ಮಂಗಳೂರು: ನಗರದ ಕೆಎಫ್‌ಸಿ ರೆಸ್ಟೋರೆಂಟ್‌ನಲ್ಲಿ ಕೊಳೆತ ಮಾಂಸ ಪತ್ತೆಯಾದ ಹಿನ್ನೆಲೆಯಲ್ಲಿ ಆಹಾರ ಮಳಿಗೆಗಳ ಫ್ರ್ಯಾಂಚೈಸಿಗಳಿಗೆ ಆರೋಗ್ಯ ಸಚಿವ ಯು.ಟಿ. ಖಾದರ್ ಎಚ್ಚರಿಕೆ ನೀಡಿದ್ದಾರೆ.
ಮುಂದಿನ ದಿನಗಳಲ್ಲಿ ಎಲ್ಲೆಡೆ ಇಂತಹ ದಾಳಿ ಹಾಗೂ ತಪಾಸಣೆಗಳು ನಡೆಯಲಿವೆ. ಆಹಾರ ಮಳಿಗೆಗಳ ಅಡುಗೆಮನೆ ಹಾಗೂ ಸಂಗ್ರಹ ಕೊಠಡಿಗಳಲ್ಲಿ ಗುಣಮಟ್ಟದ ಆಹಾರ ಪದಾರ್ಥಗಳನ್ನು ಮಾತ್ರ ಇರಿಸಬೇಕು. ನೈರ್ಮಲ್ಯ ಕಾಪಾಡಬೇಕು. ಯಾವುದೇ ಸಂದರ್ಭದಲ್ಲೂ ದಾಳಿ ನಡೆಸಬಹುದು ಎಂದು ಅವರು ಎಚ್ಚರಿಸಿದರು.
ಎಷ್ಟೇ ದೊಡ್ಡವರಾಗಿದ್ದರೂ, ಸಣ್ಣವರಾಗಿದ್ದರೂ ನಿಯಮ ಉಲ್ಲಂಘಿಸಿದರೆ ಬಿಡುವುದಿಲ್ಲ. ನಮಗೆ ಜನರ ಆರೋಗ್ಯವೇ ಮುಖ್ಯ. ಯಾರ ಮೇಲೂ ಕೋಪದಿಂದ ಅಥವಾ ಶಿಕ್ಷೆ ನೀಡುವ ಉದ್ದೇಶದಿಂದ ದಾಳಿ ನಡೆಸುತ್ತಿಲ್ಲ. ಜನರ ಆರೋಗ್ಯದ ದೃಷ್ಟಿಯಿಂದ ಪರಿಸ್ಥಿತಿ ತಿಳಿದುಕೊಳ್ಳುವುದು ಮತ್ತು ನೈರ್ಮಲ್ಯ ಕಾಪಾಡುವುದು ನಮ್ಮ ಜವಾಬ್ದಾರಿ’ ಎಂದು ಹೇಳಿದರು.
ಬೆಂಗಳೂರಿನಲ್ಲಿ ಪಂಚತಾರಾ ಹೋಟೆಲ್‌ಗಳು ಸೇರಿದಂತೆ ಹಲವು ಆಹಾರ ಮಳಿಗೆಗಳ ಮೇಲೆ ದಾಳಿ ನಡೆದಿದೆ. ಹೀಗಿದ್ದರೂ ಮಂಗಳೂರಿನಲ್ಲಿ ಇಂತಹ ಘಟನೆಗಳು ನಡೆಯುತ್ತಿರುವುದು ಸರಿಯಲ್ಲ. ಈಗಾಗಲೇ ಅಧಿಕಾರಿಗಳು ದಾಳಿ ನಡೆಸಿ ಆಹಾರ ಪದಾರ್ಥಗಳನ್ನು ಜಪ್ತಿ ಮಾಡಿದ್ದಾರೆ. ಮುಂದೆಯೂ ತಪಾಸಣೆ ಮುಂದುವರಿಯಲಿದೆ.
ಮುಂದಿನ ದಿನಗಳಲ್ಲಿ ಪಿಜಿ ಕೇಂದ್ರಗಳು ಹಾಗೂ ಹಾಸ್ಟೆಲ್‌ಗಳಿಗೂ ದಾಳಿ ನಡೆಸಲಾಗುವುದು ಎಂದರು.
ಕೇಟರಿಂಗ್ ಸಂಸ್ಥೆಗಳು, ಪಿಜಿ ಮತ್ತು ಹಾಸ್ಟೆಲ್ ನಡೆಸುವವರು ಆಹಾರ ಪೂರೈಕೆಯ ವ್ಯವಸ್ಥೆಯನ್ನು ಸಮರ್ಪಕವಾಗಿ ನಿರ್ವಹಿಸಬೇಕು. ವಿದ್ಯಾರ್ಥಿಗಳು, ಯುವಕ–ಯುವತಿಯರು ಮನೆ ಬಿಟ್ಟು ನಿಮ್ಮ ಬಳಿ ವಾಸಿಸುತ್ತಾರೆ. ಅವರಿಗೆ ಮನೆಯವರಂತೆ ಉತ್ತಮ ಆಹಾರ ಮತ್ತು ನೈರ್ಮಲ್ಯದ ವ್ಯವಸ್ಥೆ ಕಲ್ಪಿಸಬೇಕು. ಸ್ವಂತ ಮಕ್ಕಳಂತೆ ನೋಡಿಕೊಳ್ಳುವ ಮನೋಭಾವದಿಂದ ಪಿಜಿ ನಡೆಸಬೇಕು ಎಂದು ಹೇಳಿದರು.
ತಪಾಸಣೆ ವೇಳೆ ವ್ಯವಸ್ಥೆ ಸಮರ್ಪಕವಾಗಿಲ್ಲದಿರುವುದು ಕಂಡುಬಂದರೆ ಪಿಜಿ ನಡೆಸಲು ಅನುಮತಿ ನೀಡುವುದಿಲ್ಲ. ಈ ಕುರಿತು ಸಂಬಂಧಪಟ್ಟ ಇಲಾಖೆಗಳೊಂದಿಗೆ ಸಮನ್ವಯ ಸಾಧಿಸಿ ಜಂಟಿಯಾಗಿ ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಸಿದರು.
What do you feel about this post?
Like
Love
Happy
Haha
Sad





