ಮೈಸೂರು: ಕಂದಾಯ ಮೇಲ್ಮನವಿ ಪ್ರಕರಣ ಇತ್ಯರ್ಥಪಡಿಸಲು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರೆಂಬ ಆರೋಪದ ನಡುವೆ, 2ನೇ ಕಂತಿನ 5.50 ಲಕ್ಷ ರೂಪಾಯಿ ಸ್ವೀಕರಿಸುತ್ತಿದ್ದಾಗಲೇ ಹುಣಸೂರು ಉಪ ವಿಭಾಗಾಧಿಕಾರಿ ಕಾವ್ಯಾರಾಣಿ ಅವರನ್ನು ಲೋಕಾಯುಕ್ತ ಅಧಿಕಾರಿಗಳು ರೆಡ್‌ಹ್ಯಾಂಡ್ ಆಗಿ ಬಂಧನ ಮಾಡಿದ್ದಾರೆ. ಈ ಕಾರ್ಯಾಚರಣೆ ಮೈಸೂರು ಜಿಲ್ಲೆಯಲ್ಲಿ ಭಾರೀ ಸಂಚಲನಕ್ಕೆ ಕಾರಣ ಆಗಿದೆ.
ಎಚ್.ಡಿ.ಕೋಟೆ ತಾಲ್ಲೂಕಿನ ಸರ್ವೆ ನಂ. 17/26ರ 4 ಎಕರೆ 20 ಗುಂಟೆ ಭೂಮಿಗೆ ಸಂಬಂಧಿಸಿದ ಕಂದಾಯ ಮೇಲ್ಮನವಿ ಪ್ರಕರಣವನ್ನು ಇತ್ಯರ್ಥಪಡಿಸಲು ನ್ಯಾಯಾಲಯ ಆದೇಶ ನೀಡಿತ್ತು. ಈ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಕಾವ್ಯಾರಾಣಿ ಅವರು 10 ಲಕ್ಷ ರೂಪಾಯಿ ಲಂಚಕ್ಕೆ ಬೇಡಿಕೆ ಇಟ್ಟಿದ್ದರು ಎಂದು ಆರೋಪಿಸಲಾಗಿದೆ.
ದೂರುದಾರರಾದ ಡಾ. ರೂಪಾ ಅವರು ಮೊದಲ ಕಂತಾಗಿ 5 ಲಕ್ಷ ರೂಪಾಯಿ ನೀಡಿದ ಬಳಿಕ ಲೋಕಾಯುಕ್ತ ಪೊಲೀಸರಿಗೆ ದೂರು ಸಲ್ಲಿಸಿದ್ದರು. ದೂರಿನ ಆಧಾರದ ಮೇಲೆ ಅಧಿಕಾರಿಗಳು ಬಲೆ ಬೀಸಿ, ಎರಡನೇ ಕಂತಿನ 5.50 ಲಕ್ಷ ರೂಪಾಯಿ ಲಂಚವನ್ನು ಕಾವ್ಯಾರಾಣಿ ಸ್ವೀಕರಿಸುತ್ತಿದ್ದ ವೇಳೆ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದರು.
ಕಾರ್ಯಾಚರಣೆಯಲ್ಲಿ ಲಂಚದ ಹಣವನ್ನು ವಶಪಡಿಸಿಕೊಂಡಿರುವ ಲೋಕಾಯುಕ್ತ ಪೊಲೀಸರು, ಪ್ರಕರಣ ದಾಖಲಿಸಿ ಮುಂದಿನ ತನಿಖೆ ಆರಂಭಿಸಿದ್ದಾರೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಇನ್ನಷ್ಟು ಮಾಹಿತಿಗಳು ತನಿಖೆಯ ವೇಳೆ ಬಹಿರಂಗವಾಗುವ ಸಾಧ್ಯತೆ ಇದೆ.
ಈ ಹಿಂದೆ ಕಾವ್ಯರಾಣಿ ಅವರು ಸಿರಿಸಿ ಉಪವಿಭಾಗದ ಉಪವಿಭಾಗಾಧಿಕಾರಿ ಆಗಿ ಸೇವೆ ಸಲ್ಲಿಸಿ, ಹುಣಸೂರಿಗೆ ವರ್ಗಾವಣೆ ಆಗಿದ್ದರು.
What do you feel about this post?
Like
Love
Happy
Haha
Sad





