ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕೇಂದ್ರ ಸರ್ಕಾರದ ಮಹಾತ್ವಾಕಾಂಕ್ಷಿ ಆರೋಗ್ಯ ಸೇವಾ ಯೋಜನೆಗಳಲ್ಲಿ ಒಂದಾಗಿರುವ ಪಿಎಂ ರಾಹತ್ (ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲಾತಿ ಮತ್ತು ಖಚಿತ ಚಿಕಿತ್ಸೆ) ಯೋಜನೆಯ ಲಾಭವನ್ನು 45 ಮಂದಿ ಪಡೆದುಕೊಂಡಿದ್ದಾರೆ.
ಪ್ರಧಾನ ಮಂತ್ರಿ ರಸ್ತೆ ಅಪಘಾತ ಸಂತ್ರಸ್ತರ ಆಸ್ಪತ್ರೆಗೆ ದಾಖಲಾತಿ ಮತ್ತು ಖಚಿತ ಚಿಕಿತ್ಸೆ ಆರೋಗ್ಯ ಸೇವಾ ಯೋಜನೆಯು ಜಿಲ್ಲೆಯಲ್ಲಿ ನಿಧಾನವಾಗಿ ವೇಗ ಪಡೆದುಕೊಳ್ಳುತ್ತಿದೆ. ರಸ್ತೆ ಅಪಘಾತಕ್ಕೆ ಒಳಗಾಗುವವರಿಗೆ ಪಿಎಂ ರಾಹತ್ ಯೋಜನೆಯನ್ನು ಅನುಷ್ಠಾನಕ್ಕೆ ತಂದಿದ್ದು, ಅಪಘಾತಕ್ಕೆ ಒಳಗಾದ ವ್ಯಕ್ತಿ ಬಿಪಿಎಲ್ , ಎಪಿಎಲ್ ಆಗಿದ್ದರೂ ಕೂಡ ಈ ಯೋಜನೆಯ ಲಾಭ ಪಡೆಯಬಹುದಾಗಿದೆ.
ರಸ್ತೆ ಅಪಘಾತದಲ್ಲಿ ಗಾಯಗೊಂಡವರಿಗೆ ತಕ್ಷಣವೇ ಹಾಗೂ ನಗದು ರಹಿತ ಚಿಕಿತ್ಸೆ ದೊರಕುವಂತೆ ಮಾಡುವ ಮೂಲಕ, ಯಾವುದೇ ಜೀವ ಹಣದ ಕೊರತೆಯಿಂದ ಕಳೆದುಹೋಗಬಾರದು ಎಂಬ ಉದ್ದೇಶವನ್ನು ಈ ಯೋಜನೆ ಹೊಂದಿದೆ. ಅಪಘಾತಕ್ಕೆ ಒಳಗಾದ ವ್ಯಕ್ತಿ ಮೊದಲ 7 ದಿನಗಳವರೆಗೆ ಗರಿಷ್ಠ 1.50 ಲಕ್ಷ ರೂಪಾಯಿವರೆಗೆ ಉಚಿತ ಚಿಕಿತ್ಸೆ ಹಾಗೂ ಅಪಘಾತದ ಮೊದಲ ಒಂದು ಗಂಟೆ (ಗೋಲ್ಡನ್ ಅವರ್) ಪರಿಣಾಮಕಾರಿಯಾಗಿ ಬಳಸಿಕೊಳ್ಳಲು ಸರ್ಕಾರ ಈ ಯೋಜನೆ ಜಾರಿಗೊಳಿಸಿದೆ.
ಯೋಜನೆ ಅಡಿ ದೇಶದ ಯಾವುದೇ ರಸ್ತೆಯಲ್ಲಿ ಅಪಘಾತಕ್ಕೆ ಒಳಗಾದ ಅರ್ಹ ಸಂತ್ರಸ್ತ ಪ್ರತಿ ವ್ಯಕ್ತಿಗೆ ಗರಿಷ್ಠ 1.5 ಲಕ್ಷ ರೂಪಾಯಿ ಏಳು ದಿನಗಳ ಕಾಲ ನಗದು ರಹಿತ ಚಿಕಿತ್ಸೆ ಸಿಗಲಿದೆ. ಜೀವಕ್ಕೆ ಅಪಾಯ ಇಲ್ಲದ ಪ್ರಕರಣಗಳಲ್ಲಿ 24 ಗಂಟೆಗಳವರೆಗೆ ಹಾಗೂ ಗಂಭೀರ ಸ್ಥಿತಿಯ ಪ್ರಕರಣಗಳಲ್ಲಿ 48 ಗಂಟೆಗಳವರೆಗೆ ಸ್ಥಿರೀಕರಣ ಚಿಕಿತ್ಸೆ ನೀಡಲಾಗುತ್ತದೆ. ಸಮಗ್ರ ಡಿಜಿಟಲ್ ವ್ಯವಸ್ಥೆಯ ಮೂಲಕ ಪೊಲೀಸರ ದೃಢೀಕರಣದ ಆಧಾರದ ಮೇಲೆ ಚಿಕಿತ್ಸೆ ಮುಂದುವರೆಯಲಿದೆ.
ಯೋಜನೆ ತುರ್ತು ಪ್ರತಿಕ್ರಿಯೆ ಸಹಾಯ ವ್ಯವಸ್ಥೆಗೆ ಸಹಾಯವಾಣಿ 112 ಸಂಪರ್ಕಿಸಬೇಕು. ಅಪಘಾತ ಸಂತ್ರಸ್ತರು, ರಾಹ್-ವೀರ್’ ಅಥವಾ ಸ್ಥಳದಲ್ಲಿ ಇರುವ ಯಾವುದೇ ವ್ಯಕ್ತಿ ಸಹಾಯವಾಣಿಗೆ ಕರೆ ಮಾಡಿ ಸಮೀಪದ ಗುರುತಿಸಲಾದ ಆಸ್ಪತ್ರೆಗೆ ಸಂಬಂಧಿಸಿದ ಮಾಹಿತಿ ಹಾಗೂ ಅಂಬುಲೆನ್ಸ್ ನೆರವು ಪಡೆಯಬಹುದು. ತುರ್ತು ಸೇವೆ, ಪೊಲೀಸರು ಮತ್ತು ಆಸ್ಪತ್ರೆಗಳ ನಡುವೆ ತ್ವರಿತ ಸಮನ್ವಯ ಸಾಧ್ಯ ಆಗಲಿದೆ.
ಯೋಜನೆಯ ಅನುಷ್ಠಾನಕ್ಕಾಗಿ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯದ ಇಲೆಕ್ಟ್ರಾನಿಕ್ ಡೀಟೈಲ್ಡ್ ಅಕ್ಸಿಡೆಂಟ್ ರಿಪೋರ್ಟ್ (ಇಡಿಎಆರ್) ವೇದಿಕೆಯನ್ನು ರಾಷ್ಟ್ರೀಯ ಆರೋಗ್ಯ ಪ್ರಾಧಿಕಾರದ ಟ್ರಾನ್ಸಾಕ್ಷನ್ ಮ್ಯಾನೇಜ್‌ಮೆಂಟ್ ಸಿಸ್ಟಂ (ಟಿಎಂಎಸ್ 2.0) ಜತೆ ಸಂಯೋಜಿಸಲಾಗಿದೆ. ಅಪಘಾತದ ವರದಿ, ಆಸ್ಪತ್ರೆಗೆ ದಾಖಲಾತಿ, ಪೊಲೀಸ್ ದೃಢೀಕರಣ, ಚಿಕಿತ್ಸೆ, ಪರಿಹಾರ ಪ್ರಕ್ರಿಯೆ ಹಾಗೂ ಅಂತಿಮ ಪಾವತಿ ಎಲ್ಲವೂ ಡಿಜಿಟಲ್ ಮೂಲಕ ನಡೆಯಲಿದೆ.
ಯೋಜನೆ ಅಡಿ ಅಪಘಾತಕ್ಕೊಳಗಾದವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಿದರೆ, ಆಸ್ಪತ್ರೆಗಳಿಗೆ ಚಿಕಿತ್ಸಾ ವೆಚ್ಚವನ್ನು ಕೇಂದ್ರ ಸರ್ಕಾರ ಭರಿಸುತ್ತದೆ. ಅಪಘಾತಕ್ಕೊಳಗಾದವರನ್ನು ಯಾವುದೇ ವ್ಯಕ್ತಿ ಆಸ್ಪತ್ರೆಗೆ ದಾಖಲಿಸಬಹುದಾಗಿದ್ದು, ಅವರ ಹೆಸರು, ವಿಳಾಸ ಅಥವಾ ಇತರ ವಿವರಗಳನ್ನು ನೀಡುವ ಅಗತ್ಯಇಲ್ಲ.
ಈ ಯೋಜನೆಗೆ ಖಾಸಗಿ ಮತ್ತು ಸರ್ಕಾರಿ ಆಸ್ಪತ್ರೆಗಳು ಸೇರಿಕೊಂಡಿದ್ದು, ಸಂತ್ರಸ್ತರಿಗೆ ಚಿಕಿತ್ಸೆ ಒದಗಿಸುವ ವ್ಯವಸ್ಥೆ ಇದೆ. 2030ರೊಳಗೆ ರಸ್ತೆ ಅಪಘಾತಗಳಿಂದಾಗುವ ಸಾವು-ನೋವುಗಳನ್ನು ಶೇ 50 ರಷ್ಟು ಕಡಿಮೆ ಮಾಡುವ ರಾಷ್ಟ್ರೀಯ ಗುರಿಗೆ ಪೂರಕವಾಗಿ ಪಿಎಂ ರಾಹತ್ ಯೋಜನೆ ದೇಶದ ತುರ್ತು ವೈದ್ಯಕೀಯ ಸೇವಾ ವ್ಯವಸ್ಥೆ ಮತ್ತಷ್ಟು ಬಲಪಡಿಸುವ ಮಹತ್ವದ ಹೆಜ್ಜೆ ಆಗಿದೆ.
ವ್ಯಕ್ತಿ ಅಪಘಾತಕ್ಕೊಳಗಾದ ಸಂದರ್ಭದಲ್ಲಿ ಯಾವುದೇ ವಿಳಂಬವಿಲ್ಲದೆ ಹತ್ತಿರದ ಆಸ್ಪತ್ರೆಗೆ ದಾಖಲಿಸಿದರೆ ಯೋಜನೆಯ ಪ್ರಯೋಜನ ಪಡೆಯಬಹುದು. ಇದೂವರೆಗೆ ಜಿಲ್ಲೆಯಲ್ಲಿ 45 ಮಂದಿ ಈ ಯೋಜನೆ ಸೌಲಭ್ಯ ಪಡೆದುಕೊಂಡಿದ್ದಾರೆ. ಅಪಘಾತ ನಡೆದ 24 ಗಂಟೆಯೊಳಗೆ, ಗಂಭೀರ ಪರಿಸ್ಥಿತಿಯಲ್ಲಿ 48 ಗಂಟೆಯೊಳಗೆ ಇ-ಡಾರ್ ಪೋರ್ಟಲ್‌ನಲ್ಲಿ ಪ್ರಕರಣ ದಾಖಲಾದರೆ ಯೋಜನೆ ಅಡಿ ಚಿಕಿತ್ಸೆ ವೆಚ್ಚವನ್ನು ಸರ್ಕಾರ ಭರಿಸುತ್ತದೆ ಎಂದು ಜಿಲ್ಲಾ ಕುಟುಂಬ ಕಲ್ಯಾಣ ಅಧಿಕಾರಿ ಡಾ. ತಿಮ್ಮಯ್ಯ ತಿಳಿಸಿದರು.
ಮಂಗಳೂರಿನ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಸೌಲಭ್ಯ
ದಕ್ಷಿಣ ಜಿಲ್ಲೆಯ ಫಾದರ್ ಮುಲ್ಲರ್, ಎ.ಜೆ. ಆಸ್ಪತ್ರೆ, ಯೆನಪೋಯ, ಕೆಎಂಸಿ ಸೇರಿದಂತೆ ಹಲವು ಖಾಸಗಿ ಹಾಗೂ ಸರ್ಕಾರಿ ಆಸ್ಪತ್ರೆಗಳು ಈ ಯೋಜನೆಯಲ್ಲಿ ಭಾಗಿ ಆಗಿವೆ. ಕೇಂದ್ರದಿಂದ ಪ್ರತಿದಿನಕ್ಕೆ ಗರಿಷ್ಠ 1.50 ಲಕ್ಷ ರೂಪಾಯಿವರೆಗೆ ವೆಚ್ಚವನ್ನು ಭರಿಸಲಾಗುತ್ತದೆ. ಇದೊಂದು ಅಪಘಾತ ಚಿಕಿತ್ಸೆಗೆ ಸಹಕಾರಿ ಯೋಜನೆ ಆಗಿದೆ. ಈ ಯೋಜನೆಯ ಕುರಿತು ಮತ್ತಷ್ಟು ಪ್ರಚಾರದ ಅಗತ್ಯ ಇದ್ದು, ಇದಕ್ಕಾಗಿ ಜಿಲ್ಲೆಯಲ್ಲಿ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ ಎಂದು ಡಿಎಚ್ ಒ ಡಾ. ತಿಮ್ಮಯ್ಯ ತಿಳಿಸಿದ್ದಾರೆ.
What do you feel about this post?
Like
Love
Happy
Haha
Sad



