ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಖಾಝಿ ಆಗಿದ್ದ ಶೈಖುನಾ ಅಲ್ ಹಾಜ್ ತ್ವಾಖಾ ಅಹ್ಮದ್ ಮುಸ್ಲಿಯಾರ್ ಅಲ್ ಅಝ್ಹರಿ ಅವರ ನಿಧನದಿಂದ ತೆರವಾದ ಸ್ಥಾನಕ್ಕೆ ಪಾಣಕ್ಕಾಡ್ ಸೈಯ್ಯದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ತಂಬಳ್ ಬಾ-ಅಲವಿ ಅವರನ್ನು ನೂತನ ಜಿಲ್ಲಾ ಖಾಝಿಯಾಗಿ ನೇಮಕ ಮಾಡಲಾಗಿದೆ. ಜುಲೈ 22ರಂದು ಮಂಗಳೂರಿನಲ್ಲಿ ಅವರ ಅಧಿಕೃತ ಸ್ವೀಕಾರ ಸಮಾರಂಭ ನಡೆಯಲಿದೆ ಎಂದು ಮಾಜಿ ಮೇಯರ್ ಕೆ. ಅಶ್ರಫ್ ಅವರು ಸೋಮವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.
ಮಂಗಳೂರಿನ ಅನ್ಸಾರಿ ರಸ್ತೆಯಲ್ಲಿ ಇರುವ ಝೀನತ್ ಭಕ್ ಯತೀಂಖಾನ ಸಭಾಂಗಣದಲ್ಲಿ ಇದೇ 22 ರಂದು ಮಧ್ಯಾಹ್ನ 1.30 ಕ್ಕೆ ಸ್ವೀಕಾರ ಸಮಾರಂಭ ನಡೆಯಲಿದ್ದು, ಧಾರ್ಮಿಕ ಮುಖಂಡರು, ಜನಪ್ರತಿನಿಧಿಗಳು ಹಾಗೂ ವಿವಿಧ ಕ್ಷೇತ್ರಗಳ ಗಣ್ಯರು ಭಾಗವಹಿಸಲಿದ್ದಾರೆ. 1966ರಲ್ಲಿ ಕೇರಳದ ಮಲಪ್ಪುರಂ ಜಿಲ್ಲೆಯ ಪಾಣಕ್ಕಾಡ್ ಸಮೀಪದ ಪೂವಾಡ್‌ನಲ್ಲಿ ಜನಿಸಿದ ಸೈಯ್ಯದ್ ನಾಸಿರ್ ಅಬ್ದುಲ್ ಹಯ್ ಶಿಹಾಬುದ್ದೀನ್ ಬಾ-ಅಲವಿ ಅವರು ಪಾಣಕ್ಕಾಡ್ ಬಾ-ಅಲವಿ ಕುಟುಂಬದ ಪ್ರಮುಖ ವಾರಸುದಾರರಾಗಿದ್ದಾರೆ. ಧಾರ್ಮಿಕ ಶಿಕ್ಷಣ, ಆಧ್ಯಾತ್ಮಿಕ ಮಾರ್ಗದರ್ಶನ ಹಾಗೂ ಸಾಮಾಜಿಕ ನಾಯಕತ್ವದಲ್ಲಿ ಅವರು ಗಮನಾರ್ಹ ಸೇವೆ ಸಲ್ಲಿಸಿದ್ದಾರೆ ಎಂದು ತಿಳಿಸಿದರು
ಸಾಂಪ್ರದಾಯಿಕ ದರ್ಸ್ ಶಿಕ್ಷಣದ ಮೂಲಕ ಇಸ್ಲಾಮಿಕ್ ಶಾಸ್ತ್ರಗಳಲ್ಲಿ ಪಾಂಡಿತ್ಯ ಪಡೆದಿರುವ ಅವರು, 2009 ರಿಂದ ಕೋಝಿಕ್ಕೋಡ್ ವಲಿಯ ಖಾಝಿಯಾಗಿ ಸೇವೆ ಸಲ್ಲಿಸುತ್ತಿದ್ದು, ಮಲಪ್ಪುರಂ, ಪಾಲಕ್ಕಾಡ್ ಹಾಗೂ ತ್ರಿಶೂರ್ ಜಿಲ್ಲೆಗಳ 370ಕ್ಕೂ ಅಧಿಕ ಮಹಲ್ಲಾಗಳ ಖಾಝಿಯಾಗಿಯೂ ಕಾರ್ಯನಿರ್ವಹಿಸುತ್ತಿದ್ದಾರೆ. ಅಲ್ಲದೆ, ಸುನ್ನಿ ಮಹಲ್ಲು ಫೆಡರೇಶನ್ ಮಲಪ್ಪುರಂ ಜಿಲ್ಲಾ ಮಸ್ಲಹತ್ ಸಮಿತಿಯ ಅಧ್ಯಕ್ಷರು, ಎಸ್‌ವೈಎಸ್ ಕೇರಳ ರಾಜ್ಯ ಸಮಿತಿ ಸದಸ್ಯರು ಹಾಗೂ ಸಮಸ್ತ ಕೇರಳ ಜಂಇಯ್ಯತುಲ್ ಉಲಮಾ ತಿರೂರಂಗಾಡಿ ತಾಲೂಕು ಸಮಿತಿಯ ಅಧ್ಯಕ್ಷರಾಗಿಯೂ ಸೇವೆ ಸಲ್ಲಿಸುತ್ತಿದ್ದಾರೆ ಎಂದರು.
ಸ್ವೀಕಾರ ಸಮಾರಂಭದಲ್ಲಿ ಸೈಯದುಲ್ ಉಮ್ಮ ಸಯ್ಯದ್ ಸ್ವಾದಿಕ್ ಅಲಿ ಶಿಹಾಬ್ ತಂಬಳ್, ಶೈಖುನಾ ಉಸ್ತಾದ್ ಎಂ.ಟಿ. ಅಬ್ದುಲ್ಲಾ ಮುಸ್ಲಿಯಾರ್, ಶೈಖುನಾ ಉಸ್ತಾದ್ ಕೊಯ್ಯೋಡ್ ಉಮರ್ ಮುಸ್ಲಿಯಾರ್, ಸಯ್ಯದ್ ಅಬ್ಬಾಸ್ ಅಲಿ ಶಿಹಾಬ್ ತಂಬಳ್, ಎಸ್‌ಕೆಎಸ್‌ಎಸ್‌ಎಫ್ ಕೇಂದ್ರ ಅಧ್ಯಕ್ಷ ಸಯ್ಯದ್ ಹಮೀದ್ ಅಲಿ ಶಿಹಾಬ್ ತಂಬಳ್ ಸೇರಿದಂತೆ ಸಮಸ್ತದ ಪ್ರಮುಖ ಉಲಮಾಗಳು ಭಾಗವಹಿಸಲಿದ್ದಾರೆ. ಸಭೆಯ ಅಧ್ಯಕ್ಷತೆಯನ್ನು ಝೀನತ್ ಭಕ್ ಕೇಂದ್ರ ಜುಮಾ ಮಸೀದಿಯ ಅಧ್ಯಕ್ಷ ಡಾ. ಹಾಜಿ ಯೆನೆಪೋಯ ಅಬ್ದುಲ್ಲಾ ಕುಂಞ ವಹಿಸಲಿದ್ದಾರೆ ಎಂದು ತಿಳಿಸಿದರು.
ಸಮಾರಂಭದ ಪ್ರಧಾನ ಕಾರ್ಯದರ್ಶಿ ಮೊಹಮ್ಮದ್ ಹನೀಫ್, ಕೋಶಾಧಿಕಾರಿ ಹಾಜಿ ಎಸ್.ಎಂ. ರಶೀದ್, ಹಾಜಿ ಅಬ್ಬು ಸಮದ್, ಮೊಹಮ್ಮದ್ ಅಶ್ರಫ್ ಹಳೆಮನೆ, ಮಕ್ಬೂಲ್ ಅಹ್ಮದ್, ಅದ್ದು ಹಾಜಿ, ಐ. ಮೊಯಿದಿನಬ್ಬ ಹಾಜಿ ಸೇರಿದಂತೆ ಹಲವರು ಇದ್ದರು.
What do you feel about this post?
Like
Love
Happy
Haha
Sad







