ಬೆಂಗಳೂರು: ಬಿಡುಗಡೆಯಾಗುವ ಮುನ್ನವೇ ದೇಶದಾದ್ಯಂತ ನಡೆದ ವಿಶೇಷ ಪ್ರದರ್ಶನಗಳ ಮೂಲಕ ಸಿನಿಪ್ರಿಯರ ಮೆಚ್ಚುಗೆ ಗಳಿಸಿರುವ ‘ಓಹ್ ಮೈ ಡಾಗ್’ ಚಿತ್ರವು ಆಗಸ್ಟ್ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಬಿಡುಗಡೆಯಾಗಲು ಸಜ್ಜಾಗಿದೆ. ನಿರ್ಮಾಪಕ-ನಿರ್ದೇಶಕ ಅಮಿತ್ ರೈ ಅವರ ಈ ಕೌಟುಂಬಿಕ ಮನರಂಜನಾ ಚಿತ್ರವು ಭಾವನಾತ್ಮಕ ಕಥಾಹಂದರ, ಮನುಷ್ಯ ಮತ್ತು ಶ್ವಾನಗಳ ನಡುವಿನ ಆತ್ಮೀಯ ಸಂಬಂಧ ಹಾಗೂ ಪ್ರಾಣಿ ದಯೆಯ ಸಂದೇಶದ ಮೂಲಕ ಪ್ರೇಕ್ಷಕರ ಮನಸ್ಸನ್ನು ಗೆದ್ದಿದೆ.

ಸಾಮಾನ್ಯವಾಗಿ ಬಿಡುಗಡೆಯ ಮುನ್ನ ಭಾರೀ ಪ್ರಮಾಣದ ಜಾಹೀರಾತು ಮತ್ತು ಪ್ರಚಾರಕ್ಕೆ ಒತ್ತು ನೀಡುವ ಚಿತ್ರರಂಗದ ನಡುವೆ, ‘ಓಹ್ ಮೈ ಡಾಗ್’ ಚಿತ್ರತಂಡ ವಿಭಿನ್ನ ಮಾರ್ಗವನ್ನು ಅನುಸರಿಸಿದೆ. ಸಿನಿಮಾ ಬಿಡುಗಡೆಯಾಗುವ ಮೊದಲೇ ದೇಶದ ವಿವಿಧ ನಗರಗಳಲ್ಲಿ ವಿಶೇಷ ಪ್ರದರ್ಶನಗಳನ್ನು ಆಯೋಜಿಸಿ, ಪ್ರೇಕ್ಷಕರಿಂದ ದೊರೆತ ನೈಜ ಅಭಿಪ್ರಾಯಗಳನ್ನೇ ಪ್ರಮುಖ ಪ್ರಚಾರದ ಸಾಧನವಾಗಿ ಬಳಸಿಕೊಂಡಿದೆ. ಈ ಹಿಂದೆ ‘ದಿ ಲಂಚ್ ಬಾಕ್ಸ್’ ಹಾಗೂ ‘ಲಾಪತಾ ಲೇಡೀಸ್’ ಸಿನಿಮಾಗಳು ಅನುಸರಿಸಿದ್ದ ಇದೇ ಮಾದರಿಯ ಪ್ರಚಾರ ತಂತ್ರವನ್ನು ಈ ಚಿತ್ರತಂಡವೂ ಅಳವಡಿಸಿಕೊಂಡಿದೆ.
ಇಂದೋರ್, ನವದೆಹಲಿ, ಪುಣೆ, ಲಕ್ನೋ, ಕೋಲ್ಕತ್ತಾ, ಪಟ್ನಾ, ಅಹಮದಾಬಾದ್, ಗುವಾಹಾಟಿ, ಜೈಪುರ ಹಾಗೂ ಬೆಂಗಳೂರಿನಲ್ಲಿ ನಡೆದ ವಿಶೇಷ ಪ್ರದರ್ಶನಗಳಲ್ಲಿ ಚಿತ್ರಕ್ಕೆ ಅತ್ಯುತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ. ವಿಶೇಷವಾಗಿ ಬೆಂಗಳೂರಿನಲ್ಲಿ ನಡೆದ ಪ್ರದರ್ಶನದಲ್ಲಿ ಪಾಲ್ಗೊಂಡಿದ್ದ ವೀಕ್ಷಕರು, ‘ಓಹ್ ಮೈ ಡಾಗ್’ ಅನ್ನು ಇಡೀ ಕುಟುಂಬ ಒಟ್ಟಾಗಿ ಕುಳಿತು ನೋಡಬಹುದಾದ ಮನಮುಟ್ಟುವ ಚಿತ್ರ ಎಂದು ಪ್ರಶಂಸಿಸಿದ್ದಾರೆ. ಚಿತ್ರದ ಪಾತ್ರಗಳು, ಹೃದಯಸ್ಪರ್ಶಿ ಕಥೆ ಹಾಗೂ ಪ್ರಾಣಿ ಪ್ರೀತಿಯ ಸಂದೇಶ ಪ್ರೇಕ್ಷಕರ ಗಮನ ಸೆಳೆದಿವೆ.
ಚಿತ್ರದ ಕುರಿತು ಮಾತನಾಡಿರುವ ಲೇಖಕ, ನಿರ್ದೇಶಕ ಹಾಗೂ ನಿರ್ಮಾಪಕ ಅಮಿತ್ ರೈ, “ಕೆಲವು ಸಿನಿಮಾಗಳಿಗೆ ಪ್ರೇಕ್ಷಕರೇ ನಿಜವಾದ ಪ್ರಚಾರಕರು. ನಾವು ಈ ಚಿತ್ರವನ್ನು ಅತ್ಯಂತ ಪ್ರಾಮಾಣಿಕತೆಯಿಂದ ನಿರ್ಮಿಸಿದ್ದೇವೆ. ಪ್ರೇಕ್ಷಕರಿಂದ ದೊರೆಯುವ ನೈಜ ಪ್ರೀತಿಗಿಂತ ದೊಡ್ಡ ಪ್ರಚಾರ ಮತ್ತೊಂದಿಲ್ಲ. ಜನರು ಮೊದಲು ಸಿನಿಮಾ ನೋಡಿ, ತಮ್ಮ ಅನುಭವವನ್ನು ಮತ್ತೊಬ್ಬರೊಂದಿಗೆ ಹಂಚಿಕೊಳ್ಳಲಿ ಎಂಬುದೇ ನಮ್ಮ ಉದ್ದೇಶ,” ಎಂದು ಹೇಳಿದ್ದಾರೆ.
‘ಬಾಬುಲಾಲ್ ಬಿಸ್ಕೋಪ್’ ಹಾಗೂ ‘ಥಿಂಕಿಂಗ್ ಹ್ಯಾಟ್ಸ್ ಎಂಟರ್‌ಟೇನ್‌ಮೆಂಟ್’ ಬ್ಯಾನರ್ ಅಡಿಯಲ್ಲಿ ಅಮಿತ್ ರೈ, ರಾಜೇಶ್ ಭಾರದ್ವಾಜ್ ಮತ್ತು ಸನಾ ವಾರ್ಸಿ ಅವರೊಂದಿಗೆ ಸೇರಿ ಚಿತ್ರವನ್ನು ನಿರ್ಮಿಸಿ ನಿರ್ದೇಶಿಸಿದ್ದಾರೆ. ಚಿತ್ರದಲ್ಲಿ ಮಾಹಿ ರೈ, ಪಂಕಜ್ ತ್ರಿಪಾಠಿ, ಗೀತಾ ಅಗರ್ವಾಲ್ ಶರ್ಮಾ, ರಾಜೇಶ್ ಕುಮಾರ್, ಪವನ್ ಮಲ್ಹೋತ್ರಾ, ಸುಲಕ್ಷಣಾ ಬರುವಾ ಮತ್ತು ವಿಜಯ್ ಮಿಶ್ರಾ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸಿದ್ದು, ‘ಆಸ್ಕರ್’ ಮತ್ತು ‘ಬ್ರೂನೋ’ ಸೇರಿದಂತೆ 250ಕ್ಕೂ ಹೆಚ್ಚು ಶ್ವಾನಗಳು ಚಿತ್ರದಲ್ಲಿ ಕಾಣಿಸಿಕೊಂಡಿವೆ.
ದೇಶದ ವಿವಿಧ ಭಾಗಗಳಲ್ಲಿ ನಡೆದ ವಿಶೇಷ ಪ್ರದರ್ಶನಗಳಿಂದ ಉತ್ತಮ ಜನಾಭಿಪ್ರಾಯ ಗಳಿಸಿರುವ ‘ಓಹ್ ಮೈ ಡಾಗ್’ ಚಿತ್ರವು ಈಗಾಗಲೇ ಸಿನಿಪ್ರಿಯರಲ್ಲಿ ಕುತೂಹಲ ಮೂಡಿಸಿದ್ದು, ಆಗಸ್ಟ್ 7ರಂದು ವಿಶ್ವಾದ್ಯಂತ ಚಿತ್ರಮಂದಿರಗಳಲ್ಲಿ ಪ್ರೇಕ್ಷಕರ ಮುಂದೆ ಬರಲಿದೆ.
What do you feel about this post?
Like
Love
Happy
Haha
Sad





