ಕೊಲ್ಲೂರು (ಉಡುಪಿ ಜಿಲ್ಲೆ): ತಮಿಳುನಾಡಿನ ಮುಖ್ಯಮಂತ್ರಿಯಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಮೊದಲ ಬಾರಿಗೆ ಉಡುಪಿಗೆ ಆಗಮಿಸಿದ ಮುಖ್ಯಮಂತ್ರಿ ಸಿ. ಜೋಸೆಫ್ ವಿಜಯ್ ಅವರು ಪ್ರಸಿದ್ಧ ಕೊಲ್ಲೂರು ಮೂಕಾಂಬಿಕೆ ದೇವಿಯ ದರ್ಶನ ಪಡೆದುಕೊಂಡಿದ್ದಾರೆ.
ದೇವಾಲಯಕ್ಕೆ ಭೇಟಿ ನೀಡಿದ ವೇಳೆ ಸಿಎಂ ವಿಜಯ್ ಅವರು ದೇವಿಗೆ ವಿಶೇಷ ಕಾಣಿಕೆಗಳನ್ನು ಅರ್ಪಿಸಿ ಭಕ್ತಿಯಿಂದ ಪ್ರಾರ್ಥನೆ ಸಲ್ಲಿಸಿದರು.

ಶಕ್ತಿ ದೇವತೆ ಮೂಕಾಂಬಿಕೆಗೆ ಸಿಎಂ ವಿಜಯ್ ಅವರು ರೇಷ್ಮೆ ಸೀರೆ, ಫಲ–ತಾಂಬೂಲ ಅರ್ಪಿಸಿದರು. ಸುಮಾರು ಅರ್ಧ ಗಂಟೆಗಳ ಕಾಲ ದೇವಿಯ ಸನ್ನಿಧಿಯಲ್ಲಿ ಪ್ರಾರ್ಥನೆ ಸಲ್ಲಿಸಿದ ಅವರು, ನಂತರ ದೇವಿಗೆ 1 ಕೆಜಿ 600 ಗ್ರಾಂ ತೂಕದ ಬೆಳ್ಳಿ ಖಡ್ಗವನ್ನು ಕಾಣಿಕೆಯಾಗಿ ಅರ್ಪಿಸಿದರು ಎಂದು ದೇವಾಲಯ ಟ್ರಸ್ಟ್ ಅಧ್ಯಕ್ಷ ಬಾಬು ಹೆಗಡೆ ತಿಳಿಸಿದ್ದಾರೆ.
ದೇವಾಲಯಕ್ಕೆ ಆಗಮಿಸಿದ ಮುಖ್ಯಮಂತ್ರಿ ಅವರನ್ನು ಆಡಳಿತ ಮಂಡಳಿ ಟ್ರಸ್ಟಿಗಳು ಹೂಗುಚ್ಛ ನೀಡಿ ಸ್ವಾಗತಿಸಿದರು. ಮಂತ್ರಘೋಷಗಳ ನಡುವೆ ಅರ್ಚಕರು ಕ್ಷೇತ್ರದೊಳಗೆ ಬರಮಾಡಿಕೊಂಡರು.
ಶಲ್ಯ ಧರಿಸಿ ಆಗಮಿಸುವ ಮೂಲಕ ಸಿಎಂ ವಿಜಯ್ ದೇವಸ್ಥಾನದ ಶಿಷ್ಟಾಚಾರವನ್ನು ಪಾಲಿಸಿದರು. ಪ್ರಧಾನ ಅರ್ಚಕ ರಾಮಚಂದ್ರ ಅಡಿಗ ಅವರ ನೇತೃತ್ವದಲ್ಲಿ ಸಂಕಲ್ಪ ಪೂಜೆ ನೆರವೇರಿಸಲಾಯಿತು.
ದೇವಾಲಯದಲ್ಲಿ ವಿಶೇಷ ಪೂಜೆ ಅಥವಾ ಹೆಚ್ಚುವರಿ ಸಂಕಲ್ಪ ಇಲ್ಲದೆ, ಸಾಮಾನ್ಯ ವಿಧಿವಿಧಾನಗಳಂತೆ ಪೂಜೆ ನಡೆಯಿತು. ನಂತರ ದೀಪಾರಾಧನೆ ನೆರವೇರಿಸಲಾಯಿತು.
ಈ ವೇಳೆ ಅರ್ಚಕರು ಸಿಎಂಗೆ ರಕ್ಷಾ ದಾರವನ್ನು ಕಟ್ಟಿದರು. ಪೂಜೆ ಪೂರ್ಣಗೊಂಡ ಬಳಿಕ ಸಿಎಂ ವಿಜಯ್ ದೇವಸ್ಥಾನದಿಂದ ನಿರ್ಗಮಿಸಿದರು.
ಪ್ರಮುಖ ಅಂಶಗಳು
* ತಮಿಳುನಾಡು ಸಿಎಂ ಸಿ. ಜೋಸೆಫ್ ವಿಜಯ್ ಕೊಲ್ಲೂರು ಭೇಟಿ
* ಮೂಕಾಂಬಿಕೆ ದೇವಿಗೆ ರೇಷ್ಮೆ ಸೀರೆ ಮತ್ತು ಬೆಳ್ಳಿ ಖಡ್ಗ ಅರ್ಪಣೆ
* ಅರ್ಧ ಗಂಟೆಗಳ ಕಾಲ ದೇವಾಲಯದಲ್ಲಿ ಪ್ರಾರ್ಥನೆ
* ಶಿಷ್ಟಾಚಾರ ಪಾಲಿಸಿ ದೇವಸ್ಥಾನ ಪ್ರವೇಶ
* ಸಂಕಲ್ಪ ಪೂಜೆ ಮತ್ತು ದೀಪಾರಾಧನೆ ನೆರವೇರಿಕೆ
What do you feel about this post?
Like
Love
Happy
Haha
Sad
