ಕಾರವಾರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಾಗರಾಜ ನಾಯಕ್ ಮಾತನಾಡಿದರು

ಮಂಗಳೂರು ಹೈಕೋರ್ಟ್ ಪೀಠ ವ್ಯಾಪ್ತಿಗೆ ಉತ್ತರ ಕನ್ನಡ ಸೇರ್ಪಡೆಗೆ ವಿರೋಧ, ಅ.13ರಂದು ಬೃಹತ್ ಪ್ರತಿಭಟನೆ: ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ

ಜಿಲ್ಲಾ ಸುದ್ದಿ ಕಾರವಾರ ಮಹಾನಗರ ರಾಜ್ಯ ಶಿರಸಿ

Spread the love

ಕಾರವಾರ: ಮಂಗಳೂರು ಹೈಕೋರ್ಟ್ ಪೀಠದ ವ್ಯಾಪ್ತಿಗೆ ಉತ್ತರ ಕನ್ನಡ ಜಿಲ್ಲೆಯನ್ನು ಸೇರ್ಪಡೆಗೊಳಿಸುವ ಸರ್ಕಾರದ ಪ್ರಸ್ತಾವನೆ ಇದೀಗ ಜಿಲ್ಲೆಯಲ್ಲಿ ತೀವ್ರ ವಿರೋಧಕ್ಕೆ ಕಾರಣವಾಗಿದೆ. ಪ್ರಸ್ತಾವನೆ ಕೈಬಿಡುವಂತೆ ಆಗ್ರಹಿಸಿರುವ ಜಿಲ್ಲಾ ವಕೀಲರ ಸಂಘವು ಇದೇ 13 ರಂದು ವಕೀಲರು ಹಾಗೂ ಸಾರ್ವಜನಿಕರ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ ನಡೆಸಲು ತೀರ್ಮಾನಿಸಲಾಗಿದೆ ಎಂದು ಕಾರವಾರದ ಪತ್ರಿಕಾ ಭವನದಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ನಾಗರಾಜ ನಾಯಕ ತಿಳಿಸಿದರು.

<

ಯಾವುದೇ ಕಾರಣಕ್ಕೂ ಉತ್ತರ ಕನ್ನಡವನ್ನು ಮಂಗಳೂರು ಪೀಠದ ವ್ಯಾಪ್ತಿಗೆ ಸೇರಿಸಲು ಅವಕಾಶ ನೀಡಲ್ಲ ಎಂದು ಸರ್ಕಾರವನ್ನ ಎಚ್ಚರಿಸಿದರು.

ಮಿತ್ರಸಮಾಜದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಮೆರವಣಿಗೆ: ಪ್ರತಿಭಟನೆ ಅಂಗವಾಗಿ 13ರಂದು ನಗರದ ಮಿತ್ರಸಮಾಜದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಯಲಿದೆ. ಬಳಿಕ ಜಿಲ್ಲಾಧಿಕಾರಿ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು. ಜಿಲ್ಲೆಯ ಎಲ್ಲ ತಾಲೂಕುಗಳ ವಕೀಲರ ಸಂಘಗಳು, ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯ ಪ್ರತಿನಿಧಿಗಳು ಹಾಗೂ ಜನಪ್ರತಿನಿಧಿಗಳು ಪ್ರತಿಭಟನೆಯಲ್ಲಿ ಭಾಗವಹಿಸಲಿದ್ದಾರೆ ಎಂದು ತಿಳಿಸಿದರು.

ಕಕ್ಷಿದಾರರಿಗೆ ಆರ್ಥಿಕ ಹೊರೆ: ಮಂಗಳೂರು ಪೀಠದ ವ್ಯಾಪ್ತಿಗೆ ಉತ್ತರ ಕನ್ನಡವನ್ನು ಸೇರಿಸುವುದರಿಂದ ವಕೀಲರಿಗಿಂತ ಹೆಚ್ಚಾಗಿ ಕಕ್ಷಿದಾರರಿಗೆ ಆರ್ಥಿಕ ಹೊರೆ ಮತ್ತು ಅನಗತ್ಯ ತೊಂದರೆ ಉಂಟಾಗಲಿದೆ. ಹೀಗಾಗಿ ಇದು ಕೇವಲ ವಕೀಲರ ಸಮಸ್ಯೆಯಲ್ಲ, ಸಾರ್ವಜನಿಕರ ಹಿತಾಸಕ್ತಿಗೆ ಸಂಬಂಧಿಸಿದ ವಿಚಾರವಾಗಿದೆ ಎಂದು ತಿಳಿಸಿದರು.

ಉತ್ತರ ಕನ್ನಡ ಜಿಲ್ಲೆಯ ಜನರು ಧಾರವಾಡ ಹೈಕೋರ್ಟ್ ಪೀಠದಲ್ಲಿ ಸುಲಭವಾಗಿ ವ್ಯವಹರಿಸುತ್ತಿದ್ದಾರೆ. ಕಾರವಾರ ಸೇರಿದಂತೆ ಜಿಲ್ಲೆಯ ವಿವಿಧ ಭಾಗಗಳ ಜನರಿಗೆ ಧಾರವಾಡ ಪೀಠದೊಂದಿಗೆ ಸಂಪರ್ಕ ಸಾಧಿಸುವುದು ಅನುಕೂಲಕರವಾಗಿದೆ. ಆದರೆ ಮಂಗಳೂರಿಗೆ ಪೀಠದ ವ್ಯಾಪ್ತಿ ಬದಲಾದರೆ ದೂರದ ಪ್ರಯಾಣ ಸೇರಿದಂತೆ ಹಲವು ಸಮಸ್ಯೆಗಳು ಎದುರಾಗಲಿವೆ ಎಂಬ ಆತಂಕವನ್ನು ವ್ಯಕ್ತಪಡಿಸಿದರು.

ಭಾಷಾ ತೊಡಕಿನ ಆತಂಕ: ಉತ್ತರ ಕನ್ನಡ ಜಿಲ್ಲೆಯ ಕೊಂಕಣಿ ಭಾಷಿಕರು ಸೇರಿದಂತೆ ವಿವಿಧ ಭಾಷಿಕ ಸಮುದಾಯದ ಜನರು ಧಾರವಾಡ ಪೀಠದಲ್ಲಿ ಕನ್ನಡದ ಮೂಲಕ ಸುಲಭವಾಗಿ ವ್ಯವಹರಿಸುತ್ತಿದ್ದಾರೆ. ಮಂಗಳೂರು ಭಾಗದಲ್ಲಿ ತುಳು ಭಾಷೆಯ ಪ್ರಾಬಲ್ಯವಿರುವುದರಿಂದ ಭವಿಷ್ಯದಲ್ಲಿ ಭಾಷಾ ತೊಡಕು ಎದುರಾಗುವ ಸಾಧ್ಯತೆಯೂ ಇದೆ ಎಂದು ತಿಳಿಸಿದರು.

ಈ ಹಿನ್ನೆಲೆಯಲ್ಲಿ ಯೋಜನೆ ಕೈಬಿಡುವಂತೆ ಈಗಾಗಲೇ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳು ಹಾಗೂ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಲಾಗಿದೆ. ಧಾರವಾಡ ಹೈಕೋರ್ಟ್ ಪೀಠದ ವ್ಯಾಪ್ತಿಯ ಎಂಟು ಜಿಲ್ಲೆಗಳ ವಕೀಲರ ಸಂಘಗಳೂ ಉತ್ತರ ಕನ್ನಡದ ಹೋರಾಟಕ್ಕೆ ಬೆಂಬಲ ವ್ಯಕ್ತಪಡಿಸಿವೆ ಎಂದು ತಿಳಿಸಿದರು.

ಕರಾವಳಿ ಎಂದರೆ ಮಂಗಳೂರು ಮಾತ್ರವಲ್ಲ: ಉತ್ತರ ಕನ್ನಡ ಜಿಲ್ಲೆಯ ಭೌಗೋಳಿಕ ವೈಶಿಷ್ಟ್ಯವನ್ನು ಪರಿಗಣಿಸದೆ ನಿರ್ಧಾರ ಕೈಗೊಳ್ಳುವುದು ಸರಿಯಲ್ಲ. ಜಿಲ್ಲೆಯು 10,227 ಚದರ ಕಿಲೋಮೀಟರ್‌ ವಿಸ್ತೀರ್ಣ ಹಾಗೂ ಸುಮಾರು 140 ಕಿಲೋಮೀಟರ್‌ ಉದ್ದದ ಕರಾವಳಿ ತೀರ ಹೊಂದಿದ್ದು, ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗಿಂತಲೂ ಭೌಗೋಳಿಕವಾಗಿ ದೊಡ್ಡದಾಗಿದೆ ಎಂದರು.

ಕರಾವಳಿ ಪ್ರದೇಶಕ್ಕೆ ಹೈಕೋರ್ಟ್ ಪೀಠದ ಅಗತ್ಯ ಇದ್ದರೆ, ಐತಿಹಾಸಿಕ ಹಿನ್ನೆಲೆ ಹೊಂದಿರುವ ಹಾಗೂ ಭೌಗೋಳಿಕವಾಗಿ ಕೇಂದ್ರಸ್ಥಾನದಲ್ಲಿರುವ ಹೊನ್ನಾವರ ಪರಿಗಣಿಸಬಹುದು. 1857ರ ಬ್ರಿಟಿಷರ ಆಡಳಿತಾವಧಿಯಲ್ಲಿಯೂ ಮಹತ್ವ ಪಡೆದಿದ್ದ ಹೊನ್ನಾವರ, ಇಂತಹ ಪೀಠಕ್ಕೆ ಸೂಕ್ತ ಸ್ಥಳವಾಗಬಹುದು ಎಂದರು.

ಜಿಲ್ಲೆಯಲ್ಲಿ ಒಟ್ಟು 11 ವಕೀಲರ ಸಂಘಗಳಿದ್ದರೂ ಮಂಗಳೂರಿನಲ್ಲಿ ಪೀಠ ಸ್ಥಾಪಿಸುವ ಪ್ರಸ್ತಾವನೆ ಮುಂದಿಡುತ್ತಿರುವುದು ತರ್ಕಬದ್ಧವಲ್ಲ ಎಂದು ವಕೀಲರು ಆಕ್ಷೇಪ ವ್ಯಕ್ತಪಡಿಸಿದರು.

ಜನಪ್ರತಿನಿಧಿಗಳು ಧ್ವನಿ ಎತ್ತಲಿ: ಉತ್ತರ ಕನ್ನಡ ಜಿಲ್ಲೆಗೆ ಬೇಡವಾದ ಯೋಜನೆಗಳನ್ನು ಹೇರುವ ಸರ್ಕಾರಗಳ ವಿರುದ್ಧ ಜಿಲ್ಲೆಯ ಜನಪ್ರತಿನಿಧಿಗಳು ಧ್ವನಿ ಎತ್ತಬೇಕು. ಜಿಲ್ಲೆಯ ಹಿತಾಸಕ್ತಿಗೆ ಧಕ್ಕೆ ಉಂಟುಮಾಡುವ ಯಾವುದೇ ನಿರ್ಧಾರವನ್ನು ಒಪ್ಪಿಕೊಳ್ಳುವುದಿಲ್ಲ ಎಂದರು.

ಸುದ್ದಿಗೋಷ್ಠಿಯಲ್ಲಿ ಸಂಘದ ಪದಾಧಿಕಾರಿಗಳಾದ ನಾಗರಾಜ ದೇಶಭಂಡಾರಿ, ಪದ್ಮಾ ತಾಂಡೇಲ್, ದೀಪಾ, ಸಂಜಯ ಸಾಳುಂಕೆ, ಚರಣ್ ಡಿ. ನಾಯ್ಕ, ಲಕ್ಷ್ಮೀ ರಾಣೆ ಹಾಗೂ ಸುಮಿತಾ ಭೂತೆ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *