
