ನವದೆಹಲಿ: ದಕ್ಷಿಣ ಕನ್ನಡ ಸೇರಿದಂತೆ ಕರಾವಳಿ ಹಾಗೂ ಮಲೆನಾಡು ಭಾಗದ ಅಡಿಕೆ ಬೆಳೆಗಾರರನ್ನು ಕಾಡುತ್ತಿರುವ ಎಲೆ ಚುಕ್ಕೆ, ಹಳದಿ ಎಲೆ ಹಾಗೂ ಕೊಳೆ ರೋಗಗಳಿಗೆ ಶಾಶ್ವತ ವೈಜ್ಞಾನಿಕ ಪರಿಹಾರ ಕಲ್ಪಿಸುವಂತೆ ಹಾಗೂ ತೋಟಗಾರಿಕೆ ಅಭಿವೃದ್ಧಿ ರಾಷ್ಟ್ರೀಯ ಮಿಷನ್ (ಎಂಐಡಿಎಚ್) ನಿಯಮಾವಳಿಗೆ ತಿದ್ದುಪಡಿ ತರುವಂತೆ ದಕ್ಷಿಣ ಕನ್ನಡ ಸಂಸದ ಕ್ಯಾ. ಬ್ರಿಜೇಶ್ ಚೌಟ ಲೋಕಸಭೆಯಲ್ಲಿ ಒತ್ತಾಯಿಸಿದರು.
ಸದನದಲ್ಲಿ ವಿಷಯ ಪ್ರಸ್ತಾಪಿಸಿದ ಅವರು, ಅಡಿಕೆ ತೋಟಗಳಲ್ಲಿ ಪುನರಾವರ್ತಿತವಾಗಿ ಕಾಣಿಸಿಕೊಳ್ಳುತ್ತಿರುವ ವಿವಿಧ ರೋಗಗಳಿಂದ ರೈತರು ಭಾರೀ ನಷ್ಟ ಅನುಭವಿಸುತ್ತಿದ್ದಾರೆ. ರೋಗ ನಿರ್ಣಯ, ತೋಟದ ನೈರ್ಮಲ್ಯ, ಪೋಷಕಾಂಶ ನಿರ್ವಹಣೆ, ನೀರು ಹರಿಸುವ ವ್ಯವಸ್ಥೆ, ನಿರಂತರ ಮೇಲ್ವಿಚಾರಣೆ ಹಾಗೂ ಅಗತ್ಯವಿರುವ ಕಡೆ ಮರುನಾಟಿ ಸೇರಿದಂತೆ ಸಮಗ್ರ ವೈಜ್ಞಾನಿಕ ಕ್ರಮಗಳನ್ನು ಜಾರಿಗೊಳಿಸುವ ಅಗತ್ಯವಿದೆ ಎಂದು ಹೇಳಿದರು.
ಪ್ರಸ್ತುತ ಕೇಂದ್ರ ಮತ್ತು ರಾಜ್ಯ ಸರ್ಕಾರಗಳು 60:40 ಅನುಪಾತದಲ್ಲಿ ನೀಡುತ್ತಿರುವ ಆರ್ಥಿಕ ನೆರವು ನಿಗದಿತ ಘಟಕ ವೆಚ್ಚವನ್ನು ಆಧರಿಸಿರುವುದರಿಂದ, ರೋಗದ ತೀವ್ರತೆ ಹಾಗೂ ಚಿಕಿತ್ಸೆಯ ನೈಜ ವೆಚ್ಚ ಭರಿಸಲು ಅದು ಸಾಕಾಗುತ್ತಿಲ್ಲ ಎಂದು ಅವರು ಗಮನ ಸೆಳೆದರು.
ಈ ಹಿನ್ನೆಲೆಯಲ್ಲಿ ಭಾರತೀಯ ಕೃಷಿ ಸಂಶೋಧನಾ ಮಂಡಳಿ, ಕೇಂದ್ರ ತೋಟ ಬೆಳೆಗಳ ಸಂಶೋಧನಾ ಸಂಸ್ಥೆ (ಸಿಪಿಸಿಆರ್‌ಐ), ಅಡಿಕೆ ಮತ್ತು ಮಸಾಲೆ ಅಭಿವೃದ್ಧಿ ನಿರ್ದೇಶನಾಲಯ, ರಾಜ್ಯ ಸರ್ಕಾರಗಳು ಹಾಗೂ ಬೆಳೆಗಾರರ ಸಂಘಟನೆಗಳ ಸಹಯೋಗದಲ್ಲಿ ನಿಗದಿತ ಅವಧಿಯೊಳಗೆ ವೈಜ್ಞಾನಿಕ ಅಧ್ಯಯನ ಕೈಗೊಳ್ಳಬೇಕು ಎಂದು ಆಗ್ರಹಿಸಿದರು. ಅಧ್ಯಯನದ ಆಧಾರದಲ್ಲಿ ರೋಗದ ಹಂತಕ್ಕೆ ತಕ್ಕ ಚಿಕಿತ್ಸೆ, ಪ್ರತಿ ಹೆಕ್ಟೇರ್‌ಗೆ ಅಗತ್ಯ ವೆಚ್ಚ, ಮರುನಾಟಿ ಅಗತ್ಯತೆ ಹಾಗೂ ಫಲಾನುಭವಿಗಳ ಮಾನದಂಡಗಳನ್ನು ರೂಪಿಸಬೇಕೆಂದರು.
ಇದಲ್ಲದೆ, ಅಧ್ಯಯನ ವರದಿಯ ಆಧಾರದಲ್ಲಿ ಎಂಐಡಿಎಚ್ ನಿಯಮಾವಳಿಗೆ ತಿದ್ದುಪಡಿ ತಂದು, ತೋಟಗಾರಿಕಾ ಬೆಳೆಗಳಿಗೆ ರೋಗ ಆಧಾರಿತ ಪ್ರತ್ಯೇಕ ಯೋಜನೆ ರೂಪಿಸಬೇಕು. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಆದ್ಯತೆ ನೀಡಿ, ಒಂದೇ ಬಾರಿ ಸಹಾಯಧನ ನೀಡುವ ಬದಲು ಹಂತ ಹಂತವಾಗಿ ರೋಗ ನಿಯಂತ್ರಣ ಮತ್ತು ವಿಸ್ತರಣಾ ಸೇವೆಗಳನ್ನು ಒದಗಿಸಬೇಕು ಎಂದು ಸಂಸದರು ಮನವಿ ಮಾಡಿದರು.
ಕೇಂದ್ರ ಕೃಷಿ ಸಚಿವ ಶಿವರಾಜ್ ಸಿಂಗ್ ಚೌಹಾಣ್ ಅವರಿಗೆ ಈ ಸಂಬಂಧ ಈಗಾಗಲೇ ಪತ್ರ ಬರೆದಿರುವುದಾಗಿ ತಿಳಿಸಿದ ಅವರು, ಎಲೆ ಚುಕ್ಕೆ ಹಾಗೂ ಹಳದಿ ಎಲೆ ರೋಗದಿಂದ ಬಾಧಿತ ಪ್ರದೇಶಗಳಿಗೆ ವಿಶೇಷ ನೆರವು, ಹಿಂದಿನ ಅನುದಾನದ ಮರುಬಿಡುಗಡೆ ಹಾಗೂ ವಾಸ್ತವ ಸ್ಥಿತಿ ಪರಿಶೀಲನೆಗಾಗಿ ಮಂಗಳೂರಿಗೆ ಭೇಟಿ ನೀಡುವಂತೆ ಸಚಿವರನ್ನು ಕೋರಿರುವುದಾಗಿ ಹೇಳಿದರು. ದಕ್ಷಿಣ ಕನ್ನಡ, ಚಿಕ್ಕಮಗಳೂರು ಹಾಗೂ ಕೊಡಗು ಸೇರಿದಂತೆ ಸುಮಾರು 16 ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಹಳದಿ ಎಲೆ ರೋಗದ ಬಾಧೆ ಕಂಡುಬಂದಿರುವುದರಿಂದ ಕೇಂದ್ರ ಮತ್ತು ರಾಜ್ಯ ಸಂಸ್ಥೆಗಳ ಸಮನ್ವಯದಲ್ಲಿ ತ್ವರಿತ ಕ್ರಮ ಅಗತ್ಯ ಎಂದು ಅವರು ಒತ್ತಾಯಿಸಿದರು.
What do you feel about this post?
Like
Love
Happy
Haha
Sad







