ಅಪಘಾತ ಸಂತ್ರಸ್ತರಿಗೆ ಮೊದಲ 7 ದಿನ ರೂ 2.5 ಲಕ್ಷವರೆಗೆ ಉಚಿತ ಚಿಕಿತ್ಸೆಗೆ ಸರಕಾರದ ಚಿಂತನೆ: ಆರೋಗ್ಯ ಸಚಿವ ಖಾದರ್

ಆರೋಗ್ಯ ಉಡುಪಿ ಕಾರವಾರ ಕುಂದಾಪುರ ಜಿಲ್ಲಾ ಸುದ್ದಿ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

ಕುಮಟಾ: ರಾಜ್ಯದಲ್ಲಿ ಅಪಘಾತಕ್ಕೊಳಗಾಗುವ ಯಾವುದೇ ವ್ಯಕ್ತಿಗೆ, ಅವರು ರಾಜ್ಯದವರಾಗಲಿ, ದೇಶದ ಇತರ ಭಾಗದವರಾಗಲಿ ಅಥವಾ ವಿದೇಶಿಯರಾಗಲಿ ಆಸ್ಪತ್ರೆಗೆ ದಾಖಲಾದ ಮೊದಲ ಏಳು ದಿನಗಳವರೆಗೆ 2.5 ಲಕ್ಷದವರೆಗೆ ಉಚಿತ ಚಿಕಿತ್ಸೆ ನೀಡುವ ಮಹತ್ವಾಕಾಂಕ್ಷಿ ಯೋಜನೆಯನ್ನು ಜಾರಿಗೆ ತರಲು ಸರ್ಕಾರ ಚಿಂತನೆ ನಡೆಸಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಯು.ಟಿ. ಖಾದರ್ ತಿಳಿಸಿದ್ದಾರೆ.

<

ಕುಮಟಾ ಸಾರ್ವಜನಿಕ ಆಸ್ಪತ್ರೆಯಲ್ಲಿ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್) ಸಂಸ್ಥೆಯ ಸಿಎಸ್‌ಆರ್ ನಿಧಿಯಿಂದ ನಿರ್ಮಿಸಲಾದ ಟ್ರಾಮಾ ಕೇರ್ ಸೆಂಟರ್ ಮತ್ತು ತುರ್ತು ಚಿಕಿತ್ಸಾ ಘಟಕವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಲು ಚಿಕಿತ್ಸಾ ವೆಚ್ಚದ ಭಯದಿಂದ ಸಾರ್ವಜನಿಕರು ಹಿಂಜರಿಯದಂತೆ ಈ ಯೋಜನೆ ರೂಪಿಸಲಾಗುತ್ತಿದೆ. ಈ ಕುರಿತು ಮುಖ್ಯಮಂತ್ರಿ ಅವರೊಂದಿಗೆ ಈಗಾಗಲೇ ಚರ್ಚೆ ನಡೆಸಲಾಗಿದೆ ಎಂದು ಸಚಿವರು ತಿಳಿಸಿದರು.

ರಾಜ್ಯದಲ್ಲಿ ತುರ್ತು ಕರೆ ಬಂದ 15 ನಿಮಿಷಗಳೊಳಗೆ ಆಂಬ್ಯುಲೆನ್ಸ್ ಸ್ಥಳಕ್ಕೆ ತಲುಪುವ ಹೊಸ ವ್ಯವಸ್ಥೆ ರೂಪಿಸಲಾಗುತ್ತಿದೆ. ನಿಗದಿತ ಸಮಯದಲ್ಲಿ ಸೇವೆ ನೀಡದ ಆಂಬ್ಯುಲೆನ್ಸ್ ನಿರ್ವಹಣಾ ಸಂಸ್ಥೆಗಳಿಗೆ 3 ಸಾವಿರದಿಂದ 5 ಸಾವಿರದವರೆಗೆ ದಂಡ ವಿಧಿಸುವ ಕಾನೂನು ತರಲಾಗುವುದು ಎಂದರು.

ಶಾಲಾ ಪರಿಸರದಲ್ಲಿ ಜಂಕ್ ಫುಡ್ ಮಾರಾಟಕ್ಕೆ ಕಟ್ಟುನಿಟ್ಟಿನ ನಿಯಂತ್ರಣ ತರಲಾಗುವುದು. ಆಹಾರದ ಗುಣಮಟ್ಟ ಪರೀಕ್ಷೆಗೆ ಅತ್ಯಾಧುನಿಕ ಪ್ರಯೋಗಾಲಯಗಳನ್ನು ಸ್ಥಾಪಿಸಿ, ಕಲಬೆರಕೆ ಹಾಗೂ ಕಳಪೆ ಆಹಾರ ಮಾರಾಟ ಮಾಡುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದರು.

ರಾಜ್ಯದ ತಾಲೂಕು ಆಸ್ಪತ್ರೆಗಳಲ್ಲಿರುವ ವೈದ್ಯರು, ದಾದಿಯರು, ಔಷಧ ತಜ್ಞರು ಮತ್ತು ಪ್ರಯೋಗಾಲಯ ತಂತ್ರಜ್ಞರ ಖಾಲಿ ಹುದ್ದೆಗಳನ್ನು ಶೀಘ್ರವೇ ಭರ್ತಿ ಮಾಡಲು ಸೂಚಿಸಲಾಗಿದೆ ಎಂದರು.

ಕುಮಟಾದ ಟ್ರಾಮಾ ಕೇರ್ ಸೆಂಟರ್ ರಾಜ್ಯದಲ್ಲಿ ಆರಂಭಗೊಂಡ ಮೂರನೇ ಕೇಂದ್ರವಾಗಿದ್ದು, ಅಗತ್ಯ ಹೆಚ್ಚುವರಿ ಉಪಕರಣ ಹಾಗೂ ಮೂಲಸೌಕರ್ಯಗಳಿಗೆ ಶೀಘ್ರ ಅನುದಾನ ಬಿಡುಗಡೆ ಮಾಡುವ ಭರವಸೆ ನೀಡಿದರು. ಅಲ್ಲದೆ, ಮಂಗಳೂರಿನ ಎ.ಜೆ. ಆಸ್ಪತ್ರೆ ಹಾಗೂ ಶ್ರೀನಿವಾಸ ಆಸ್ಪತ್ರೆಗಳು ಈ ಕೇಂದ್ರವನ್ನು ದತ್ತು ಪಡೆದು ತಾಂತ್ರಿಕ ನೆರವು ನೀಡುವಂತೆ ಮನವಿ ಮಾಡಲಾಗುವುದು ಎಂದರು.

ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ ಮಾತನಾಡಿ, ಟ್ರಾಮಾ ಕೇರ್ ಸೆಂಟರ್ ನಿರ್ಮಾಣಕ್ಕೆ ಬಿಇಎಲ್ ಸಂಸ್ಥೆ 2.73 ಕೋಟಿ ಅನುದಾನ ನೀಡಿದ್ದು, ಸ್ಥಳೀಯ ರೋಟರಿ ಕ್ಲಬ್ 1.70 ಕೋಟಿಗೂ ಅಧಿಕ ನೆರವು ನೀಡಿದೆ ಎಂದು ತಿಳಿಸಿದರು. ಆಸ್ಪತ್ರೆಗೆ ಇನ್ನಷ್ಟು ವೈದ್ಯಕೀಯ ಸೌಲಭ್ಯಗಳನ್ನು ಕಲ್ಪಿಸುವಂತೆ ಸಚಿವರಲ್ಲಿ ಮನವಿ ಮಾಡಿದರು.

ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಕೆ. ಲಕ್ಷ್ಮೀಪ್ರಿಯಾ, ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ. ದಿಲೀಷ್ ಶಶಿ, ಪೊಲೀಸ್ ವರಿಷ್ಠಾಧಿಕಾರಿ ದೀಪನ್ ಎಂ.ಎನ್., ಡಿಎಚ್‌ಒ ಡಾ. ಸಂಜಯ್ ದೊಡ್ಡಮನಿ, ಬಿಇಎಲ್ ನಿರ್ದೇಶಕ ರಜನೀಶ್ ಶರ್ಮಾ ಸೇರಿದಂತೆ ವಿವಿಧ ಇಲಾಖೆಗಳ ಅಧಿಕಾರಿಗಳು ಹಾಗೂ ಗಣ್ಯರು ಇದ್ದರು.

What do you feel about this post?

0%
like

Like

0%
love

Love

0%
happy

Happy

0%
haha

Haha

0%
sad

Sad

0%
angry

Angry

Leave a Reply

Your email address will not be published. Required fields are marked *