ಸುರತ್ಕಲ್: ಜಾತಿ, ಮತ, ಧರ್ಮದ ಭೇದ ಮರೆತು ರಕ್ತದಾನ ಮಾಡುವುದರಿಂದ ಹಲವು ಜೀವಗಳನ್ನು ಉಳಿಸಬಹುದು. ದಾನಗಳಲ್ಲಿ ರಕ್ತದಾನ ಶ್ರೇಷ್ಠವಾದುದು ಎಂದು ಮಂಗಳೂರು ಉತ್ತರ ವಿಧಾನಸಭಾ ಕ್ಷೇತ್ರದ ಶಾಸಕ ಡಾ. ಭರತ್ ವೈ. ಶೆಟ್ಟಿ ಹೇಳಿದರು.
ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್, ಬಿಎಎಸ್‌ಎಫ್ ಇಂಡಿಯಾ ಲಿಮಿಟೆಡ್, ಶ್ರೀರಾಮ್ ಫೈನಾನ್ಸ್ ಮಂಗಳೂರು ಹಾಗೂ ಸುರತ್ಕಲ್ ಪೊಲೀಸ್ ಠಾಣೆಯ ಆಶ್ರಯದಲ್ಲಿ, ಕೆಎಂಸಿ ಆಸ್ಪತ್ರೆ ಮಂಗಳೂರು ಸಹಯೋಗದಲ್ಲಿ ಸುರತ್ಕಲ್ ವಿದ್ಯಾದಾಯಿನಿ ಪ್ರೌಢಶಾಲೆಯ ವಜ್ರಮಹೋತ್ಸವ ಸಭಾಂಗಣದಲ್ಲಿ ಆಯೋಜಿಸಿದ್ದ ಸ್ವಯಂಪ್ರೇರಿತ ರಕ್ತದಾನ ಹಾಗೂ ಆರೋಗ್ಯ ತಪಾಸಣಾ ಶಿಬಿರ, ವಿದ್ಯಾರ್ಥಿವೇತನ ವಿತರಣೆ ಮತ್ತು ಅಭಿನಂದನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್ ಹಲವು ಸಮಾಜಮುಖಿ ಚಟುವಟಿಕೆಗಳನ್ನು ನಡೆಸುತ್ತಿದೆ. ಇತರ ಸಂಸ್ಥೆಗಳ ಸಹಯೋಗದೊಂದಿಗೆ ರಕ್ತದಾನದಂತಹ ಸೇವಾ ಕಾರ್ಯಗಳನ್ನು ಆಯೋಜಿಸಿರುವುದು ಶ್ಲಾಘನೀಯ. ಇಂತಹ ಸೇವಾ ಕಾರ್ಯಗಳು ಮುಂದೆಯೂ ನಿರಂತರವಾಗಿ ನಡೆಯಬೇಕು ಎಂದು ಅವರು ಹೇಳಿದರು.
ಮಂಗಳೂರು ಕೇಂದ್ರ ಉಪವಿಭಾಗದ ಸಹಾಯಕ ಆಯುಕ್ತ ರವೀಶ್ ನಾಯಕ್ ಮಾತನಾಡಿ, ಪ್ರತಿಯೊಬ್ಬರಿಗೂ ಆರೋಗ್ಯ ಅತ್ಯಂತ ಮುಖ್ಯ. ಆರೋಗ್ಯವನ್ನು ಕಾಪಾಡಿಕೊಳ್ಳುವುದು ಎಲ್ಲರ ಮೊದಲ ಆದ್ಯತೆಯಾಗಬೇಕು ಎಂದರು.
ಶ್ರೀರಾಮ್ ಫೈನಾನ್ಸ್ ವತಿಯಿಂದ ಆರ್ಥಿಕವಾಗಿ ಹಿಂದುಳಿದ ಸುಮಾರು 100 ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ವಿತರಿಸಲಾಯಿತು.
ಪೊಲೀಸ್ ಇಲಾಖೆಯಲ್ಲಿ ಪೊಲೀಸ್ ಉಪನಿರೀಕ್ಷಕರಾಗಿ ಸೇವೆ ಸಲ್ಲಿಸಿ ನಿವೃತ್ತರಾದ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ಪುರಸ್ಕೃತ ಕುಶಲ ಮಣಿಯಾಣಿ ಅವರನ್ನು ಸನ್ಮಾನಿಸಲಾಯಿತು.
ಬಿಎಎಸ್‌ಎಫ್ ಸಂಸ್ಥೆಯ ಮಾನವ ಸಂಪನ್ಮೂಲ ವಿಭಾಗದ ಪ್ರಬಂಧಕ ಸಂತೋಷ್ ಪೈ, ಶ್ರೀರಾಮ್ ಫೈನಾನ್ಸ್ ವಲಯ ಮುಖ್ಯಸ್ಥ ಶರಚ್ಚಂದ್ರ ಭಟ್ ಕೆ., ಗಡಿಪ್ರಧಾನ ಪಿ.ಟಿ. ರೈ ಯಾನೆ ಮಂಜು ಕಾವ, ಡಾ. ದಿವಾಕರ ರಾವ್ ಸುರತ್ಕಲ್, ಸುರತ್ಕಲ್ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ಅಧ್ಯಕ್ಷ ಅಶೋಕ್ ಶೆಟ್ಟಿ, ಸುರತ್ಕಲ್ ಹಿಂದೂ ವಿದ್ಯಾದಾಯಿನಿ ಸಂಘದ ಕಾರ್ಯದರ್ಶಿ ಎಚ್. ಶ್ರೀರಂಗ, ಯಕ್ಷಗಾನ ಕಲಾವಿದ ರವಿಕುಮಾರ್ ಸುರತ್ಕಲ್, ಶ್ರೀರಾಮ್ ಫೈನಾನ್ಸ್ ಚೇತನ್ ಅರಸ್, ಉದ್ಯಮಿ ಮೋಹನ್ ಶೆಟ್ಟಿ ಬೊಳ್ಳಾರುಗುತ್ತು, ಮಂಗಳೂರು ಕೆಎಂಸಿ ಆಸ್ಪತ್ರೆಯ ವೈದ್ಯ ಡಾ. ಕಾರ್ತಿಕ್ ಕೆ.ಎಸ್., ಸುರತ್ಕಲ್ ಪೊಲೀಸ್ ಠಾಣೆಯ ಉಪಠಾಣಾಧಿಕಾರಿ ಶಶಿಧರ್ ಶೆಟ್ಟಿ ಇದ್ದರು.
ಸುರತ್ಕಲ್ ಸ್ಪೋರ್ಟ್ಸ್ ಮತ್ತು ಕಲ್ಚರಲ್ ಸೇವಾ ಟ್ರಸ್ಟ್‌ನ ಗೌರವಾಧ್ಯಕ್ಷ, ವಿರಾಜಪೇಟೆ ಉಪ ಪೊಲೀಸ್ ವರಿಷ್ಠಾಧಿಕಾರಿ ಮಹೇಶ್ ಕುಮಾರ್, ಗೌರವಾಧ್ಯಕ್ಷ ಮಹಾಬಲ ಪೂಜಾರಿ ಕಡಂಬೋಡಿ, ಅಧ್ಯಕ್ಷ ಮನೋಹರ ಶೆಟ್ಟಿ ಸೂರಿಂಜೆ, ಉಪಾಧ್ಯಕ್ಷ ನಾಗರಾಜ್ ಕಡಂಬೋಡಿ, ಕೋಶಾಧಿಕಾರಿ ಜಗದೀಪ್ ಶೆಟ್ಟಿ ಇದ್ದರು.
ಟ್ರಸ್ಟ್‌ನ ಕಾರ್ಯದರ್ಶಿ ಕಿರಣ್ ಆಚಾರ್ಯ ಸ್ವಾಗತಿಸಿ, ವಂದಿಸಿದರು.
What do you feel about this post?
Like
Love
Happy
Haha
Sad





