ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಪೀಠಕ್ಕೆ ಗ್ರಿನ್ ಸಿಗ್ನಲ್ : ಎಂಎಲ್ಸಿ ಐವನ್ ಡಿಸೋಜ

ಜಿಲ್ಲಾ ಸುದ್ದಿ ಅಂತರ ಜಿಲ್ಲೆ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಕರಾವಳಿ ಭಾಗದ ಮಂಗಳೂರಿನಲ್ಲಿ ಹೈಕೋರ್ಟ್ ಸಂಚಾರ ಪೀಠ ಸ್ಥಾಪಿಸಬೇಕು ಎಂಬ ಎರಡು ವರ್ಷಗಳ ಬೇಡಿಕೆಗೆ ರಾಜ್ಯ ಸರಕಾರ ಗ್ರೀನ್ ಸಿಗ್ನಲ್ ನೀಡಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ಪೀಠಕ್ಕೆ ಅಗತ್ಯ ಮೂಲ ಸೌಕರ್ಯಗಳನ್ನು ಒದಗಿಸಲು ಸಿದ್ಧ ಇರುವುದಾಗಿ ಮುಖ್ಯ ನ್ಯಾಯಾಧೀಶರಿಗೆ ಪತ್ರದ ಮೂಲಕ ತಿಳಿಸಿದ್ದಾರೆ. ಈ ಮೂಲಕ ಪೀಠ ಸ್ಥಾಪನೆ ಶೇ 80 ರಷ್ಟು ಕಾರ್ಯ ಪೂರ್ಣಗೊಂಡಂತಾಗಿದೆ ಎಂದು ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ ಅವರು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

<

ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಹೈಕೋರ್ಟ್ ಮುಖ್ಯ ನ್ಯಾಯಾಧೀಶರಿಗೆ ಈ ಬಗ್ಗೆ ಸಲ್ಲಿಸಿರುವ ಪತ್ರದ ಪ್ರತಿ ಜತೆಗೆ ಅವರು ಮಾಹಿತಿ ಹಂಚಿಕೊಂಡು, ಹೈಕೋರ್ಟ್ ಮುಖ್ಯ ನ್ಯಾಯಾಧೀಶರ ನಿಯೋಗ ಮೇ ತಿಂಗಳ ಅಂತ್ಯದಲ್ಲಿ ಅಥವಾ ಜೂನ್ ಮೊದಲ ವಾರದಲ್ಲಿ ಮಂಗಳೂರಿಗೆ ಭೇಟಿ ನೀಡಿ, ಮುಖ್ಯಮಂತ್ರಿ ತಮ್ಮ ಪತ್ರದಲ್ಲಿ ತಿಳಿಸಿರುವಂತೆ ಇಲ್ಲಿ ಲಭ್ಯ ಇರುವ ಮೂಲ ಸೌಕರ್ಯಗಳನ್ನು ಪರಿಶೀಲಿಸಲಿದೆ. ಸಂಚಾರಿ ಪೀಠ ಸ್ಥಾಪಿಸಲು ಅಗತ್ಯ ಎಲ್ಲ ಇತರ ಸೌಲಭ್ಯಗಳನ್ನು ಕೂಡ ಒದಗಿಸಲು ಸಿದ್ಧ ಇರುವುದಾಗಿ ಮುಖ್ಯಮಂತ್ರಿ ಅವರು ಪತ್ರದಲ್ಲಿ ತಿಳಿಸಿರುವ ಕಾರಣ ಅಕ್ಟೋಬರ್ ವೊಳಗೆ ಸಂಚಾರ ಪೀಠ ಕಾರ್ಯಾರಂಭ ಆಗಬೇಕು ಎಂಬುದು ನಮ್ಮ ಆಶಯ ಎಂದರು.

ಮಂಗಳೂರಿನ ಹಳೆ ಜಿಲ್ಲಾಧಿಕಾರಿ ಕಚೇರಿ 50 ಸಾವಿರ ಚದರ ಅಡಿ ಕಟ್ಟಡ ಸದ್ಯ ಸಂಚಾರ ಪೀಠ ಪ್ರಾರಂಭಕ್ಕೆ ಸೂಕ್ತವಾಗಿದೆ. ನ್ಯಾಯಾಧೀಶರಿಗೆ ವಸತಿ ಸೌಲಭ್ಯ ಒದಗಿಸಲು ಐಎಎಸ್ ಅಧಿಕಾರಿಗಳಿಗಾಗಿ ನಿರ್ಮಾಣ ಆಗಿರುವ ಕ್ವಾಟರ್ಸ್ ಗಳ ಜಾಗದಲ್ಲಿ ನಿವೇಶನ ಗುರುತಿಸಲಾಗಿದೆ. ಪೀಠವು ಯಾವುದೇ ಅಡೆತಡೆಗಳಿಲ್ಲದೆ ಕಾರ್ಯ ನಿರ್ವಹಿಸಲು ಅಗತ್ಯ ಆಡಳಿತಾತ್ಮಕ ಹಾಗೂ ಇತರ ಕಚೇರಿ ಹಾಗೂ ಸೌಲಭ್ಯಗಳನ್ನು ಒದಗಿಸಲಾಗುವುದು ಎಂದು ಮುಖ್ಯಮಂತ್ರಿ ಅವರು ತಮ್ಮ ಪತ್ರದಲ್ಲಿ ತಿಳಿಸಿದ್ದಾರೆ ಎಂದರು.

ಈ ಬಗ್ಗೆ ಜಿಲ್ಲಾಧಿಕಾರಿ ಭೇಟಿಯಾಗಿ ಮಾತುಕತೆ ನಡೆಸಲಾಗಿದೆ. ಹಳೆ ಜಿಲ್ಲಾಧಿಕಾರಿ ಕಚೇರಿ ನವೀಕರಣ ಹಾಗೂ ನ್ಯಾಯಾಧೀಶರಿಗೆ ಅಗತ್ಯ ವಸತಿ ಸೌಕರ್ಯಗಳನ್ನು ಲೋಕೋಪಯೋಗಿ ಇಲಾಖೆ ಮೂಲಕ ನಿರ್ವಹಿಸಲು ಕೋರಲಾಗಿದೆ. ಮುಂದಿನ ವಾರ ಲೋಕೋಪಯೋಗಿ ಸಚಿವರನ್ನು ಭೇಟಿಯಾಗಿ ಖರ್ಚು ವೆಚ್ಚದ ಬಗ್ಗೆ ಮಾತನಾಡುವುದಾಗಿ ತಿಳಿಸಿದರು.

ಹೈಕೋರ್ಟ್ ಸಂಚಾರ ಪೀಠಕ್ಕೆ ಕಾರ್ಯಪ್ರವೃತ್ತರಾಗಲು ಸ್ಪೀಕರ್ ಯು.ಟಿ.ಖಾದರ್, ಕಾನೂನು ಸಚಿವ ಎಚ್.ಕೆ. ಪಾಟೀಲ್, ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಹಾಗೂ ಮಾಜಿ, ಹಾಲಿ ಸಂಸದರು, ಶಾಸಕರು ಎಲ್ಲರೂ ಪಕ್ಷಾತೀತವಾಗಿ ಸಹಕರಿಸಿದ್ದಾರೆ. ಪೀಠಕ್ಕಾಗಿ ಇಲ್ಲಿನ ಕಾನೂನು ವಿದ್ಯಾರ್ಥಿಗಳು ಪೋಸ್ಟ್ ಕಾರ್ಡ್ ಚಳವಳಿ, ಇಮೇಲ್ ಅಭಿಯಾನ ನಡೆಸಿದ್ದರು. ನಾಗರಿಕರು ಹಾಗೂ ವಕೀಲರ ನೇತೃತ್ವದಲ್ಲಿ ಹೋರಾಟಗಳು ನಡೆದಿವೆ. ಎಲ್ಲ ವರ್ಗದ ಸಾರ್ವಜನಿಕರ ಸಹಕಾರ ಸಿಕ್ಕಿದೆ ಎಂದರು.

ಸರಕಾರಿ ವಕೀಲ ಎಂ.ಪಿ. ನೊರೊನ್ಹ, ಮಂಗಳೂರು ಬಾರ್ ಅಸೋಸಿಯೇಷನ್ ಅಧ್ಯಕ್ಷ ರಾಘವೇಂದ್ರ, ಕಾರ್ಯದರ್ಶಿ ಶ್ರೀಧರ್, ಕೋಶಾಧಿಕಾರಿ ಗಿರೀಶ್ ಶೆಟ್ಟಿ, ಸುಜಿತ್ ಇದ್ದರು.

Leave a Reply

Your email address will not be published. Required fields are marked *