ಮೈಸೂರು: ಆರೋಗ್ಯಕರ ಜೀವನಶೈಲಿ ಮತ್ತು ಪರಿಸರ ಸಂರಕ್ಷಣೆಯ ಸಂದೇಶದೊಂದಿಗೆ ಎಜು ಅಥ್ಲೀಟ್ ಫೌಂಡೇಶನ್ ವತಿಯಿಂದ ಆಯೋಜಿಸಿದ್ದ ಕನ್ನಡ ರಾಜ್ಯೋತ್ಸವ ಅಮೆಚೂರ್ ಸೈಕ್ಲಿಂಗ್ ರೇಸ್–2026ರಲ್ಲಿ 150 ಕ್ಕೂ ಹೆಚ್ಚು ಯುವ ಸೈಕ್ಲಿಸ್ಟ್‌ಗಳು ಪಾಲ್ಗೊಂಡರು.
ಮೈಸೂರಿನ ದಟ್ಟಗಳ್ಳಿಯ ಆರ್.ಎಂ. ಸೈಕಲ್ ವರ್ಲ್ಡ್‌ನಲ್ಲಿ ನಡೆದ ಸ್ಪರ್ಧೆಯಲ್ಲಿ ಏಳು ವಯೋಮಾನದ ವಿಭಾಗಗಳಲ್ಲಿ ಸ್ಪರ್ಧೆ ಆಯೋಜಿಸಲಾಗಿತ್ತು. ವಿವಿಧ ವಯೋಮಾನದ ಮಕ್ಕಳು ತಮ್ಮ ವೇಗ, ಸೈಕ್ಲಿಂಗ್ ಕೌಶಲ, ಸಹನಶಕ್ತಿ ಮತ್ತು ಕ್ರೀಡಾ ಮನೋಭಾವವನ್ನು ಪ್ರದರ್ಶಿಸಿದರು.

ಪ್ರತಿ ವಿಭಾಗದಲ್ಲಿ ಮೊದಲ ಮೂರು ಸ್ಥಾನ ಪಡೆದವರಿಗೆ ಚಿನ್ನ, ಬೆಳ್ಳಿ ಮತ್ತು ಕಂಚಿನ ಪದಕಗಳೊಂದಿಗೆ ಅರ್ಹತಾ ಪ್ರಮಾಣಪತ್ರ ವಿತರಿಸಲಾಯಿತು. ಸ್ಪರ್ಧೆಯಲ್ಲಿ ಪಾಲ್ಗೊಂಡ ಎಲ್ಲರಿಗೂ ಭಾಗವಹಿಸುವಿಕೆ ಪದಕ ಮತ್ತು ಪ್ರಮಾಣಪತ್ರ ನೀಡಿ ಪ್ರೋತ್ಸಾಹಿಸಲಾಯಿತು.
ಈ ವೇಳೆ ಮಾತನಾಡಿದ ನಿವೃತ್ತ ಪ್ರಾದೇಶಿಕ ಸಾರಿಗೆ ಅಧಿಕಾರಿ (ಆರ್‌ಟಿಒ)ಜೆ. ಪಿ ಗಂಗಾಧರ್ ಅವರು, ಯುವಜನರಲ್ಲಿ ಕ್ರೀಡಾಸಕ್ತಿ ಬೆಳೆಸುವುದು, ಸೈಕ್ಲಿಂಗ್ ಮೂಲಕ ಆರೋಗ್ಯಕರ ಜೀವನಶೈಲಿಯನ್ನು ಉತ್ತೇಜಿಸುವುದು ಹಾಗೂ ವಾಹನಗಳ ಬಳಕೆಯಿಂದ ಉಂಟಾಗುವ ಪರಿಸರ ಮಾಲಿನ್ಯ ತಗ್ಗಿಸುವ ಕುರಿತು ಜಾಗೃತಿ ಮೂಡಿಸುವುದು ಕಾರ್ಯಕ್ರಮದ ಉದ್ದೇಶ ಆಗಿದೆ ಎಂದರು.
ಮಕ್ಕಳ ದೈಹಿಕ ಸದೃಢತೆ, ಮಾನಸಿಕ ಆರೋಗ್ಯ, ಶಿಸ್ತು ಮತ್ತು ಆತ್ಮವಿಶ್ವಾಸ ವೃದ್ಧಿಸುವಲ್ಲಿ ಕ್ರೀಡೆಗಳ ಪಾತ್ರ ಮಹತ್ವದ್ದಾಗಿದೆ. ಸೈಕ್ಲಿಂಗ್ ಆರೋಗ್ಯದ ಜತೆಗೆ ಇಂಧನ ಉಳಿತಾಯ ಮತ್ತು ಪರಿಸರ ಸಂರಕ್ಷಣೆಗೂ ಸಹಕಾರಿ ಆಗಿದೆ ಎಂಬ ಸಂದೇಶವನ್ನು ಕಾರ್ಯಕ್ರಮದಲ್ಲಿ ಸಾರಲಾಗಿದೆ ಎಂದರು.
ರೇಸ್ ನಿರ್ದೇಶಕ ಧನ್ಯಸುಂದರ್ ರಾಜ್ ಕಾರ್ಯಕ್ರಮದ ನೇತೃತ್ವ ವಹಿಸಿದ್ದರು. ಶರತ್ ಅಹುಜಾ ತಾಂತ್ರಿಕ ಸಹಕಾರ ನೀಡಿದರು. ಪೊಲೀಸ್ ಇಲಾಖೆ, ಪೋಷಕರು, ಸ್ವಯಂಸೇವಕರು ಹಾಗೂ ಎಜು ಅಥ್ಲೀಟ್ ಫೌಂಡೇಶನ್ ತಂಡ ಕಾರ್ಯಕ್ರಮದ ಯಶಸ್ಸಿಗೆ ಸಹಕರಿಸಿದರು.
ಫೌಂಡೇಶನ್‌ನ ಸ್ಥಾಪಕ ಮತ್ತು ಮಾರ್ಗದರ್ಶಕ ಲಯನ್ಸ್ ಇಂಜಿ ನಾಗರಾಜ್ ಟಿ.ವಿ. ಸಹಕರಿಸಿದ ಎಲ್ಲರಿಗೂ ಕೃತಜ್ಞತೆ ಸಲ್ಲಿಸಿದರು.



