ಭಟ್ಕಳ ರಾಷ್ಟ್ರೀಯ ಹೆದ್ದಾರಿ ಅಭಿವೃದ್ಧಿ ಕಾಮಗಾರಿ, ಮುರಿನಕಟ್ಟೆಗೆ ಪರ್ಯಾಯ ಸ್ಥಳ ಗುರುತು: ಜಿಲ್ಲಾಧಿಕಾರಿ ಲಕ್ಷ್ಮಿಪ್ರಿಯಾ

ಶಿರಸಿ ಕಾರವಾರ ಜಿಲ್ಲಾ ಸುದ್ದಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ರಾಷ್ಟ್ರೀಯ ಹೆದ್ದಾರಿ 66 ರ ವಿಸ್ತರಣೆ ಹಾಗೂ ಅಭಿವೃದ್ಧಿ ಕಾಮಗಾರಿ ಹಿನ್ನೆಲೆಯಲ್ಲಿ ವಾಹನ ಸಂಚಾರ ಮತ್ತು ಸಾರ್ವಜನಿಕರ ಓಡಾಟಕ್ಕೆ ಅಡಚಣೆ ಉಂಟಾಗದಂತೆ ಅಮ್ಮನವರ ಹೊರೆಯನ್ನಿಡುವ ಮುರಿನಕಟ್ಟೆಗೆ ಪರ್ಯಾಯ ಸೂಕ್ತ ಸ್ಥಳವನ್ನು ಗುರುತಿಸಲಾಗಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮಿಪ್ರಿಯಾ ಅವರು ತಿಳಿಸಿದ್ದಾರೆ.

ಭಟ್ಕಳ ನಗರದ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 66ರ ಅಭಿವೃದ್ಧಿ ಕಾಮಗಾರಿ ನಡೆಯುತ್ತಿರುವ ಸಂದರ್ಭದಲ್ಲಿ ಮುರಿನಕಟ್ಟೆಗಾಗಿ ಸೂಕ್ತ ಪರ್ಯಾಯ ಸ್ಥಳದ ಅಗತ್ಯತೆ ಕಂಡುಬಂದಿತ್ತು. ಈ ಹಿನ್ನೆಲೆಯಲ್ಲಿ ನಗರದ ವಿವಿಧ ಸಮುದಾಯಗಳ ಹಿರಿಯ ನಾಗರಿಕರೊಂದಿಗೆ ಚರ್ಚಿಸಿ, ಅವರ ಒಮ್ಮತದ ಅಭಿಪ್ರಾಯದ ಮೇರೆಗೆ ಹೊಸ ಸ್ಥಳವನ್ನು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ.

ಎಲ್ಲರ ಒಪ್ಪಿಗೆಯಂತೆ ಪ್ರಸ್ತುತ ಅಮ್ಮನವರ ಹೊರೆಯನ್ನು ಇಡಲಾಗಿರುವ ಅದೇ ರಸ್ತೆಯ ಮಿಡಿಯನ್‌ಗಾಗಿ ಲಭ್ಯವಿರುವ ಜಾಗವನ್ನು ಪರ್ಯಾಯ ಸ್ಥಳವಾಗಿ ಆಯ್ಕೆ ಮಾಡಲಾಗಿದೆ. ಈ ಕುರಿತು ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ (ಎನ್‌ಎಚ್‌ಎಐ) ಹಾಗೂ ಸ್ಥಳೀಯ ತಾಲೂಕು ಆಡಳಿತದ ಸಹಯೋಗದೊಂದಿಗೆ ಸ್ಥಳ ಪರಿಶೀಲನೆ ಮತ್ತು ಅಗತ್ಯ ಕಾಮಗಾರಿ ಕುರಿತ ಸಮಾಲೋಚನೆ ಪ್ರಾರಂಭಿಸಲಾಗಿದೆ. ಮಿಡಿಯನ್ ಹಾಗೂ ರಸ್ತೆ ಕಾಮಗಾರಿಗೆ ಸಂಬಂಧಿಸಿದಂತೆ ಸ್ಥಳೀಯ ಮುಖಂಡರೊಂದಿಗೆ ಜಿಲ್ಲಾಡಳಿತ ನಿರಂತರ ಸಮನ್ವಯ ಸಾಧಿಸುತ್ತಿದ್ದು, ಎಲ್ಲರ ಸಹಮತದೊಂದಿಗೆ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಒಮ್ಮತದ ಅಭಿಪ್ರಾಯ
ವಾಹನ ಸಂಚಾರ ಹಾಗೂ ಸಾರ್ವಜನಿಕರ ಓಡಾಟಕ್ಕೆ ತೊಂದರೆಯಾಗದಂತೆ ಎಲ್ಲರ ಒಮ್ಮತದ ಅಭಿಪ್ರಾಯದ ಮೇರೆಗೆ ಮುರಿನಕಟ್ಟೆಗೆ ಪರ್ಯಾಯ ಸ್ಥಳವನ್ನು ಗುರುತಿಸಲಾಗಿದೆ. ಈ ಕುರಿತು ಸಂಬಂಧಿತ ಇಲಾಖೆಗಳ ಸಹಯೋಗದೊಂದಿಗೆ ಅಗತ್ಯ ಸಮಾಲೋಚನೆ ಪ್ರಾರಂಭಿಸಲಾಗಿದೆ.
ಕೆ. ಲಕ್ಷ್ಮಿಪ್ರಿಯಾ, ಜಿಲ್ಲಾಧಿಕಾರಿ

ಮುಖ್ಯಾಂಶಗಳು

▶ ರಾಷ್ಟ್ರೀಯ ಹೆದ್ದಾರಿ 66 ಅಗಲೀಕರಣ ಕಾಮಗಾರಿ ಹಿನ್ನೆಲೆ ಮುರಿನಕಟ್ಟೆ ಸ್ಥಳಾಂತರ ಅಗತ್ಯ

▶ ನಗರದ ಎಲ್ಲ ಸಮುದಾಯಗಳ ಹಿರಿಯ ನಾಗರಿಕರೊಂದಿಗೆ ಸಮಾಲೋಚನೆ

▶ ಹಾಲಿ ಸ್ಥಳದ ಸಮೀಪದ ಮಿಡಿಯನ್ ಜಾಗ ಪರ್ಯಾಯ ಸ್ಥಳವಾಗಿ ಗುರುತು

▶ ಎನ್‌ಎಚ್‌ಎಐ, ತಾಲೂಕು ಆಡಳಿತ ಮತ್ತು ಜಿಲ್ಲಾಡಳಿತದಿಂದ ಸಂಯುಕ್ತ ಸಮನ್ವಯ

 

Leave a Reply

Your email address will not be published. Required fields are marked *