ಎನ್ಸಿಸಿ ಗೌರವ ಕರ್ನಲ್ ಹುದ್ದೆಗೆ ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್ ನೇಮಕ

ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ರಾಜ್ಯ ಶಿಕ್ಷಣ ಶಿರಸಿ

Spread the love

ಮಂಗಳೂರು: ಸಂತ ಅಲೋಶಿಯಸ್ ಪರಿಗಣಿತ ವಿಶ್ವವಿದ್ಯಾನಿಲಯದ ಕುಲಪತಿ ರೆ. ಡಾ. ಪ್ರವೀಣ್ ಮಾರ್ಟಿಸ್, ಎಸ್‌.ಜೆ. ಅವರಿಗೆ ಭಾರತ ಸರ್ಕಾರವು ರಾಷ್ಟ್ರೀಯ ಕೆಡೆಟ್ ಕಾರ್ಪ್ಸ್‌ (ಎನ್ಸಿಸಿ)ಯ ಗೌರವ ಕರ್ನಲ್ ಹುದ್ದೆ ಹಾಗೂ ‘ಕರ್ನಲ್ ಕಮಾಂಡೆಂಟ್’ ಗೌರವವನ್ನು ನೀಡಿದೆ.

ಈ ಸಂಬಂಧದ ಅಧಿಕೃತ ನೇಮಕಾತಿ ಆದೇಶವನ್ನು ಜೂನ್‌ 25 ರಂದು ಹೊರಡಿಸಲಾಗಿದ್ದು, ಗುರುವಾರ ವಿಶ್ವವಿದ್ಯಾಲಯದ ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಎನ್ಸಿಸಿ ಕರ್ನಾಟಕ ಮತ್ತು ಗೋವಾ ನಿರ್ದೇಶನಾಲಯದ ಉಪ ಮಹಾನಿರ್ದೇಶಕ ಏರ್‌ ಕಮಾಂಡರ್ ಕಮಲ್ ಚಾಧಾ ಅವರು ಪ್ರಶಸ್ತಿಯನ್ನು ಪ್ರದಾನ ಮಾಡಿದರು.

ರೆ. ಡಾ. ಪ್ರವೀಣ್ ಮಾರ್ಟಿಸ್ ಅವರು ಕುಲಪತಿಯಾಗಿ ಕಾರ್ಯನಿರ್ವಹಿಸುವ ಅವಧಿಯವರೆಗೆ ಈ ಗೌರವ ಹುದ್ದೆಯನ್ನು ಅಲಂಕರಿಸಲಿದ್ದಾರೆ.

ಈ ವೇಳೆ ಮಾತನಾಡಿದ ಏರ್‌ ಕಮೋಡೋರ್ ಕಮಲ್ ಚಾಧಾ ಅವರು , ಶಿಕ್ಷಣ ಸಂಸ್ಥೆಗಳು ಮತ್ತು ಎನ್ಸಿಸಿ ಶಿಸ್ತು, ನಾಯಕತ್ವ ಹಾಗೂ ಸಾಮಾಜಿಕ ಹೊಣೆಗಾರಿಕೆಯುಳ್ಳ ನಾಗರಿಕರನ್ನು ರೂಪಿಸುವಲ್ಲಿ ಸಮಾನ ಜವಾಬ್ದಾರಿಯನ್ನು ಹೊಂದಿವೆ ಎಂದು ಹೇಳಿದರು. ಎನ್ಸಿಸಿ ತರಬೇತಿ ಯುವಜನರಲ್ಲಿ ಧೈರ್ಯ, ತಂಡದ ಮನೋಭಾವ, ನಾಯಕತ್ವದ ಗುಣ ಹಾಗೂ ರಾಷ್ಟ್ರಸೇವೆಯ ಬದ್ಧತೆಯನ್ನು ಬೆಳೆಸುತ್ತದೆ ಎಂದರು.

ಮಂಗಳೂರು ಎನ್ಸಿಸಿ ಗ್ರೂಪ್ ವ್ಯಾಪ್ತಿಯ ದಕ್ಷಿಣ ಕನ್ನಡ, ಉಡುಪಿ, ಕೊಡಗು ಮತ್ತು ಶಿವಮೊಗ್ಗ ಜಿಲ್ಲೆಗಳ 239 ಶಿಕ್ಷಣ ಸಂಸ್ಥೆಗಳಲ್ಲಿ 15,700ಕ್ಕೂ ಅಧಿಕ ಕೆಡೆಟ್‌ಗಳು ತರಬೇತಿ ಪಡೆಯುತ್ತಿದ್ದಾರೆ. ಗಣರಾಜ್ಯೋತ್ಸವ ಶಿಬಿರ, ಅಂತರ ಗುಂಪು ಚಾಂಪಿಯನ್‌ಷಿಪ್‌, ರಾಷ್ಟ್ರೀಯ ಮಟ್ಟದ ಡ್ರೋನ್‌, ನೌ ಸೈನಿಕ್ ಶಿಬಿರ ಹಾಗೂ ನವೋದ್ಯಮ ಸ್ಪರ್ಧೆಗಳಲ್ಲಿ ಈ ಗ್ರೂಪ್‌ನ ಕೆಡೆಟ್‌ಗಳು ಗಮನಾರ್ಹ ಸಾಧನೆ ಮಾಡಿದ್ದಾರೆ. ಎನ್ಸಿಸಿ ತರಬೇತಿಯ ಮೂಲಕ ಅನೇಕ ಯುವಕರು ಸಶಸ್ತ್ರ ಪಡೆಗಳು ಹಾಗೂ ಕೇಂದ್ರ ಸಶಸ್ತ್ರ ಪೊಲೀಸ್ ಪಡೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ತಿಳಿಸಲಾಯಿತು.

ಎನ್ಸಿಸಿ ಮಂಗಳೂರು ಗ್ರೂಪ್‌ನ ಗ್ರೂಪ್ ಕಮಾಂಡರ್ ಕರ್ನಲ್ ವಿರಾಜ್ ಕಾಮತ್ ಹಾಗೂ 18 ಕರ್ನಾಟಕ ಬೆಟಾಲಿಯನ್‌ನ ಕಮಾಂಡಿಂಗ್ ಅಧಿಕಾರಿ ಲೆಫ್ಟಿನೆಂಟ್ ಕರ್ನಲ್ ಆರ್‌.ಪಿ. ರೈ ಅವರ ನೇತೃತ್ವದಲ್ಲಿ ಕಾರ್ಯಕ್ರಮ ಆಯೋಜಿಸಲಾಗಿತ್ತು.

ಪ್ರತಿಷ್ಠಿತ ರಾಷ್ಟ್ರೀಯ ಗೌರವಕ್ಕೆ ಭಾಜನರಾದ ರೆ. ಡಾ. ಪ್ರವೀಣ್ ಮಾರ್ಟಿಸ್ ಅವರನ್ನು ವಿಶ್ವವಿದ್ಯಾನಿಲಯದ ಆಡಳಿತ ಮಂಡಳಿ, ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಅಭಿನಂದಿಸಿದ್ದಾರೆ.

Leave a Reply

Your email address will not be published. Required fields are marked *