ಚಾಲಕನ ಪುತ್ರಿಗೆ ವೈದ್ಯಕೀಯ ಪ್ರವೇಶ ಭಾಗ್ಯ: ಆಳ್ವಾಸ್ ದತ್ತು ಯೋಜನೆಯಿಂದ ಕನಸು ನನಸು, ಸಮಾಜಕ್ಕೆ ಮರಳಿ ನೀಡುವ ಸಂಕಲ್ಪ: ಡಾ. ಮೋಹನ್ ಆಳ್ವ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿಕ್ಷಣ ಶಿರಸಿ

Spread the love

ಮೂಡುಬಿದಿರೆ: ಸೀಮಿತ ಆರ್ಥಿಕ ಹಿನ್ನೆಲೆಯ ಕುಟುಂಬದಿಂದ ಬಂದ ವಿದ್ಯಾರ್ಥಿನಿಯೊಬ್ಬಳು ಪರಿಶ್ರಮ, ಸೂಕ್ತ ಮಾರ್ಗದರ್ಶನ ಹಾಗೂ ಆಳ್ವಾಸ್ ಪದವಿಪೂರ್ವ ಕಾಲೇಜಿನ ದತ್ತು ಯೋಜನೆಯ ನೆರವಿನಿಂದ ವೈದ್ಯಕೀಯ ಶಿಕ್ಷಣದ ಕನಸು ನನಸಾಗಿಸಿಕೊಂಡಿದ್ದಾರೆ.

<

ಕಾರ್ಕಳದ ಕುಂಟಲ್ಪಾಡಿಯ ನಿವಾಸಿ ಸ್ನೇಹಾ, ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ (ಎಐಎಂಎಸ್‌ಆರ್‌ಸಿ) ಮೊದಲ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿ ಪ್ರವೇಶ ಪಡೆದಿದ್ದಾರೆ. ಸರ್ಕಾರಿ ಕೋಟಾದಡಿ ಎಂಬಿಬಿಎಸ್ ಸೀಟು ಪಡೆದಿರುವುದು ಅವರ ಸಾಧನೆಯ ವಿಶೇಷತೆಯಾಗಿದೆ.

ಸ್ನೇಹಾ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಜೆಸೀಸ್ ಹೈಸ್ಕೂಲ್‌ನಿಂದ 590 ಅಂಕಗಳನ್ನು ಗಳಿಸಿದ್ದರು. ಬಳಿಕ ಆಳ್ವಾಸ್ ಪದವಿಪೂರ್ವ ಕಾಲೇಜಿಗೆ ಸೇರ್ಪಡೆಯಾಗಿ, ಆಳ್ವಾಸ್‌ನ ಮೆರಿಟ್ ಅಡಾಪ್ಷನ್ ಸ್ಕೀಮ್ (ದತ್ತು ಯೋಜನೆ) ಅಡಿಯಲ್ಲಿ ಶಿಕ್ಷಣ ಮುಂದುವರಿಸಿದರು. ಆಳ್ವಾಸ್‌ನಲ್ಲಿ ದೊರೆತ ಶೈಕ್ಷಣಿಕ ತರಬೇತಿ, ನಿರಂತರ ಪರಿಶ್ರಮ ಹಾಗೂ ಸ್ಪರ್ಧಾತ್ಮಕ ಪರೀಕ್ಷೆಯ ಸಿದ್ಧತೆಯ ಫಲವಾಗಿ ನೀಟ್‌ನಲ್ಲಿ 720ಕ್ಕೆ 506 ಅಂಕಗಳನ್ನು ಗಳಿಸಿ, ಸರ್ಕಾರಿ ಕೋಟಾದಡಿ ಆಳ್ವಾಸ್ ವೈದ್ಯಕೀಯ ಕಾಲೇಜಿನಲ್ಲಿ ಎಂಬಿಬಿಎಸ್ ಪ್ರವೇಶ ಪಡೆದಿದ್ದಾರೆ.

ತಂದೆಯ ಕನಸು ನನಸು ಮಾಡಿದ ಮಗಳು

ಸ್ನೇಹಾಳ ಸಾಧನೆಯ ಹಿಂದೆ ತಂದೆ-ತಾಯಿಯ ಪ್ರೋತ್ಸಾಹವೂ ಪ್ರಮುಖವಾಗಿದೆ. ತಂದೆ ಮಂಜುನಾಥ್ ಅವರು ಮಂಗಳೂರಿನ ಶ್ರೀನಿವಾಸ್ ವಿಶ್ವವಿದ್ಯಾಲಯದಲ್ಲಿ ಕಳೆದ 12 ವರ್ಷಗಳಿಂದ ಚಾಲಕರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ತಾಯಿ ವನಜಾ ಗೃಹಿಣಿ. ಕಿರಿಯ ಸಹೋದರಿ ಸಹನಾ ಕಾರ್ಕಳದಲ್ಲಿ 7ನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದಾರೆ.

“ನಾನು ವೈದ್ಯೆಯಾಗಬೇಕು ಎಂಬುದು ನನ್ನ ತಂದೆಯ ಕನಸಾಗಿತ್ತು. ಆ ಕನಸನ್ನು ನನಸು ಮಾಡಬೇಕು ಎಂಬ ಛಲದಿಂದ ಕಷ್ಟಪಟ್ಟು ಓದಿದೆ. ಆಳ್ವಾಸ್‌ನಲ್ಲಿ ದೊರೆತ ಗುಣಮಟ್ಟದ ಶಿಕ್ಷಣ, ತರಬೇತಿ ಮತ್ತು ಮಾರ್ಗದರ್ಶನದಿಂದ ನೀಟ್‌ಗೆ ಆತ್ಮವಿಶ್ವಾಸದಿಂದ ಸಿದ್ಧತೆ ನಡೆಸಲು ಸಾಧ್ಯವಾಯಿತು. ನಮ್ಮ ಕುಟುಂಬದ ಆರ್ಥಿಕ ಪರಿಸ್ಥಿತಿಗೆ ಆಳ್ವಾಸ್‌ನ ದತ್ತು ಯೋಜನೆ ಬಹಳ ದೊಡ್ಡ ಬೆಂಬಲವಾಯಿತು” ಎಂದು ಸ್ನೇಹಾ ತಿಳಿಸಿದ್ದಾರೆ.

ಪ್ರತಿಭೆಗೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು: ಮೋಹನ್ ಆಳ್ವ

ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಅವರು ಮಾತನಾಡಿ, ಪ್ರತಿಭಾವಂತ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ಪರಿಸ್ಥಿತಿ ಅಡ್ಡಿಯಾಗಬಾರದು ಎಂಬುದು ಆಳ್ವಾಸ್‌ನ ಆಶಯವಾಗಿದೆ. ಸ್ನೇಹಾಳಂತಹ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಗುಣಮಟ್ಟದ ಶಿಕ್ಷಣದ ಅವಕಾಶ ಕಲ್ಪಿಸುವುದೇ ದತ್ತು ಯೋಜನೆಯ ಉದ್ದೇಶ ಎಂದು ಹೇಳಿದರು.

ಆಳ್ವಾಸ್ ಪದವಿಪೂರ್ವ ಕಾಲೇಜಿನಲ್ಲಿ ಶಿಕ್ಷಣ ಪಡೆದ ವಿದ್ಯಾರ್ಥಿನಿಯೇ ಸಂಸ್ಥೆಯ ನೂತನ ವೈದ್ಯಕೀಯ ಕಾಲೇಜಿನ ಮೊದಲ ಎಂಬಿಬಿಎಸ್ ವಿದ್ಯಾರ್ಥಿನಿಯಾಗಿರುವುದು ವಿಶೇಷ ಸಂತಸದ ಸಂಗತಿ. ಸ್ನೇಹಾ ಹಾಗೂ ಅವರ ಪೋಷಕರಿಗೆ ಅಭಿನಂದನೆ ಸಲ್ಲಿಸಿದ ಅವರು, ಮುಂದಿನ ದಿನಗಳಲ್ಲಿ ಉತ್ತಮ ವೈದ್ಯೆಯಾಗಿ ಸಮಾಜಕ್ಕೆ ಸೇವೆ ಸಲ್ಲಿಸಲಿ ಎಂದು ಹಾರೈಸಿದರು.

ಹೃದ್ರೋಗ ತಜ್ಞೆಯಾಗುವ ಗುರಿ

ಎಂಬಿಬಿಎಸ್ ಶಿಕ್ಷಣ ಆರಂಭಿಸಿರುವ ಸ್ನೇಹಾ, ಭವಿಷ್ಯದಲ್ಲಿ ಹೃದ್ರೋಗ ತಜ್ಞೆಯಾಗುವ ಗುರಿ ಹೊಂದಿದ್ದಾರೆ. ವೈದ್ಯಕೀಯ ವೃತ್ತಿಯನ್ನು ಕೇವಲ ಉದ್ಯೋಗವಾಗಿ ಕಾಣದೆ, ಅಗತ್ಯವಿರುವ ಜನರಿಗೆ ಸೇವೆ ಸಲ್ಲಿಸುವ ಮಾಧ್ಯಮವಾಗಿ ಬಳಸಬೇಕು ಎಂಬುದು ಅವರ ಆಶಯ.

ಯಕ್ಷಗಾನ, ಸಂಗೀತದಲ್ಲೂ ಆಸಕ್ತಿ

ಶೈಕ್ಷಣಿಕ ಸಾಧನೆಯ ಜತೆಗೆ ಸ್ನೇಹಾ ಯಕ್ಷಗಾನದ ತೆಂಕುತಿಟ್ಟು ಬಾಗವತಿಕೆಯಲ್ಲೂ ಆಸಕ್ತಿ ಹೊಂದಿದ್ದಾರೆ. ಹಲವು ಕಾರ್ಯಕ್ರಮಗಳಲ್ಲಿ ಬಾಗವತಿಕೆ ಮೂಲಕ ಪ್ರದರ್ಶನ ನೀಡಿರುವ ಅವರು ಮಹೇಶ್ ಕನ್ಯಾಡಿ ಅವರಿಂದ ತರಬೇತಿ ಪಡೆದಿದ್ದಾರೆ. ಸದ್ಯ ಬಾಗವತಿಕೆಯಲ್ಲಿ ಉನ್ನತ ಮಟ್ಟದ ತರಬೇತಿಯನ್ನೂ ಪಡೆಯುತ್ತಿದ್ದಾರೆ.

ಕರ್ನಾಟಕ ಶಾಸ್ತ್ರೀಯ ಸಂಗೀತದ ಜೂನಿಯರ್ ಪರೀಕ್ಷೆಯಲ್ಲಿ ಶೇ.90 ಅಂಕಗಳೊಂದಿಗೆ ಉತ್ತೀರ್ಣರಾಗಿರುವ ಸ್ನೇಹಾ, ವೈದ್ಯಕೀಯ ಶಿಕ್ಷಣದ ಜತೆಗೆ ಸಂಗೀತ ಹಾಗೂ ಯಕ್ಷಗಾನದಂತಹ ಸಾಂಸ್ಕೃತಿಕ ಚಟುವಟಿಕೆಗಳನ್ನು ಮುಂದುವರಿಸುವ ಆಸಕ್ತಿ ಹೊಂದಿದ್ದಾರೆ.

ಡಾ. ಮೋಹನ್ ಆಳ್ವ ಅವರನ್ನು ಆದರ್ಶವಾಗಿ ಪರಿಗಣಿಸಿರುವ ಸ್ನೇಹಾ, ಭವಿಷ್ಯದಲ್ಲಿ ತಾನು ವೈದ್ಯೆಯಾಗಿ ಸ್ಥಿರವಾದ ಬಳಿಕ ಅಗತ್ಯವಿರುವ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಸಾಧ್ಯವಾದಷ್ಟು ನೆರವು ನೀಡುವ ಆಶಯ ಹೊಂದಿದ್ದಾರೆ.

“ಡಾ. ಮೋಹನ್ ಆಳ್ವರು ನನಗೆ ನಿಜವಾದ ಆದರ್ಶ. ಅವರ ಶಿಕ್ಷಣ ಹಾಗೂ ಸಮಾಜಸೇವೆಯ ಕಾರ್ಯಗಳಿಂದ ನಾನು ಪ್ರೇರಣೆ ಪಡೆದಿದ್ದೇನೆ. ಭವಿಷ್ಯದಲ್ಲಿ ವೈದ್ಯೆಯಾದ ಬಳಿಕ ನಾನೂ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ಸೇರಿದಂತೆ ಸಾಧ್ಯವಾದಷ್ಟು ನೆರವು ನೀಡಬೇಕು. ಶಿಕ್ಷಣದ ಜತೆಗೆ ಸಾಂಸ್ಕೃತಿಕ ಕ್ಷೇತ್ರದಲ್ಲೂ ಅವಕಾಶಗಳನ್ನು ಕಲ್ಪಿಸುವ ಮೂಲಕ ಸಮಾಜಕ್ಕೆ ನನ್ನದೇ ರೀತಿಯಲ್ಲಿ ಕೊಡುಗೆ ನೀಡಲು ಬಯಸುತ್ತೇನೆ” ಎಂದು ಸ್ನೇಹಾ ಹೇಳಿದರು.

ಸ್ನೇಹಾಳನ್ನು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ. ಎಂ. ಮೋಹನ್ ಆಳ್ವ ಸನ್ಮಾನಿಸಿ ಅಭಿನಂದಿಸಿದರು. ಈ ಸಂದರ್ಭದಲ್ಲಿ ಆಳ್ವಾಸ್ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ಆ್ಯಂಡ್ ರಿಸರ್ಚ್ ಸೆಂಟರ್‌ನ ಡೀನ್ ಡಾ. ಮಹಾಬಲ ಶೆಟ್ಟಿ, ಆಳ್ವಾಸ್ ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ ಮೊಹಮ್ಮದ್ ಸದಾಕತ್, ಸ್ನೇಹಾಳ ತಂದೆ ಮಂಜುನಾಥ್ ಹಾಗೂ ತಾಯಿ ವನಜಾ ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *