ನಕಲಿ ಆಧಾರ ಕಾರ್ಡ್ ಬಳಸಿ ಅಕ್ರಮವಾಗಿ ಭಾರತಕ್ಕೆ ಪ್ರವೇಶ,  ಮಂಗಳೂರಿನ ಮುಕ್ಕದಲ್ಲಿ 8 ಮಂದಿ ಬಾಂಗ್ಲಾದೇಶದ ಪ್ರಜೆಗಳ ಪತ್ತೆ: ಸುಧೀರ್ ಕುಮಾರ್

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ದೇಶ ವಿದೇಶ ಪುತ್ತೂರು ಮಂಗಳೂರು ರಾಜ್ಯ ಶಿರಸಿ

Spread the love

ಮಂಗಳೂರು: ಅಕ್ರಮವಾಗಿ ಭಾರತ ಪ್ರವೇಶಿಸಿ, ನಕಲಿ ಆಧಾರ್ ಕಾರ್ಡ್‌ಗಳನ್ನು ಬಳಸಿ ಮಂಗಳೂರಿನ ಮುಕ್ಕಾ ಪ್ರದೇಶದ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ತೊಡಗಿದ್ದ 8 ಮಂದಿ ಬಾಂಗ್ಲಾದೇಶದ ಪ್ರಜೆಗಳನ್ನು ಸುರತ್ಕಲ್ ಪೊಲೀಸರು ಯಶಸ್ವಿಯಾಗಿ ಪತ್ತೆ ಹಚ್ಚಿದ್ದಾರೆ ಎಂದು ಮಂಗಳೂರು ಪೊಲೀಸ್ ಕಮಿಷನರ್ ಸುಧೀರ್ ಕುಮಾರ್ ರೆಡ್ಡಿ ಅವರು ತಿಳಿಸಿದ್ದಾರೆ.

ಬಂಧಿತರು ಸುಮಾರು ಮೂರು ತಿಂಗಳ ಹಿಂದೆ ಬಾಂಗ್ಲಾದೇಶದಿಂದ ಅಕ್ರಮವಾಗಿ ಭಾರತಕ್ಕೆ ನುಸುಳಿದ್ದು, ಪಶ್ಚಿಮ ಬಂಗಾಳದ ಮುರ್ಶಿದಾಬಾದ್ ಮೂಲಕ ದೇಶ ಪ್ರವೇಶ ಮಾಡಿದ್ದಾರೆ. ಬಳಿಕ ಮುರ್ಶಿದಾಬಾದ್ ವಿಳಾಸ ಹೊಂದಿರುವ ಆಧಾರ್ ಕಾರ್ಡ್‌ಗಳ ಬಣ್ಣದ ಜೆರಾಕ್ಸ್ ಪ್ರತಿಗಳ ಮೇಲೆ ತಮ್ಮ ಭಾವಚಿತ್ರ ಅಂಟಿಸಿ ಅವುಗಳನ್ನು ಗುರುತಿನ ಚೀಟಿಗಳಾಗಿ ಬಳಸುತ್ತಿದ್ದರು. ಕಳೆದ ಎರಡು ತಿಂಗಳಿಂದ ಮುಕ್ಕಾದಲ್ಲಿ ಕಟ್ಟಡ ನಿರ್ಮಾಣ ಕಾಮಗಾರಿಯಲ್ಲಿ ಕೂಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿರುವುದು ಪ್ರಾಥಮಿಕ ತನಿಖೆ ವೇಳೆ ತಿಳಿದು ಬಂದಿದೆ ಎಂದು ತಿಳಿಸಿದ್ದಾರೆ.

ಕಟ್ಟಡ ಕಾರ್ಮಿಕರ ಸೋಗಿನಲ್ಲಿ ಸ್ಥಳೀಯ ಏಜಂಟರ ಮೂಲಕ ಅಕ್ರಮವಾಗಿ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವುದು ತನಿಖೆಯಲ್ಲಿ ತಿಳಿದು ಬಂದಿದೆ. ಬಂಧಿತರನ್ನು ಅಜರುಲ್ ಇಸ್ಲಾಂ, ಮುಹಮ್ಮದ್ ರಕೀಬ್, ಜಾಹಿದ್ ಹುಸೇನ್, ಮಹಮ್ಮದ್ ಬಿಲಾಲ್ ಹುಸೇನ್, ಸೋಯೆಬ್ ಉಲ್ಲಾ, ಮಹಮ್ಮದ್ ಸಂಟುಲ್, ಮೌಕರ್ ಆಲಿ, ಅಜರುಲ್ ಇಸ್ಲಾಂ ಎಂದು ಗುರುತಿಸಲಾಗಿದ್ದು ಭಾರತದ ಗಡಿಭಾಗ ಬಾಂಗ್ಲಾದ ರಾಜಶಾಹಿ ಎಂಬಲ್ಲಿನ ನಿವಾಸಿಗಳು ಎಂದು ತಿಳಿದು ಬಂದಿದೆ.

ಬಂಧಿತರನ್ನು ಠಾಣೆಗೆ ಕರೆತಂದು ವಿಚಾರಣೆ ನಡೆಸಿದ ವೇಳೆ, ಅವರ ಬಳಿ ಇದ್ದ ಬಾಂಗ್ಲಾದೇಶದ ರಾಷ್ಟ್ರೀಯ ಗುರುತಿನ ಚೀಟಿ, ಜನನ ಪ್ರಮಾಣಪತ್ರ ಹಾಗೂ ಕುಟುಂಬದ ದಾಖಲಾತಿಗಳನ್ನು ಪರಿಶೀಲಿಸಲಾಯಿತು. ಈ ವೇಳೆ ಅವರು ಬಾಂಗ್ಲಾದೇಶದ ಪ್ರಜೆಗಳಾಗಿರುವುದು ದೃಢಪಟ್ಟಿದ್ದು, ಯಾವುದೇ ಪಾಸ್‌ಪೋರ್ಟ್ ಅಥವಾ ವೀಸಾ ಪಡೆಯದೆ ಅಕ್ರಮವಾಗಿ ಭಾರತದ ಗಡಿ ದಾಟಿ ಪ್ರವೇಶಿಸಿರುವುದು ಬೆಳಕಿಗೆ ಬಂದಿದೆ ಎಂದು ತಿಳಿಸಿದ್ದಾರೆ.

ಈ ಸಂಬಂಧ ಮುಂದಿನ ಕ್ರಮಕ್ಕಾಗಿ ವಿದೇಶಿಯರ ಪ್ರಾದೇಶಿಕ ನೋಂದಣಿ ಕಚೇರಿ (ಎಫ್‌ಆರ್‌ಆರ್‌ಒ), ಬೆಂಗಳೂರಿಗೆ ವರದಿ ಸಲ್ಲಿಸಲಾಗಿದ್ದು, ಕಾನೂನು ಕ್ರಮ ಕೈಗೊಳ್ಳಲಾಗಿದೆ. ಮಂಗಳೂರು ಉತ್ತರ ಉಪವಿಭಾಗದ ಸಹಾಯಕ ಪೊಲೀಸ್ ಆಯುಕ್ತ ಶ್ರೀಕಾಂತ್ ಅವರ ಮಾರ್ಗದರ್ಶನದಲ್ಲಿ ಸುರತ್ಕಲ್ ಪೊಲೀಸ್ ಠಾಣೆಯ ನಿರೀಕ್ಷಕ ಪ್ರಮೋದ್ ಕುಮಾರ್ ನೇತೃತ್ವದಲ್ಲಿ ಪಿಎಸ್‌ಐ ರಘು ನಾಯಕ ಹಾಗೂ ಎಎಸ್‌ಐ ರಾಜೇಶ್ ಆಳ್ವ, ತಿರುಪತಿ ಅಳ್ಳೊಳ್ಳಿ, ಉಮೇಶ್, ರಾಜೇಂದ್ರ ಪ್ರಸಾದ್, ಕಾರ್ತಿಕ್, ವಿನೋದ್ ಕುಮಾರ್, ಸತೀಶ್ ಸತ್ತಿಗೇರಿ, ಸಂತೋಷ್ ಮತ್ತು ಓಂಪ್ರಕಾಶ್ ಬಿಂಗಿ ಸೇರಿದಂತೆ ಪೊಲೀಸ್ ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಪಾಲ್ಗೊಂಡಿದ್ದರು ಎಂದು ತಿಳಿಸಿದ್ದಾರೆ.

Leave a Reply

Your email address will not be published. Required fields are marked *