ಮಂಗಳೂರು: ಜೀವ ಮತ್ತು ಮರಣದ ನಡುವೆ ಹೋರಾಡುತ್ತಿದ್ದ 28 ವಾರಗಳ ಗರ್ಭಿಣಿಯೊಬ್ಬರ ಪ್ರಾಣವನ್ನು ಮಂಗಳೂರಿನ ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಯ ವೈದ್ಯರ ತಂಡ ಬಹುಶಿಸ್ತೀಯ ಚಿಕಿತ್ಸಾ ವಿಧಾನದ ಮೂಲಕ ಯಶಸ್ವಿಯಾಗಿ ಉಳಿಸಿದೆ. ಗರ್ಭಕೋಶದ ಹಿಂದಿನ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಗಾಯದ ಭಾಗ ಛಿದ್ರಗೊಂಡು ಆಂತರಿಕ ರಕ್ತಸ್ರಾವವಾಗಿದ್ದಲ್ಲದೆ, ಪ್ಲಾಸೆಂಟಾ ಪರ್ಕ್ರೀಟಾ ಎಂಬ ಗಂಭೀರ ತೊಡಕಿನಿಂದಾಗಿ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸಿದ್ದರೂ ತಾಯಿ ಹಾಗೂ ಮಗುವನ್ನು ರಕ್ಷಿಸುವಲ್ಲಿ ವೈದ್ಯರು ಯಶಸ್ವಿಯಾಗಿದ್ದಾರೆ.
ಬೆಳ್ತಂಗಡಿ ತಾಲ್ಲೂಕಿನ ಗ್ರಾಮೀಣ ಪ್ರದೇಶದ ಏಳು ತಿಂಗಳ ಗರ್ಭಿಣಿ ಎರಡು ದಿನಗಳ ಹಿಂದೆ ತೀವ್ರ ಹೊಟ್ಟೆ ನೋವಿನಿಂದ ಬಳಲಿದ್ದರು. ಖಾಸಗಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಪಡೆದ ಬಳಿಕ ಪ್ರಕರಣದ ಗಂಭೀರತೆ ಅರಿತ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಮಂಗಳೂರಿನ ಲೇಡಿಗೋಷನ್ ಆಸ್ಪತ್ರೆಗೆ ಕಳುಹಿಸಿದ್ದರು.
ಲೇಡಿಗೋಷನ್ ಆಸ್ಪತ್ರೆಯಲ್ಲಿ ವಿವಿಧ ಪರೀಕ್ಷೆ ನಡೆಸಿದಾಗ ಹೊಟ್ಟೆಯಲ್ಲಿ ಆಂತರಿಕ ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು. ಈ ವೇಳೆ ಗರ್ಭಿಣಿಯ ಹಿಮೊಗ್ಲೋಬಿನ್ ಪ್ರಮಾಣ ಕೇವಲ 6 ಗ್ರಾಂಗೆ ಇಳಿದಿತ್ತು. ರಕ್ತದಲ್ಲಿನ ಆಮ್ಲಜನಕದ ಮಟ್ಟವೂ ಅಪಾಯಕಾರಿಯಾಗಿ ಕುಸಿಯುತ್ತಿತ್ತು. ಇಂತಹ ಸ್ಥಿತಿಯಲ್ಲಿ ನಿಖರವಾದ ಕಾರಣ ಪತ್ತೆಹಚ್ಚಲು ಎಂಆರ್‌ಐ ಪರೀಕ್ಷೆಯ ಅಗತ್ಯ ಎದುರಾಯಿತು.
ರೋಗಿಯ ಸ್ಥಿತಿ ಗಂಭೀರವಾಗಿದ್ದರಿಂದ ಲೇಡಿಗೋಷನ್ ಆಸ್ಪತ್ರೆಯ ಹಿರಿಯ ತಜ್ಞ ವೈದ್ಯರು ಅಂಬುಲೆನ್ಸ್‌ನಲ್ಲೇ ರೋಗಿಯೊಂದಿಗೆ ತೆರಳಿ ಅತ್ತಾವರದ ಕೆಎಂಸಿ ಆಸ್ಪತ್ರೆಯಲ್ಲಿ ಎಂಆರ್‌ಐ ಪರೀಕ್ಷೆ ಮಾಡಿಸಿದರು. ಪರೀಕ್ಷೆಯ ಬಳಿಕ ತುರ್ತು ಶಸ್ತ್ರಚಿಕಿತ್ಸೆಯ ಅಗತ್ಯವಿರುವುದು ಖಚಿತವಾಯಿತು.
ಐಸಿಯು ಸೌಲಭ್ಯವೂ ಸವಾಲು
ಶಸ್ತ್ರಚಿಕಿತ್ಸೆಯ ಬಳಿಕ ಗರ್ಭಿಣಿಗೆ ತೀವ್ರ ನಿಗಾ ಘಟಕದ ಚಿಕಿತ್ಸೆ ಅಗತ್ಯವಿತ್ತು. ಹೀಗಾಗಿ ವೆನ್ಲಾಕ್ ಆಸ್ಪತ್ರೆಯಲ್ಲಿ ಐಸಿಯು ಹಾಸಿಗೆಗಾಗಿ ಪ್ರಯತ್ನಿಸಲಾಯಿತು. ಆದರೆ ಅಲ್ಲಿ ಹಾಸಿಗೆ ಲಭ್ಯವಿರಲಿಲ್ಲ. ಪರಿಸ್ಥಿತಿಗೆ ಎದೆಗುಂದದ ಲೇಡಿಗೋಷನ್ ಆಸ್ಪತ್ರೆಯ ತಂಡ ಗರ್ಭಿಣಿಯನ್ನು ಮರಳಿ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಮುಂದುವರಿಸಿತು.
ತಜ್ಞ ವೈದ್ಯರ ಪರಿಶೀಲನೆಯಲ್ಲಿ ಈ ಹಿಂದೆ ಬೇರೆ ಆಸ್ಪತ್ರೆಯಲ್ಲಿ ನಡೆದಿದ್ದ ಸಿಸೇರಿಯನ್ ಶಸ್ತ್ರಚಿಕಿತ್ಸೆಯ ಗಾಯದ ಭಾಗದಲ್ಲಿ ಗರ್ಭಕೋಶ ಛಿದ್ರಗೊಂಡು ರಕ್ತಸ್ರಾವವಾಗುತ್ತಿರುವುದು ಪತ್ತೆಯಾಯಿತು. ಇದರೊಂದಿಗೆ ಗರ್ಭಾಶಯದಲ್ಲಿ ಬೆಳೆದಿದ್ದ ಪ್ಲಾಸೆಂಟಾ ಗರ್ಭಕೋಶದ ಗೋಡೆಯನ್ನು ಸಂಪೂರ್ಣವಾಗಿ ಭೇದಿಸಿ ಹೊರಭಾಗದವರೆಗೂ ಬೆಳೆದಿದ್ದ ‘ಪ್ಲಾಸೆಂಟಾ ಪರ್ಕ್ರೀಟಾ’ ಎಂಬ ಅತ್ಯಂತ ಅಪಾಯಕಾರಿ ಸ್ಥಿತಿಯೂ ಇರುವುದು ಕಂಡುಬಂತು.
ಪ್ಲಾಸೆಂಟಾಗೆ ಸಂಬಂಧಿಸಿದ ರಕ್ತನಾಳಗಳು ಗರ್ಭಾಶಯದ ಹೊರಭಾಗವನ್ನು ದಾಟಿ ಮೂತ್ರಕೋಶದ ಭಾಗಕ್ಕೂ ವ್ಯಾಪಿಸಿದ್ದವು. ಹೀಗಾಗಿ ಶಸ್ತ್ರಚಿಕಿತ್ಸೆ ಸಂದರ್ಭದಲ್ಲಿ ತೀವ್ರ ಹಾಗೂ ನಿಯಂತ್ರಣಕ್ಕೆ ಬಾರದ ರಕ್ತಸ್ರಾವ ಉಂಟಾಗುವ ಅಪಾಯವಿತ್ತು. ಇಂತಹ ಪ್ರಕರಣಗಳಲ್ಲಿ ತಾಯಿ ಜೀವಕ್ಕೆ ಅಪಾಯ ಹೆಚ್ಚಿರುತ್ತದೆ.

ಮುಂಚಿತ ಸಿದ್ಧತೆ; ಬಹುಶಿಸ್ತೀಯ ತಂಡ, ಡಾ. ದುರ್ಗಾಪ್ರಸಾದ್ ನಿರ್ದೇಶನ:
ಇಂತಹ ಸಂಕೀರ್ಣ ಪ್ರಕರಣಗಳನ್ನು ಎದುರಿಸುವ ಉದ್ದೇಶದಿಂದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಕಳೆದ ಒಂದೂವರೆ ವರ್ಷದಿಂದ ಬಹುಶಿಸ್ತೀಯ ಚಿಕಿತ್ಸಾ ವಿಧಾನವನ್ನು ಅನುಸರಿಸಲಾಗುತ್ತಿದೆ. ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ನಿರ್ದೇಶನದಂತೆ ಪ್ರಸೂತಿ ತಜ್ಞರ ಜತೆಗೆ ಸಾಮಾನ್ಯ ಶಸ್ತ್ರಚಿಕಿತ್ಸಕರು, ಮೂತ್ರರೋಗ ತಜ್ಞ ಶಸ್ತ್ರಚಿಕಿತ್ಸಕರು, ಅರಿವಳಿಕೆ ತಜ್ಞರು ಹಾಗೂ ಇತರ ಪರಿಣತ ವೈದ್ಯರನ್ನು ಒಳಗೊಂಡ ತಂಡವನ್ನು ಸಿದ್ಧಪಡಿಸಲಾಗಿತ್ತು.
ಶಸ್ತ್ರಚಿಕಿತ್ಸೆ ವೇಳೆ ಹೆಚ್ಚಿನ ಪ್ರಮಾಣದ ರಕ್ತದ ಅವಶ್ಯಕತೆ ಎದುರಾಗುವ ಸಾಧ್ಯತೆಯನ್ನು ಗಮನದಲ್ಲಿಟ್ಟುಕೊಂಡು ವಿವಿಧ ರಕ್ತದ ಘಟಕಗಳನ್ನು ಮುಂಚಿತವಾಗಿಯೇ ಸಿದ್ಧಪಡಿಸಲಾಗಿತ್ತು. ರೋಗಿ ಸುಮಾರು ಮೂರೂವರೆ ಲೀಟರ್‌ವರೆಗೆ ರಕ್ತ ಕಳೆದುಕೊಳ್ಳುವ ಸಾಧ್ಯತೆಯ ಹಿನ್ನೆಲೆಯಲ್ಲಿ ಅಗತ್ಯ ರಕ್ತದ ಘಟಕಗಳನ್ನು ಸಂಗ್ರಹಿಸಿಡಲಾಗಿತ್ತು.
ಬೆಳಿಗ್ಗೆ 5 ಗಂಟೆಗೆ ಆರಂಭವಾದ ಕ್ಲಿಷ್ಟಕರ ಶಸ್ತ್ರಚಿಕಿತ್ಸೆ ಸುಮಾರು ನಾಲ್ಕು ಗಂಟೆಗಳ ಕಾಲ ನಡೆದು ಬೆಳಿಗ್ಗೆ 9 ಗಂಟೆಗೆ ಯಶಸ್ವಿಯಾಗಿ ಪೂರ್ಣಗೊಂಡಿತು. ವೈದ್ಯರು ಹಾಗೂ ಶುಶ್ರೂಷಕ ಸಿಬ್ಬಂದಿಯ ಸಂಘಟಿತ ಪ್ರಯತ್ನದಿಂದ ಗರ್ಭಿಣಿಯ ಜೀವ ಉಳಿಸುವಲ್ಲಿ ಯಶಸ್ಸು ದೊರೆಯಿತು.
ತಜ್ಞರ ತಂಡದ ಕಾರ್ಯತತ್ಪರತೆ
ವೈದ್ಯಕೀಯ ಅಧೀಕ್ಷಕ ಡಾ. ದುರ್ಗಾಪ್ರಸಾದ್ ಎಂ.ಆರ್. ಅವರ ಸಮರ್ಥ ಮೇಲ್ವಿಚಾರಣೆಯಲ್ಲಿ ನಿವಾಸಿ ವೈದ್ಯಾಧಿಕಾರಿ ಡಾ. ಜಗದೀಶ್ ಹಾಗೂ ಹಿರಿಯ ಪ್ರಸೂತಿ ತಜ್ಞ ಡಾ. ದಯಾನಂದ್ ಸಹಕಾರ ನೀಡಿದರು.
ಕೆಎಂಸಿ ಆಸ್ಪತ್ರೆಯ ಪ್ರಸೂತಿ ತಜ್ಞರಾದ ಡಾ. ಭಾರತಿ ಹಾಗೂ ಡಾ. ವಿನೀತಾ ಶೆಟ್ಟಿ, ಮೂತ್ರರೋಗ ತಜ್ಞ ಶಸ್ತ್ರಚಿಕಿತ್ಸಕರಾದ ಡಾ. ಸದಾನಂದ ಪೂಜಾರಿ ಹಾಗೂ ಡಾ. ಪ್ರಮೋದ್, ಸಾಮಾನ್ಯ ಶಸ್ತ್ರಚಿಕಿತ್ಸಕ ಡಾ. ಅಕ್ಷಿತ್, ಅರಿವಳಿಕೆ ತಜ್ಞರಾದ ಡಾ. ರಂಜನ್ ಹಾಗೂ ಡಾ. ರಕ್ಷಿತಾ ಸೇರಿದಂತೆ ತಜ್ಞರ ತಂಡ ಶಸ್ತ್ರಚಿಕಿತ್ಸೆಯಲ್ಲಿ ಪ್ರಮುಖ ಪಾತ್ರ ವಹಿಸಿತು.
ಶುಶ್ರೂಷಕಿಯರಾದ ಜಲಜ, ಅಶ್ವಿನಿ, ವಿನೀತಾ, ರೇವತಿ ಹಾಗೂ ಸಿಂಧು ಅವರ ಸಮಯೋಚಿತ ಸೇವೆಯೂ ಚಿಕಿತ್ಸೆ ಯಶಸ್ವಿಯಾಗಲು ನೆರವಾಯಿತು. ತುರ್ತು ಸಂದರ್ಭದಲ್ಲಿ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ ಅಂಬುಲೆನ್ಸ್ ಚಾಲಕ ಹರೀಶ್ ಅವರ ನೆರವೂ ಮಹತ್ವದ್ದಾಗಿತ್ತು.
‘ಲೇಡಿಗೋಷನ್‌ಗೆ ಕರೆತರದೇ ಇದ್ದಿದ್ದರೆ…’
ತನ್ನ ಪತ್ನಿಯನ್ನು ಸರ್ಕಾರಿ ಲೇಡಿಗೋಷನ್ ಆಸ್ಪತ್ರೆಗೆ ಕರೆತರದೇ ಇದ್ದಿದ್ದರೆ ಕುಟುಂಬದ ಸ್ಥಿತಿ ಅಂಧಕಾರಮಯವಾಗುತ್ತಿತ್ತು ಎಂದು ಗರ್ಭಿಣಿಯ ಪತಿ ವೈದ್ಯರ ಬಳಿ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಸರ್ಕಾರಿ ಲೇಡಿಗೋಷನ್ ಆಸ್ಪತ್ರೆ ಹಾಗೂ ಕಸ್ತೂರ್ಬಾ ವೈದ್ಯಕೀಯ ಕಾಲೇಜಿನ ತಜ್ಞರು ಒಗ್ಗೂಡಿ ಕೈಗೊಂಡ ಚಿಕಿತ್ಸೆ ಸಂಕೀರ್ಣ ಹಾಗೂ ಅಪರೂಪದ ಪ್ರಕರಣದಲ್ಲಿ ತಾಯಿಯ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದು, ಸರ್ಕಾರಿ ಆರೋಗ್ಯ ವ್ಯವಸ್ಥೆಯ ಸಾಮರ್ಥ್ಯಕ್ಕೆ ಮತ್ತೊಂದು ಉದಾಹರಣೆಯಾಗಿದೆ.
What do you feel about this post?
Like
Love
Happy
Haha
Sad





