ಮಂಗಳೂರು: ತುರ್ತು ಸಂದರ್ಭದಲ್ಲಿ ಆಂಬ್ಯುಲೆನ್ಸ್‌ಗಳಿಗೆ ದಾರಿ ಮಾಡಿಕೊಡುವುದು, ಸಂಚಾರ ನಿಯಮಗಳನ್ನು ಪಾಲಿಸುವುದು ಹಾಗೂ ರೋಗಿಗಳಿಗೆ ತ್ವರಿತ ವೈದ್ಯಕೀಯ ನೆರವು ದೊರೆಯುವಂತೆ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಉದ್ದೇಶದಿಂದ ಕೆಎಂಸಿ ಆಸ್ಪತ್ರೆ, ಡಾ. ಬಿ.ಆರ್. ಅಂಬೇಡ್ಕರ್ ವೃತ್ತ ಹಾಗೂ ಮಂಗಳೂರು ನಗರ ಸಂಚಾರ ಪೊಲೀಸರ ಸಹಯೋಗದಲ್ಲಿ ಗುರುವಾರ ಅಂಬುಲೆನ್ಸ್ ಜಾಗೃತಿ ಜಾಥಾ ನಡೆಯಿತು.
ಕೆಎಂಸಿ ಆಸ್ಪತ್ರೆಯಿಂದ ಆರಂಭವಾದ ಜಾಥಾಕ್ಕೆ ಮಂಗಳೂರು ನಗರ ಪೊಲೀಸ್ ಕಾನೂನು ಮತ್ತು ಸುವ್ಯವಸ್ಥೆ ವಿಭಾಗದ ಡಿಸಿಪಿ ಮಿಥುನ್ ಎಚ್.ಎನ್. ಚಾಲನೆ ನೀಡಿದರು. ಸಂಚಾರ ಉಪವಿಭಾಗದ ಪಿಎಸ್‌ಐ ವಿಜಯ್ ಕುಮಾರ್ ಹಾಗೂ ಕೆಎಂಸಿ ಆಸ್ಪತ್ರೆಯ ಪ್ರತಿನಿಧಿಗಳು ಇದ್ದರು.
ಜಾಥಾ ಕ್ಲಾಕ್ ಟವರ್, ಸಿಟಿ ಸೆಂಟರ್, ಪಿವಿಎಸ್, ಕೊಟ್ಟಾರ ಚೌಕಿ, ಸುರತ್ಕಲ್, ಕೂಳೂರು, ಕಾವೂರು, ಬಜ್ಪೆ, ಕುಂಟಿಕಾನ, ನಂತೂರು, ಫರಂಗಿಪೇಟೆ, ಪಂಪ್‌ವೆಲ್, ನೇತ್ರಾವತಿ ಸೇತುವೆ, ಕಂಕನಾಡಿ ಸೇರಿದಂತೆ ನಗರದ ವಿವಿಧ ಭಾಗಗಳಲ್ಲಿ ಸಂಚರಿಸಿ ಕೆಎಂಸಿ ಆಸ್ಪತ್ರೆಗೆ ಮರಳಿತು. 50 ಕ್ಕೂ ಹೆಚ್ಚು ಅಂಬುಲೆನ್ಸ್ ಮತ್ತು ಆಟೋ ಚಾಲಕರು ಜಾಥಾದಲ್ಲಿ ಪಾಲ್ಗೊಂಡಿದ್ದರು.
ಡಿಸಿಪಿ ಮಿಥುನ್ ಎಚ್.ಎನ್. ಅವರು ಮಾತನಾಡಿ, ಅಂಬುಲೆನ್ಸ್ ಸೈರನ್ ಹಾಗೂ ತುರ್ತು ದೀಪಗಳನ್ನು ಹಾಕಿಕೊಂಡು ಬರುತ್ತಿರುವಾಗ ಪ್ರತಿಯೊಂದು ಕ್ಷಣ ಅಮೂಲ್ಯ. ಅಂಬುಲೆನ್ಸ್‌ಗೆ ದಾರಿ ಬಿಡುವುದು ಕೇವಲ ಸಂಚಾರ ಶಿಷ್ಟಾಚಾರವಲ್ಲ. ಗಂಭೀರ ಸ್ಥಿತಿಯಲ್ಲಿರುವ ರೋಗಿ ಅಥವಾ ಗಾಯಾಳು ಎಷ್ಟು ಬೇಗ ಸೂಕ್ತ ಚಿಕಿತ್ಸೆ ಪಡೆಯುತ್ತಾರೆ ಎಂಬುದನ್ನು ಇದು ನಿರ್ಧರಿಸಬಹುದು ಎಂದರು.
ಜವಾಬ್ದಾರಿಯುತ ಚಾಲನೆ, ಅನಗತ್ಯ ಸಂಚಾರ ದಟ್ಟಣೆ ತಪ್ಪಿಸುವುದು ಮತ್ತು ಸಂಚಾರ ನಿಯಮಗಳನ್ನು ಪಾಲಿಸುವ ಮೂಲಕ ತುರ್ತು ಸಂದರ್ಭದಲ್ಲಿ ಜೀವ ಉಳಿಸಲು ಸಾರ್ವಜನಿಕರು ಸಹಕರಿಸಬೇಕು ಎಂದು ಅವರು ಹೇಳಿದರು.

ಕೆಎಂಸಿ ಆಸ್ಪತ್ರೆಯ ತುರ್ತು ಚಿಕಿತ್ಸಾ ವಿಭಾಗದ ಮುಖ್ಯಸ್ಥ ಡಾ. ಜೋಧು ರಾಧಾಕೃಷ್ಣನ್ ಅವರು ಮಾತನಾಡಿ, ತುರ್ತು ಚಿಕಿತ್ಸೆ ಆಸ್ಪತ್ರೆ ತಲುಪಿದ ಬಳಿಕವಷ್ಟೇ ಆರಂಭವಾಗುವುದಿಲ್ಲ. ಆಸ್ಪತ್ರೆ ತಲುಪುವ ಮುನ್ನವೇ ಅಗತ್ಯ ವೈದ್ಯಕೀಯ ನೆರವು ದೊರೆಯುವುದು ಮುಖ್ಯ ಎಂದರು.
ಕೆಎಂಸಿ ಐದು ಹೊರರೋಗಿ ಸೇವಾ ಕೇಂದ್ರಗಳ ಮೂಲಕ 7,800 ಕ್ಕೂ ಹೆಚ್ಚು ರೋಗಿಗಳಿಗೆ ಚಿಕಿತ್ಸೆ ನೀಡಲಾಗಿದೆ. 250ಕ್ಕೂ ಹೆಚ್ಚು ಪ್ರಥಮ ಚಿಕಿತ್ಸೆ ತರಬೇತಿ ಕಾರ್ಯಕ್ರಮಗಳ ಮೂಲಕ 12,500ಕ್ಕೂ ಹೆಚ್ಚು ಮಂದಿಗೆ ತರಬೇತಿ ನೀಡಲಾಗಿದೆ. 300ಕ್ಕೂ ಹೆಚ್ಚು ತುರ್ತು ಪ್ರಥಮ ಪ್ರತಿಕ್ರಿಯೆದಾರರ ಪ್ರಮಾಣಪತ್ರ ಹಾಗೂ 250ಕ್ಕೂ ಹೆಚ್ಚು ಪ್ರಥಮ ಚಿಕಿತ್ಸಾ ಪೆಟ್ಟಿಗೆಗಳನ್ನು ವಿತರಿಸಲಾಗಿದೆ ಎಂದು ತಿಳಿಸಿದರು.
ತುರ್ತು ಸಂದರ್ಭದಲ್ಲಿ ಅಂಬುಲೆನ್ಸ್‌ಗೆ ದಾರಿ ಮಾಡಿಕೊಟ್ಟು, ವಿಳಂಬವಿಲ್ಲದೆ ವೈದ್ಯಕೀಯ ನೆರವು ದೊರೆಯುವಂತೆ ಮಾಡುವುದು ಸಾರ್ವಜನಿಕರ ಜವಾಬ್ದಾರಿ ಎಂದರು.
ಕೆಎಂಸಿ ಆಸ್ಪತ್ರೆಯ ತೀವ್ರ ನಿಗಾ ವಿಭಾಗದ ಮುಖ್ಯಸ್ಥ ಡಾ. ದತ್ತಾತ್ರೇಯ ಪ್ರಭು ಅವರು ಮಾತನಾಡಿ, ತುರ್ತು ಹಾಗೂ ಗಂಭೀರ ಚಿಕಿತ್ಸೆಗಳು ಆಸ್ಪತ್ರೆ ತಲುಪಿದ ಬಳಿಕವೇ ಆರಂಭವಾಗಬೇಕೆಂದಿಲ್ಲ. ಸುಸಜ್ಜಿತ ಆಂಬ್ಯುಲೆನ್ಸ್‌ನಲ್ಲಿ ರೋಗಿಯ ತಪಾಸಣೆ, ಮೇಲ್ವಿಚಾರಣೆ ಹಾಗೂ ಅಗತ್ಯ ತುರ್ತು ಚಿಕಿತ್ಸಾ ಕ್ರಮಗಳನ್ನು ಪ್ರಯಾಣದ ಸಂದರ್ಭದಲ್ಲೇ ಕೈಗೊಳ್ಳಬಹುದು ಎಂದರು.
ಹೃದಯಾಘಾತ, ಪಾರ್ಶ್ವವಾಯು ಹಾಗೂ ಗಂಭೀರ ಗಾಯಗಳಂತಹ ಸಂದರ್ಭಗಳಲ್ಲಿ ಇದು ಅತ್ಯಂತ ಮಹತ್ವದ್ದಾಗಿದೆ. ಹೃದಯಾಘಾತ, ಪಾರ್ಶ್ವವಾಯು, ರಸ್ತೆ ಅಪಘಾತ, ಕೆಲಸದ ಸ್ಥಳದಲ್ಲಿನ ಗಾಯಗಳು ಹಾಗೂ ಮನೆಯಲ್ಲಿ ಸಂಭವಿಸುವ ಗಂಭೀರ ತುರ್ತು ಪರಿಸ್ಥಿತಿಗಳಲ್ಲಿ ತಕ್ಷಣ ವೈದ್ಯಕೀಯ ನೆರವು ಪಡೆಯುವಂತೆ ಕೆಎಂಸಿ ಆಸ್ಪತ್ರೆ ಆಡಳಿತ ಮಂಡಳಿ ಸಾರ್ವಜನಿಕರಿಗೆ ಮನವಿ ಮಾಡಿದೆ.
ಮಂಗಳೂರಿನ ಕೆಎಂಸಿ ಆಸ್ಪತ್ರೆಯಲ್ಲಿ 24 ಗಂಟೆಗಳ ತುರ್ತು ಚಿಕಿತ್ಸೆ ಹಾಗೂ ಅಂಬುಲೆನ್ಸ್ ಸೇವೆ ಲಭ್ಯವಿದ್ದು, ತುರ್ತು ಸಂದರ್ಭಗಳಲ್ಲಿ 0824 222 2227 ಸಂಖ್ಯೆಗೆ ಕರೆ ಮಾಡುವಂತೆ ಆಸ್ಪತ್ರೆ ತಿಳಿಸಿದೆ.
What do you feel about this post?
Like
Love
Happy
Haha
Sad





