ಮಂಗಳೂರು: ಪುತ್ರನಿಗೆ ಈಜು ಕಲಿಸುವ ಉದ್ದೇಶದಿಂದ 40ನೇ ವಯಸ್ಸಿನಲ್ಲಿ ಈಜು ಕಲಿತಿದ್ದೇ ತನ್ನ ಬದುಕಿನ ಮಹತ್ವದ ತಿರುವಾಯಿತು. ನಿರಂತರ ಅಭ್ಯಾಸ ಮತ್ತು ಆತ್ಮವಿಶ್ವಾಸದಿಂದ ಇಂಗ್ಲಿಷ್ ಚಾನೆಲ್ ರಿಲೇ ಈಜು ಯಶಸ್ವಿಯಾಗಿ ಪೂರ್ಣಗೊಳಿಸಲು ಸಾಧ್ಯವಾಯಿತು ಎಂದು ಕಣಚೂರು ಆಸ್ಪತ್ರೆಯ ಕ್ಯಾನ್ಸರ್ ತಜ್ಞ ಡಾ. ಗುರುಪ್ರಸಾದ್ ಹೇಳಿದರು.
ನಗರದ ಪ್ರೆಸ್ ಕ್ಲಬ್‌ನಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜುಲೈ 3ರಂದು ಭಾರತದಿಂದ ಆರು ಸದಸ್ಯರ ತಂಡ ಇಂಗ್ಲೆಂಡ್‌ನಿಂದ ಫ್ರಾನ್ಸ್‌ವರೆಗೆ ಇಂಗ್ಲಿಷ್ ಚಾನೆಲ್ ರಿಲೇ ಈಜನ್ನು 13 ಗಂಟೆ 5 ನಿಮಿಷಗಳಲ್ಲಿ ಪೂರ್ಣಗೊಳಿಸಿದೆ. ಈ ತಂಡದಲ್ಲಿ ತಾವು ಕೂಡ ಭಾಗಿಯಾಗಿದ್ದು, ಇಂಗ್ಲಿಷ್ ಚಾನೆಲ್ ರಿಲೇ ಈಜು ಪೂರ್ಣಗೊಳಿಸಿದ ಮೊದಲ ಮಂಗಳೂರಿಗ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದೇನೆ ಎಂದು ತಿಳಿಸಿದರು.

ಇಂಗ್ಲಿಷ್ ಚಾನೆಲ್‌ನಲ್ಲಿ ಈಜುವುದು ಪರ್ವತಾರೋಹಣದಷ್ಟೇ ಸವಾಲಿನ ಕಾರ್ಯ. ಉಪ್ಪುನೀರು, ತೀವ್ರ ಚಳಿ, ಪ್ರತಿಕೂಲ ಹವಾಮಾನ ಹಾಗೂ ಪ್ರಬಲ ಅಲೆಗಳನ್ನು ಎದುರಿಸುತ್ತಾ ಈಜಬೇಕಾಗುತ್ತದೆ. ರಿಲೇ ಮಾದರಿಯಲ್ಲಿ ಪ್ರತಿಯೊಬ್ಬ ಸದಸ್ಯರು ಎರಡು ರಿಂದ ಮೂರು ಗಂಟೆಗಳವರೆಗೆ ಈಜಬೇಕಾಗಿದ್ದು, ಇದು ಅತ್ಯಂತ ವಿಭಿನ್ನ ಅನುಭವವಾಗಿತ್ತು ಎಂದು ಹೇಳಿದರು.
ತಂಡದಲ್ಲಿ 14 ವರ್ಷದ ಅರ್ನವ್ ಜೌರಾ, 16 ವರ್ಷದ ದಿವ್ಯಾ ಹಿತೇಂದ್ರ ಮಹಾಜನ್, ರಘುನಂದನ್ ಗಂಗಪ್ಪ, ದೀಪಿಕಾ ರಾಣಾ ಹಾಗೂ ಅಂಕಿತಾ ಕೊನ್ವರ್ ಇದ್ದರು. ಪ್ರತಿಯೊಬ್ಬರ ಅನುಭವ ಮತ್ತು ಸಾಧನೆ ತಮ್ಮಲ್ಲಿ ಹೊಸ ಉತ್ಸಾಹ ತುಂಬಿದೆ ಎಂದು ತಿಳಿಸಿದರು.
2025ರ ಸೆಪ್ಟೆಂಬರ್‌ನಲ್ಲಿ ಈಜು ನಡೆಸಲು ಯೋಜಿಸಲಾಗಿದ್ದರೂ ಪ್ರತಿಕೂಲ ಹವಾಮಾನದ ಕಾರಣ ಮುಂದೂಡಲಾಗಿತ್ತು. ಬಳಿಕ ಜುಲೈನಲ್ಲಿ ಯಶಸ್ವಿಯಾಗಿ ಈಜು ಪೂರ್ಣಗೊಳಿಸಲಾಯಿತು. ತೆರೆದ ಸಮುದ್ರದಲ್ಲಿ ಈಜುವುದು ಈಜುಕೊಳದ ಅನುಭವಕ್ಕಿಂತ ಸಂಪೂರ್ಣ ಭಿನ್ನವಾಗಿದ್ದು, ಸಾಹಸ ಕ್ರೀಡೆಗಳಲ್ಲಿ ಆಸಕ್ತಿ ಇರುವವರು ಸಮುದ್ರ ಈಜಿನತ್ತಲೂ ಗಮನ ಹರಿಸಬೇಕು ಎಂದು ಸಲಹೆ ನೀಡಿದರು.
ಮಂಗಳೂರಿನ ಸಂತ ಅಲೋಶಿಯಸ್ ಈಜುಕೊಳದಲ್ಲಿ ಪುತ್ರನೊಂದಿಗೆ ಈಜು ಕಲಿಯಲು ಆರಂಭಿಸಿದ್ದೆ. ನಂತರ ಉದ್ಯಾವರ ಹಾಗೂ ತಣ್ಣೀರುಬಾವಿ ಸಮುದ್ರದಲ್ಲಿ ನಿರಂತರ ಅಭ್ಯಾಸ ನಡೆಸಿದೆ. ತರಬೇತುದಾರರಾದ ಸಂಕೇತ್ ಬೆಂಗ್ರೆ ಹಾಗೂ ಚೈತನ್ಯ ಅವರ ಮಾರ್ಗದರ್ಶನದಿಂದ ಸಮುದ್ರ ಈಜಿನ ಕೌಶಲ ಹಾಗೂ ಆತ್ಮವಿಶ್ವಾಸ ಬೆಳೆಸಿಕೊಳ್ಳಲು ಸಾಧ್ಯವಾಯಿತು ಎಂದು ಹೇಳಿದರು.
ಈಜಿನ ಜೊತೆಗೆ ಯುರೋಪಿನ ಅತಿ ಎತ್ತರದ ಶಿಖರಗಳಲ್ಲಿ ಒಂದಾದ ಕೊಸಿಯುಸ್ಕೊ ಪರ್ವತವನ್ನು ಏರಿದ್ದು, ಪೆಸಿಫಿಕ್ ಸಾಗರದ ಕ್ಯಾಟಲಿನಾ ಚಾನೆಲ್ ಹಾಗೂ ಅಟ್ಲಾಂಟಿಕ್ ಸಾಗರದ ಇಂಗ್ಲಿಷ್ ಚಾನೆಲ್ ಈಜುವ ಸಾಧನೆಯನ್ನು ದಾಖಲಿಸಿದ್ದೇನೆ ಎಂದು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ತರಬೇತುದಾರ ಸಂಕೇತ್ ಬೆಂಗ್ರೆ ಇದ್ದರು.



