ಕಾರವಾರ: ಕಡಲ ಅಲೆಗಳ ಅಬ್ಬರಕ್ಕೆ ಸಿಕ್ಕು ಹಾಕಿಕೊಂಡು ನೀರಿನಲ್ಲಿ ಮುಳುಗುತ್ತಿದ್ದ ಪ್ರವಾಸಿಗರನ್ನು ನಗರದ ಟ್ಯಾಗೋರ ಕಡಲ ತೀರದಲ್ಲಿ ಕ್ರಿಕೆಟ್ ಆಡುತ್ತಿದ್ದ ಕೊಂಕಣಿ ಖಾರ್ವಿ ವಾಡಾದ ಭಜರಂಗಿ ಮಿತ್ರರು ರಕ್ಷಣೆ ಮಾಡಿದ ಘಟನೆ ನಡೆದಿದೆ.
ಮಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಕುಟುಂಬದವರು ಟ್ಯಾಗೋರ ಕಡಲತೀರದಲ್ಲಿ ಈಜಲು ತೆರಳಿದ್ದ ವೇಳೆ ಕಡಲ ಅಲೆಗಳ ಅಬ್ಬರಕ್ಕೆ ಸುಳಿಗೆ ಸಿಕ್ಕು ಹಾಕಿಕೊಂಡು ಪ್ರಾಣಾಪಾಯದಲ್ಲಿ ಇದ್ದರು. ಈ ವೇಳೆ ಅಲ್ಲಿಯೇ ಇದ್ದ ಕುಟುಂಬದ ಸದಸ್ಯರು ನೆರವಿಗೆ ಕೂಗುತ್ತಿದ್ದರು, ಈ ವೇಳೆ ಅಲ್ಲಿಯೇ ಕ್ರಿಕೆಟ್ ಆಟುತ್ತಿದ್ದ ಭಜರಂಗಿ ಮಿತ್ರರು ನೆರವಿಗೆ ದೌಡಾಯಿಸಿ ಬಂದು ಜೀವದ ಹಂಗು ಲೆಕ್ಕಿಸದೇ ಇಬ್ಬರ ಜೀವ ರಕ್ಷಣೆ ಮಾಡಿದ್ದಾರೆ.
ಭಜರಂಗಿ ಮಿತ್ರರಾದ ಗೌತಮ ಬಾನಾವಳಿ, ಅಜಿತ್ ಮಾಳೇಕರ್, ಸಾಯಿನಾಥ ಬಾನಾವಳಿ, ವಿಘ್ನೇಶ್, ಶ್ರೇಯಸ್, ಅಮನ್, ಅಜಯ್, ರಾಹುಲ್ ಅವರು ಸಮುದ್ರದಲ್ಲಿ ಮುಳುಗುತ್ತಿದ್ದ ಇಬ್ಬರ ರಕ್ಷಣೆ ಮಾಡಿದ್ದು, ತಂಡದ ಕಾರ್ಯಕ್ಕೆ ಕುಟುಂಬದ ಸದಸ್ಯರು ಮತ್ತು ಸಾರ್ವಜನಿಕರಿಂದ ವ್ಯಾಪಕ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ತಮ್ಮ ಜೀವದ ಹಂಗು ತೊರೆದು ಪ್ರವಾಸಿಗರ ಪ್ರಾಣ ರಕ್ಷಣೆ ಮಾಡಿದ ಯುವಕರ ಕಾರ್ಯವನ್ನು ಕೊಂಕಣಿ ಖಾರ್ವಿ ಸಮಾಜದ ಮುಖಂಡ ಸೂರಜ್ ಕುರುಮಕರ್ ಅವರು ಶ್ಲಾಘಿಸಿದ್ದಾರೆ.
What do you feel about this post?
Like
Love
Happy
Haha
Sad
