ಎಸ್‌ಸಿಡಿಸಿಸಿ ಬ್ಯಾಂಕ್‌ಗೆ 131.14 ಕೋಟಿ ದಾಖಲೆಯ ಲಾಭ, ಶೇ 10.5ರಷ್ಟು ಡಿವಿಡೆಂಡ್: ಡಾ. ರಾಜೇಂದ್ರ ಕುಮಾರ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ (ಎಸ್‌ಸಿಡಿಸಿಸಿ) 2025–26ನೇ ಸಾಲಿನಲ್ಲಿ ಸಾರ್ವಕಾಲಿಕ ಗರಿಷ್ಠ ₹131.14 ಕೋಟಿ ಲಾಭ ಗಳಿಸಿದ್ದು, ಸದಸ್ಯ ಸಂಘಗಳಿಗೆ ಶೇ.10.5ರಷ್ಟು ಡಿವಿಡೆಂಡ್ ನೀಡುವುದಾಗಿ ಬ್ಯಾಂಕ್ ಅಧ್ಯಕ್ಷ ‘ಸಹಕಾರ ರತ್ನ’ ಡಾ. ಎಂ.ಎನ್. ರಾಜೇಂದ್ರ ಕುಮಾರ್ ಘೋಷಿಸಿದರು.

<

ಶನಿವಾರ ಬ್ಯಾಂಕಿನ ಸಭಾಭವನದಲ್ಲಿ ನಡೆದ 112ನೇ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಸಹಕಾರ ತತ್ವದ ಮೂಲ ಆಶಯಗಳಿಗೆ ಧಕ್ಕೆ ಬಾರದಂತೆ ಕಾರ್ಯನಿರ್ವಹಿಸುತ್ತಿರುವ ಎಸ್‌ಸಿಡಿಸಿಸಿ ಬ್ಯಾಂಕ್ 112 ವರ್ಷಗಳ ಯಶಸ್ವಿ ಪಯಣ ಪೂರ್ಣಗೊಳಿಸಿ ಅಭಿವೃದ್ಧಿಯ ಹಾದಿಯಲ್ಲಿ ಮುನ್ನಡೆಯುತ್ತಿದೆ ಎಂದರು.

ಬ್ಯಾಂಕಿಂಗ್ ಕ್ಷೇತ್ರದಲ್ಲಿ ತೀವ್ರ ಸ್ಪರ್ಧೆ ಇದ್ದರೂ ವರದಿ ವರ್ಷದಲ್ಲಿ ಬ್ಯಾಂಕ್ ಅತ್ಯುತ್ತಮ ಸಾಧನೆ ಮಾಡಿದೆ. ಅತ್ಯಾಧುನಿಕ ತಂತ್ರಜ್ಞಾನ ಅಳವಡಿಸಿಕೊಂಡು ಗ್ರಾಹಕರಿಗೆ ಇಂಟರ್‌ನೆಟ್ ಬ್ಯಾಂಕಿಂಗ್, ಕೋರ್ ಬ್ಯಾಂಕಿಂಗ್, ಮೊಬೈಲ್ ಆ್ಯಪ್, ಟ್ಯಾಬ್ ಬ್ಯಾಂಕಿಂಗ್, ಐಎಂಪಿಎಸ್ ಹಾಗೂ ಯುಪಿಐ ಸೇರಿದಂತೆ ವಿವಿಧ ಡಿಜಿಟಲ್ ಸೇವೆಗಳನ್ನು 113 ಶಾಖೆಗಳ ಮೂಲಕ ಒದಗಿಸಲಾಗುತ್ತಿದೆ. ಗ್ರಾಮೀಣ ಪ್ರದೇಶಗಳಲ್ಲಿ ಸೇವೆ ವಿಸ್ತರಿಸಲು 10 ಹೊಸ ಶಾಖೆಗಳನ್ನು ತೆರೆಯುವ ಯೋಜನೆಯನ್ನೂ ರೂಪಿಸಲಾಗಿದೆ ಎಂದು ತಿಳಿಸಿದರು.

ವರದಿ ವರ್ಷದಲ್ಲಿ ಬ್ಯಾಂಕ್ ಒಟ್ಟು 20,225 ಕೋಟಿ ವ್ಯವಹಾರ ನಡೆಸಿದೆ. 113 ಶಾಖೆಗಳ ಮೂಲಕ 9,264.85 ಕೋಟಿ ಠೇವಣಿ ಸಂಗ್ರಹಿಸಿದ್ದು, ರಾಜ್ಯದಲ್ಲೇ ಅತಿ ಹೆಚ್ಚು ಠೇವಣಿ ಸಂಗ್ರಹಿಸಿದ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದೆ. 9,766.75 ಕೋಟಿ ಮುಂಗಡ ನೀಡಲಾಗಿದೆ. ಬ್ಯಾಂಕಿನ 1,104 ಸಹಕಾರಿ ಸಂಘಗಳು ಸದಸ್ಯರಾಗಿದ್ದು, 554.11 ಕೋಟಿ ಪಾಲು ಬಂಡವಾಳ ಹಾಗೂ 15,011.73 ಕೋಟಿ ದುಡಿಯುವ ಬಂಡವಾಳ ಹೊಂದಿದೆ. ವಿವಿಧ ನಿಧಿಗಳಲ್ಲಿ312.89 ಕೋಟಿ ಇದೆ ಎಂದು ರಾಜೇಂದ್ರ ಕುಮಾರ್ ತಿಳಿಸಿದರು.

ಬ್ಯಾಂಕ್ ನೀಡಿದ ಕೃಷಿ ಸಾಲಗಳ ಮರುಪಾವತಿ ಶೇ100ರಷ್ಟು ದಾಖಲಾಗಿದೆ. ಕಳೆದ 31 ವರ್ಷಗಳಿಂದ ಸತತವಾಗಿ ಈ ಸಾಧನೆ ಮುಂದುವರಿದಿದ್ದು, ಇದು ರಾಷ್ಟ್ರೀಯ ದಾಖಲೆಯಾಗಿದೆ. ವರದಿ ವರ್ಷದಲ್ಲಿ ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಶೇ.100ರಷ್ಟು ಕೃಷಿ ಸಾಲ ವಸೂಲಿ ಸಾಧನೆ ಮಾಡಿವೆ ಎಂದರು.

ಸ್ವಸಹಾಯ ಗುಂಪುಗಳ ಸಂಘಟನೆಯಲ್ಲೂ ಬ್ಯಾಂಕ್ ಮುಂಚೂಣಿಯಲ್ಲಿದ್ದು, ವಿವಿಧ ಸಹಕಾರಿ ಸಂಘಗಳ ಜೋಡಣೆಯ ಮೂಲಕ 34,768 ಸ್ವಸಹಾಯ ಗುಂಪುಗಳನ್ನು ರಚಿಸಲಾಗಿದೆ. ಈ ಗುಂಪುಗಳ ಒಟ್ಟು ಉಳಿತಾಯ 156.14 ಕೋಟಿ. 34,746 ಗುಂಪುಗಳಿಗೆ ಸಾಲ ಸಂಯೋಜಿಸಲಾಗಿದ್ದು, 463.82 ಕೋಟಿ ಸಾಲ ಹೊರಬಾಕಿಯಾಗಿದೆ ಎಂದರು.

ಬ್ಯಾಂಕಿನ ಸರ್ವಾಂಗೀಣ ನಿರ್ವಹಣೆಗೆ ಕರ್ನಾಟಕ ರಾಜ್ಯ ಸಹಕಾರಿ ಅಪೆಕ್ಸ್ ಬ್ಯಾಂಕ್ ಪ್ರಶಸ್ತಿ 23 ಬಾರಿ ಲಭಿಸಿದೆ. ಸ್ವಸಹಾಯ ಗುಂಪುಗಳ ನಿರ್ವಹಣೆಗೆ ನಬಾರ್ಡ್ ಪ್ರಶಸ್ತಿ 19 ಬಾರಿ ದೊರೆತಿದೆ. ಅಟಲ್ ಪಿಂಚಣಿ ಯೋಜನೆಯ ಸಮರ್ಪಕ ಅನುಷ್ಠಾನಕ್ಕಾಗಿ ‘ಎಪಿವೈ ರಾಷ್ಟ್ರೀಯ ಪ್ರಶಸ್ತಿ’ ಐದನೇ ಬಾರಿಗೆ ಬ್ಯಾಂಕ್ ಪಡೆದುಕೊಂಡಿದೆ ಎಂದು ತಿಳಿಸಿದರು.

025–26ನೇ ಸಾಲಿನಲ್ಲಿ ಶೇ.100ರಷ್ಟು ಸಾಲ ವಸೂಲಾತಿ ಸಾಧನೆ ಮಾಡಿದ 12 ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳ ಅಧ್ಯಕ್ಷರು ಹಾಗೂ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳನ್ನು ಗೌರವಿಸಲಾಯಿತು. ವಿವಿಧ ವಿಭಾಗಗಳಲ್ಲಿ ಅತ್ಯುತ್ತಮ ಸಾಧನೆ ಮಾಡಿದ ಸಹಕಾರಿ ಸಂಘಗಳಿಗೂ ಪ್ರಶಸ್ತಿ ಪ್ರದಾನ ಮಾಡಲಾಯಿತು. ಉಭಯ ಜಿಲ್ಲೆಗಳ ಹಾಲು ಉತ್ಪಾದಕರ ಸಹಕಾರಿ ಸಂಘಗಳು, ಟಿಎಪಿಸಿಎಂಎಸ್‌, ಮಹಿಳಾ ಹಾಲು ಉತ್ಪಾದಕರ ಸಂಘಗಳು ಹಾಗೂ ವಿವಿಧೋದ್ದೇಶ ಸಹಕಾರಿ ಸಂಘಗಳಿಗೂ ಪ್ರಶಸ್ತಿ ನೀಡಲಾಯಿತು. ದ.ಕ. ಮತ್ತು ಉಡುಪಿ ಜಿಲ್ಲೆಗಳ ಒಟ್ಟು 38 ವಿವಿಧೋದ್ದೇಶ ಸಹಕಾರಿ ಸಂಘಗಳು ಪ್ರಶಸ್ತಿ ಸ್ವೀಕರಿಸಿದವು ಎಂದರು.

ವರದಿ ವರ್ಷದಲ್ಲಿ ಎಸ್‌ಸಿಡಿಸಿಸಿ ಬ್ಯಾಂಕಿನ ಎಂಟು ಸಿಬ್ಬಂದಿ ಹಾಗೂ ಪ್ರಾಥಮಿಕ ಸಹಕಾರಿ ಸಂಘಗಳ 17 ಮಂದಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳು ನಿವೃತ್ತರಾದ ಹಿನ್ನೆಲೆಯಲ್ಲಿ ಪ್ರತಿಯೊಬ್ಬರಿಗೂ ತಲಾ 50 ಸಾವಿರ ನೀಡಿ ಗೌರವಿಸಲಾಯಿತು.

ಸಭೆಯಲ್ಲಿ ಉಡುಪಿ ಶಾಸಕ ಯಶ್‌ಪಾಲ್ ಸುವರ್ಣ, ಬ್ಯಾಂಕಿನ ಉಪಾಧ್ಯಕ್ಷ ವಿನಯ ಕುಮಾರ್ ಸೂರಿಂಜೆ, ನಿರ್ದೇಶಕರು, ಸಹಕಾರಿ ಸಂಘಗಳ ಉಪನಿಬಂಧಕರು, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಜಯಕರ್ ಶೆಟ್ಟಿ ಇಂದ್ರಾಳಿ, ನವೋದಯ ವಿವಿಧೋದ್ದೇಶ ಸೌಹಾರ್ದ ಸಹಕಾರಿ ನಿಯಮಿತ ಅಧ್ಯಕ್ಷ ಮೇಘರಾಜ್ ಜೈನ್, ಬ್ಯಾಂಕಿನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಕೆ. ಗೋಪಾಲಕೃಷ್ಣ ಭಟ್ ಹಾಗೂ ಅಧಿಕಾರಿಗಳು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *