ಮಂಗಳೂರು: ಅಡಿಕೆ ಮಾರುಕಟ್ಟೆಯ ಏರಿಳಿತ ಮತ್ತು ಕೊಕ್ಕೊ ವಲಯದ ಸವಾಲುಗಳ ನಡುವೆಯೂ ಕ್ಯಾಂಪ್ಕೊ 2025–26ನೇ ಆರ್ಥಿಕ ವರ್ಷದಲ್ಲಿ 3,735 ಕೋಟಿ ಒಟ್ಟು ವಹಿವಾಟು ನಡೆಸಿದ್ದು, 49.62 ಕೋಟಿ ತೆರಿಗೆಪೂರ್ವ ಲಾಭ ದಾಖಲಿಸಿದೆ. ಸದಸ್ಯರಿಗೆ ಶೇ 14ರಷ್ಟು ಡಿವಿಡೆಂಡ್ ನೀಡಲು ಸಂಸ್ಥೆಯ ನಿರ್ದೇಶಕ ಮಂಡಳಿ ಶಿಫಾರಸು ಮಾಡಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಅವರು ಗುರುವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಕ್ಯಾಂಪ್ಕೊದ ಪ್ರಮುಖ ವ್ಯವಹಾರವಾಗಿರುವ ಅಡಿಕೆ ಖರೀದಿ 2,924.32 ಕೋಟಿಗೆ ತಲುಪಿದ್ದು, ಒಟ್ಟು 58,742.76 ಮೆಟ್ರಿಕ್ ಟನ್ ಅಡಿಕೆಯನ್ನು ಖರೀದಿಸಲಾಗಿದೆ. ಇದರಲ್ಲಿ 1,362.13 ಕೋಟಿ ಮೌಲ್ಯದ 24,052.07 ಮೆಟ್ರಿಕ್ ಟನ್ ಕೆಂಪಡಿಕೆ ಹಾಗೂ 1,562.19 ಕೋಟಿ ಮೌಲ್ಯದ 34,690.69 ಮೆಟ್ರಿಕ್ ಟನ್ ಬಿಳಿ ಅಡಿಕೆ ಸೇರಿದೆ. 2,985.19 ಕೋಟಿ ಮೌಲ್ಯದ 59,088.64 ಮೆಟ್ರಿಕ್ ಟನ್ ಅಡಿಕೆಯನ್ನು ಮಾರಾಟ ಮಾಡಲಾಗಿದೆ ಎಂದು ತಿಳಿಸಿದರು.
ಆಮದು ಅಡಿಕೆ ಬಗ್ಗೆ ಕಳವಳ:
ದೇಶೀಯ ಮಾರುಕಟ್ಟೆಗೆ ಹೆಚ್ಚುತ್ತಿರುವ ಆಮದು ಅಡಿಕೆಯ ಒಳಹರಿವು ಬೆಳೆಗಾರರು ಹಾಗೂ ಸಂಘಟಿತ ಮಾರಾಟ ಸಂಸ್ಥೆಗಳಿಗೆ ಸವಾಲಾಗಿದೆ ಎಂದು ಕ್ಯಾಂಪ್ಕೊ ಹೇಳಿದೆ. ಆಮದು ಅಡಿಕೆಯನ್ನು ದೇಶೀಯ ಅಡಿಕೆಯೊಂದಿಗೆ ಬೆರೆಸಿ ಮಾರಾಟ ಮಾಡುವುದರಿಂದ ಮಾರುಕಟ್ಟೆಯ ಪಾರದರ್ಶಕತೆ ಹಾಗೂ ಬೆಲೆ ನಿರ್ಧಾರಕ್ಕೆ ಧಕ್ಕೆಯಾಗುವ ಸಾಧ್ಯತೆಯಿದೆ. ಆಮದು ನಿಯಮಗಳ ಕಟ್ಟುನಿಟ್ಟಿನ ಜಾರಿ, ತಪ್ಪು ವರ್ಗೀಕರಣ ತಡೆ ಸೇರಿದಂತೆ ಸೂಕ್ತ ಕ್ರಮ ಕೈಗೊಳ್ಳುವಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗಿದೆ. ಈ ವಿಚಾರವನ್ನು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ಗಮನಕ್ಕೂ ತರಲಾಗಿದೆ ಎಂದು ತಿಳಿಸಿದರು.
ಉತ್ತರ ಪ್ರದೇಶದಲ್ಲಿ ಅಡಿಕೆ ವಹಿವಾಟಿನ ಮೇಲೆ ವಿಧಿಸಲಾಗುತ್ತಿರುವ ಮಂಡಿ ತೆರಿಗೆಯ ವಿಚಾರವನ್ನೂ ಕ್ಯಾಂಪ್ಕೊ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹಾಗೂ ಉತ್ತರ ಪ್ರದೇಶ ಸರ್ಕಾರದ ಗಮನಕ್ಕೆ ತಂದಿದೆ. ತೆರಿಗೆಯಿಂದ ಅಂತರರಾಜ್ಯ ಮಾರಾಟದ ವೆಚ್ಚ ಹೆಚ್ಚಾಗುತ್ತಿದೆ ಎಂದರು.
ರಬ್ಬರ್ ಹಾಗೂ ಕಾಳುಮೆಣಸು ವಹಿವಾಟಿನಲ್ಲಿಯೂ ಸಂಸ್ಥೆ ಉತ್ತಮ ಸಾಧನೆ ಮಾಡಿದೆ. ರೈತರಿಗೆ ಕೃಷಿ ಪರಿಕರಗಳನ್ನು ರಿಯಾಯಿತಿ ದರದಲ್ಲಿ ಒದಗಿಸುವ ಜತೆಗೆ 1,16,275 ಕೊಕ್ಕೊ ಸಸಿಗಳನ್ನು ವಿತರಿಸಲಾಗಿದೆ. ವಿವಿಧ ಸದಸ್ಯ ಸೌಲಭ್ಯ ಯೋಜನೆಗಳಡಿ 120 ಫಲಾನುಭವಿಗಳಿಗೆ ₹86.42 ಲಕ್ಷ ಆರ್ಥಿಕ ನೆರವು ನೀಡಲಾಗಿದೆ ಎಂದರು.
2026ರ ಮಾರ್ಚ್ 31ಕ್ಕೆ ಕ್ಯಾಂಪ್ಕೊದ ಒಟ್ಟು ಸದಸ್ಯತ್ವ 1,53,794 ಆಗಿದ್ದು, 66.27 ಕೋಟಿ ಪಾವತಿಸಿದ ಷೇರು ಬಂಡವಾಳ ಮತ್ತು 545.57 ಕೋಟಿ ಮೀಸಲು ಹಾಗೂ ಇತರ ನಿಧಿಗಳಿವೆ. 2026–27ರಲ್ಲಿ ಅಡಿಕೆ ಖರೀದಿ ಹಾಗೂ ಮಾರುಕಟ್ಟೆ ಬೆಂಬಲ ಬಲಪಡಿಸುವುದು, ಶಾಖೆ–ಖರೀದಿ ಕೇಂದ್ರಗಳ ವಿಸ್ತರಣೆ, 1 ಲಕ್ಷ ಕೊಕ್ಕೊ ಸಸಿಗಳ ವಿತರಣೆ, ಚಾಕೊಲೇಟ್ ವಿಭಾಗದ ಬಲವರ್ಧನೆ, ಮಾರುಕಟ್ಟೆ ವಿಸ್ತರಣೆ ಹಾಗೂ ರೈತಪರ ಸೇವೆಗಳಿಗೆ ಆದ್ಯತೆ ನೀಡಲು ಸಂಸ್ಥೆ ಯೋಜಿಸಿದೆ ಎಂದರು.
ಸಂಸ್ಥೆಯ ಉಪಾಧ್ಯಕ್ಷ ಪದ್ಮರಾಜ್ ಪಟ್ಟಾಜೆ, ನಿರ್ದೇಶಕ ಪುರುಷೋತ್ತಮ ಭಟ್, ಡೆಪ್ಯುಟಿ ಜನರಲ್ ಮ್ಯಾನೇಜರ್ (ಮಾರ್ಕೆಟಿಂಗ್) ಗೋವಿಂದ ಭಟ್ ಹಾಗೂ ಜನರಲ್ ಮ್ಯಾನೇಜರ್ ರೇಷ್ಮಾ ಮಲ್ಯ ಇದ್ದರು.
ಕೊಕ್ಕೊ–ಚಾಕೊಲೇಟ್ ವಹಿವಾಟು
2025–26ರಲ್ಲಿ ₹27.96 ಕೋಟಿ ಮೌಲ್ಯದ 2,351.18 ಮೆಟ್ರಿಕ್ ಟನ್ ಹಸಿ ಕೊಕ್ಕೊ ಬೀಜ ಮತ್ತು ₹185.52 ಕೋಟಿ ಮೌಲ್ಯದ 4,021.85 ಮೆಟ್ರಿಕ್ ಟನ್ ಒಣ ಬೀಜ ಖರೀದಿಸಲಾಗಿದೆ. ಚಾಕೊಲೇಟ್ ಕಾರ್ಖಾನೆಯಲ್ಲಿ 12,606.40 ಮೆಟ್ರಿಕ್ ಟನ್ ಉತ್ಪಾದನೆ ನಡೆದಿದ್ದು, ಕೊಕ್ಕೊ ಮತ್ತು ಚಾಕೊಲೇಟ್ ಉತ್ಪನ್ನಗಳಿಂದ ₹488.65 ಕೋಟಿ ಮಾರಾಟ ದಾಖಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಅವರು ತಿಳಿಸಿದರು.
‘ಕ್ಯಾಂಪ್ಕೊ ಕಿಸಾನ್ ಮಿತ್ರ’
ಸದಸ್ಯರ ಸೇವೆಗಳನ್ನು ಸುಲಭಗೊಳಿಸಲು ‘ಕ್ಯಾಂಪ್ಕೊ ಕಿಸಾನ್ ಮಿತ್ರ’ ಮೊಬೈಲ್ ಆ್ಯಪ್ ಹಾಗೂ ನೇರ ಗ್ರಾಹಕ ಸಂಪರ್ಕಕ್ಕಾಗಿ ‘ಕ್ಯಾಂಪ್ಕೊ ಕಾರ್ಟ್’ ಆನ್‌ಲೈನ್ ಖರೀದಿ ವೇದಿಕೆಯನ್ನು ಆರಂಭಿಸಲಾಗಿದೆ. ಅಂತರರಾಷ್ಟ್ರೀಯ ಮಾರುಕಟ್ಟೆ ವಿಸ್ತರಣೆಯ ಭಾಗವಾಗಿ 130 ಮೆಟ್ರಿಕ್ ಟನ್ ಅಡಿಕೆಯನ್ನು ಮಾಲ್ಡೀವ್ಸ್‌ಗೆ ರಫ್ತು ಮಾಡಲಾಗಿದ್ದು, ಕೊಕ್ಕೊ ಆಧಾರಿತ ಉತ್ಪನ್ನಗಳ ರಫ್ತನ್ನೂ ಹೆಚ್ಚಿಸಲಾಗಿದೆ ಎಂದು ಕ್ಯಾಂಪ್ಕೊ ಅಧ್ಯಕ್ಷ ಸತೀಶ್ಚಂದ್ರ ಎಸ್. ಆರ್. ಅವರು ತಿಳಿಸಿದರು.
What do you feel about this post?
Like
Love
Happy
Haha
Sad





