ಎಸ್‌ಐಆರ್‌, ಜಿಲ್ಲಾ ಸ್ವೀಪ್ ಸಮಿತಿ, ಆರೋಗ್ಯ ಇಲಾಖೆಯಿಂದ ಉಚಿತ ಆರೋಗ್ಯ ತಪಾಸಣಾ ಶಿಬಿರ, ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ಚಾಲನೆ

ಜಿಲ್ಲಾ ಸುದ್ದಿ ಕಾರವಾರ ರಾಜ್ಯ ಶಿರಸಿ

Spread the love

ಕಾರವಾರ: ಉತ್ತರ ಕನ್ನಡ ಜಿಲ್ಲೆಯಲ್ಲಿ ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್‌ಐಆರ್) ಕಾರ್ಯಕ್ಕೆ ಸಾರ್ವಜನಿಕರು ಹಾಗೂ ರಾಜಕೀಯ ಪಕ್ಷಗಳಿಂದ ಉತ್ತಮ ಸಹಕಾರ ದೊರೆಯುತ್ತಿದ್ದು, ನಿಗದಿತ ಅವಧಿಗೂ ಮುನ್ನವೇ ಪ್ರಕ್ರಿಯೆಯನ್ನು ಪೂರ್ಣಗೊಳಿಸಲು ಜಿಲ್ಲಾಡಳಿತ ಪ್ರಯತ್ನಿಸುತ್ತಿದೆ ಎಂದು ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ ತಿಳಿಸಿದ್ದಾರೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯಿತಿ, ಜಿಲ್ಲಾ ಸ್ವೀಪ್ ಸಮಿತಿ ಹಾಗೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಸಹಯೋಗದಲ್ಲಿ ಸರ್ಕಾರಿ ನೌಕರರಿಗಾಗಿ ಆಯೋಜಿಸಿದ್ದ ಉಚಿತ ಆರೋಗ್ಯ ತಪಾಸಣಾ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಜಿಲ್ಲೆಯಲ್ಲಿ ಶೇ 100ರಷ್ಟು ಎಣಿಕೆ ನಮೂನೆಗಳನ್ನು ಮತದಾರರಿಗೆ ವಿತರಿಸಲಾಗಿದ್ದು, ಅವುಗಳ ಗಣಕೀಕರಣ ಕಾರ್ಯದಲ್ಲಿ ಈಗಾಗಲೇ ಶೇ.64ರಷ್ಟು ಪ್ರಗತಿ ಸಾಧಿಸಲಾಗಿದೆ. ಕರಡು ಮತದಾರರ ಪಟ್ಟಿ ಪ್ರಕಟವಾದ ಬಳಿಕ ಒಂದೇ ಕುಟುಂಬದ ಮತದಾರರು ಬೇರೆಬೇರೆ ಮತಗಟ್ಟೆಗಳಲ್ಲಿ ಹಂಚಿಕೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.

ಸರ್ಕಾರಿ ನೌಕರರು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ವಹಿಸದೆ ನಿಯಮಿತ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಬೇಕು. ಆರೋಗ್ಯ ಸಮಸ್ಯೆ ಕಂಡುಬಂದಾಗ ಸ್ವಯಂ ಔಷಧ ಸೇವನೆ ಮಾಡದೆ ವೈದ್ಯರ ಸಲಹೆಯಂತೆ ಚಿಕಿತ್ಸೆ ಪಡೆಯುವುದು ಅಗತ್ಯ ಎಂದು ಸಲಹೆ ನೀಡಿದರು.

ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ. ದಿಲೀಷ್ ಶಶಿ ಮಾತನಾಡಿ, ಜೀವನಶೈಲಿ ಸಂಬಂಧಿತ ಕಾಯಿಲೆಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಸಮಯಕ್ಕೆ ಸರಿಯಾಗಿ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳುವುದು ಅತ್ಯವಶ್ಯಕ ಎಂದರು. ಶಿಬಿರದಲ್ಲಿ ಪುರುಷರು ಮತ್ತು ಮಹಿಳೆಯರಿಗೆ ಪ್ರತ್ಯೇಕ ತಪಾಸಣೆ, ಉಚಿತ ಔಷಧ ವಿತರಣೆ ಹಾಗೂ ಅಗತ್ಯವಿದ್ದವರಿಗೆ ಮುಂದಿನ ಚಿಕಿತ್ಸೆಗೆ ಶಿಫಾರಸು ಮಾಡುವ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ತಿಳಿಸಿದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್. ಮಾತನಾಡಿ, ಎಸ್‌ಐಆರ್ ಹೆಸರಿನಲ್ಲಿ ಬ್ಯಾಂಕ್ ವಿವರಗಳು ಅಥವಾ ಓಟಿಪಿ ಕೇಳುವ ವಂಚಕರ ಬಗ್ಗೆ ಸಾರ್ವಜನಿಕರು ಎಚ್ಚರಿಕೆಯಿಂದಿರಬೇಕು ಎಂದು ಮನವಿ ಮಾಡಿದರು. ಮಾನಸಿಕ ಆರೋಗ್ಯಕ್ಕೂ ಆದ್ಯತೆ ನೀಡುವಂತೆ ಕರೆ ನೀಡಿದರು.

ಶಿಬಿರದಲ್ಲಿ ರಕ್ತದೊತ್ತಡ, ಮಧುಮೇಹ, ಇಸಿಜಿ, ಎಕ್ಸ್‌ರೇ, ಕಣ್ಣು, ದಂತ, ಚರ್ಮ, ಮೂಳೆ, ಕಿವಿ–ಮೂಗು–ಗಂಟಲು ಸೇರಿದಂತೆ ವಿವಿಧ ಆರೋಗ್ಯ ತಪಾಸಣೆಗಳನ್ನು ನಡೆಸಲಾಯಿತು. ಜಿಲ್ಲಾಧಿಕಾರಿಯವರೂ ಆರೋಗ್ಯ ತಪಾಸಣೆ ಮಾಡಿಸಿಕೊಂಡರು. ಜಿಲ್ಲಾಧಿಕಾರಿ ಕಚೇರಿಗೆ ಬಂದ ಸಾರ್ವಜನಿಕರಿಗೂ ಉಚಿತ ಆರೋಗ್ಯ ತಪಾಸಣೆಯ ಸೌಲಭ್ಯ ಒದಗಿಸಲಾಯಿತು.

Leave a Reply

Your email address will not be published. Required fields are marked *