ಮಂಗಳೂರು: ಶಾಲಾ ಮಕ್ಕಳನ್ನು ಸುರಕ್ಷಿತವಾಗಿ ಕರೆದೊಯ್ಯುವ ಕುರಿತು ಮಂಗಳೂರು ನಗರ ಸಂಚಾರ ಪೊಲೀಸರ ವತಿಯಿಂದ ವಿಶೇಷ ಜಾಗೃತಿ ಕಾರ್ಯಕ್ರಮವನ್ನು ಬುಧವಾರ ನಗರದ ಪುರಭವನದಲ್ಲಿ ಆಯೋಜಿಸಲಾಗಿತ್ತು.
ಕಾರ್ಯಕ್ರಮದಲ್ಲಿ ನಗರದ ವಿವಿಧ ಶಾಲೆಗಳ ಶಾಲಾ ಬಸ್ ಚಾಲಕರು, ಮಾಲೀಕರು, ಬಸ್ ವ್ಯವಸ್ಥಾಪಕರು ಹಾಗೂ ಶಾಲಾ ಆಡಳಿತ ಮಂಡಳಿಗಳ ಸುಮಾರು 600 ಮಂದಿ ಭಾಗವಹಿಸಿದ್ದರು.
ಶಾಲಾ ಮಕ್ಕಳ ಸುರಕ್ಷತೆ ದೃಷ್ಟಿಯಿಂದ ಬಸ್ ಚಾಲಕರು ಹಾಗೂ ನಿರ್ವಾಹಕರು ಪಾಲಿಸಬೇಕಾದ ಕಾನೂನು ನಿಯಮಗಳು, ರಸ್ತೆ ಸುರಕ್ಷತಾ ಕ್ರಮಗಳು, ಸಂಚಾರ ನಿಯಮಗಳು ಹಾಗೂ ಮಕ್ಕಳ ಸುರಕ್ಷತೆಗೆ ಸಂಬಂಧಿಸಿದ ಜವಾಬ್ದಾರಿಗಳ ಕುರಿತು ಸಮಗ್ರ ಮಾಹಿತಿ ನೀಡಲಾಯಿತು.
ಈ ವೇಳೆ ಅಪರಾಧ ಮತ್ತು ಸಂಚಾರ ವಿಭಾಗದ ಉಪ ಪೊಲೀಸ್ ಆಯುಕ್ತ ರವಿಶಂಕರ ಅವರು ಮಾತನಾಡಿ, ಶಾಲಾ ಆಡಳಿತ ಮಂಡಳಿಗಳು ಶಾಲಾ ವಾಹನಗಳ ಸುರಕ್ಷತಾ ಮಾನದಂಡಗಳನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ಚಾಲಕರು ಹಾಗೂ ನಿರ್ವಾಹಕರ ಕರ್ತವ್ಯಗಳನ್ನು ಸಮರ್ಪಕವಾಗಿ ಮೇಲ್ವಿಚಾರಣೆ ಮಾಡುವುದರ ಜತೆಗೆ, ಮಕ್ಕಳ ಸುರಕ್ಷತೆಗೆ ಅಗತ್ಯವಿರುವ ಎಲ್ಲ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಳ್ಳಬೇಕು. ಸಂಚಾರ ನಿಯಮ ಉಲ್ಲಂಘಿಸುವ ಶಾಲಾ ಬಸ್ ಚಾಲಕರ ವಿರುದ್ಧ ಕಾನೂನು ರೀತ್ಯಾ ಕ್ರಮ ಕೈಗೊಳ್ಳಲಾಗುವುದು ಎಂದರು.

ಶಾಲಾ ಮಕ್ಕಳನ್ನು ಸಾಗಿಸುವ ವಾಹನಗಳಿಗೆ ಸಂಬಂಧಿಸಿದ ಸುರಕ್ಷತಾ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕು. ಶಾಲಾ ವಾಹನಗಳ ನೈಜ ದಾಖಲೆಗಳು, ವಾಹನದ ಕ್ಷಮತಾ ಪ್ರಮಾಣಪತ್ರ, ವಿಮೆ, ಅಗ್ನಿಶಾಮಕ ಉಪಕರಣ, ವೇಗ ನಿಯಂತ್ರಕ ಸೇರಿದಂತೆ ಅಗತ್ಯ ಸುರಕ್ಷತಾ ವ್ಯವಸ್ಥೆಗಳು ಸಮರ್ಪಕವಾಗಿರಬೇಕು. ಶಾಲಾ ವಾಹನಗಳು ಗಂಟೆಗೆ ಗರಿಷ್ಠ 40 ಕಿ.ಮೀ. ವೇಗದಲ್ಲಿ ಸಂಚರಿಸುವಂತೆ ಕ್ರಮ ವಹಿಸಬೇಕು ಎಂದರು.
ಪ್ರಾದೇಶಿಕ ಸಾರಿಗೆ ಇಲಾಖೆ ಅಧಿಕಾರಿ ಮುರಗೇಂದ್ರ ಬಿ. ಶಿರೋಳ್ಕರ್ ಅವರು ಮಾತನಾಡಿ, ಪರವಾನಗಿ ಹೊಂದಿರುವ ವಾಹನಗಳಲ್ಲಿಯೇ ಮಕ್ಕಳನ್ನು ಸಾಗಿಸಬೇಕು ಹಾಗೂ ಅಗತ್ಯ ಸುರಕ್ಷತಾ ಕ್ರಮಗಳನ್ನು ಪಾಲಿಸಬೇಕು ಎಂದು ತಿಳಿಸಿದರು.
ಶಾಲಾ ಆಡಳಿತ ಮಂಡಳಿಗಳು ಶಿಕ್ಷಕರು, ಶಾಲಾ ಬಸ್ ಮಾಲೀಕರು, ಚಾಲಕರು ಹಾಗೂ ಪೋಷಕರ ಸಭೆಗಳನ್ನು ಆಗಾಗ್ಗೆ ನಡೆಸಿ ಮಕ್ಕಳ ಸುರಕ್ಷತೆ ಕುರಿತು ಚರ್ಚಿಸಿ ಅಗತ್ಯ ಕ್ರಮ ಕೈಗೊಳ್ಳಬೇಕು ಎಂದು ಶಿಕ್ಷಣ ಇಲಾಖೆಯ ಅಧಿಕಾರಿಗಳು ಸಲಹೆ ನೀಡಿದರು.
ಸಂಚಾರ ವಿಭಾಗದ ಎಸಿಪಿ ನಜ್ಮ ಫಾರೂಖಿ ಮಾತನಾಡಿ, ಚಾಲಕರು ಸಂಚಾರ ನಿಯಮಗಳನ್ನು ಪಾಲಿಸುವುದರ ಜತೆಗೆ ಶಿಸ್ತು ಮತ್ತು ಜವಾಬ್ದಾರಿಯಿಂದ ವಾಹನ ಚಲಾಯಿಸಿ ಮಕ್ಕಳ ಸುರಕ್ಷತೆಗೆ ಆದ್ಯತೆ ನೀಡಬೇಕು ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಮಂಗಳೂರು ನಗರ ಸಂಚಾರ ಪೊಲೀಸ್ ಠಾಣೆಗಳ ಎಲ್ಲ ಠಾಣಾಧಿಕಾರಿಗಳು ಹಾಗೂ ಶಿಕ್ಷಣ ಇಲಾಖೆಯ ಅಧಿಕಾರಿಗಳು ಇದ್ದರು.
ಕಾರ್ಯಕ್ರಮದಲ್ಲಿ ರಸ್ತೆ ಸುರಕ್ಷತೆ ಹಾಗೂ ಸಂಚಾರ ನಿಯಮಗಳ ಪಾಲನೆ ಕುರಿತು ಪ್ರತಿಜ್ಞಾವಿಧಿ ಬೋಧಿಸಲಾಯಿತು.
What do you feel about this post?
Like
Love
Happy
Haha
Sad





