ಸುರತ್ಕಲ್ : ಮಂಗಳೂರಿನ ಸುರತ್ಕಲ್ ಸಮೀಪದ ಮುಕ್ಕಾದಲ್ಲಿ 8 ಮಂದಿ ಬಾಂಗ್ಲಾದೇಶಿ ಪ್ರಜೆಗಳು ಕೂಲಿ ಕಾರ್ಮಿಕರ ಸೋಗಿನಲ್ಲಿ ಅಕ್ರಮವಾಗಿ ನೆಲೆಸಿ, ಅನಧಿಕೃತ ಆಧಾರ್ ಕಾರ್ಡ್ ಮಾಡಿಸಿಕೊಂಡಿರುವ ಘಟನೆ ರಾಜ್ಯದ ಭದ್ರತೆಗೆ ಎಚ್ಚರಿಕೆಯ ಗಂಟೆ ಆಗಿದೆ. ಇಂತಹ ಅಕ್ರಮ ನುಸುಳುವಿಕೆಗಳನ್ನು ಗಂಭೀರವಾಗಿ ಪರಿಗಣಿಸದಿದ್ದರೆ ಮುಂದೆ ಇದರ ಪರಿಣಾಮ ಭೀಕರ ಆಗಿರುತ್ತದೆ. ಬಾಂಗ್ಲಾದೇಶಿಗರನ್ನು ಹೊರಹಾಕಲು ಕೇಂದ್ರ ಸರಕಾರದ ಜತೆ ರಾಜ್ಯ ಸರಕಾರ ಕೈಜೋಡಿಸಬೇಕು ಎಂದು ಶಾಸಕ ಡಾ. ಭರತ್ ಶೆಟ್ಟಿ ಅವರು ಸರಕಾರವನ್ನು ಒತ್ತಾಯಿಸಿದ್ದಾರೆ.
ದುರದೃಷ್ಟವಶಾತ್ ರಾಜ್ಯದ ಗೃಹ ಮಂತ್ರಿ ಪ್ರಿಯಾಂಕ್ ಖರ್ಗೆ ಅವರು ಕೇವಲ ಆರ್ ಎಸ್ ಎಸ್ ಎಂದು ಕನವರಿಸುವ ಬದಲು ದೇಶಕ್ಕೆ ನೇರ ಬೆದರಿಕೆ ಆಗಿರುವ ಇಂತಹ ಪ್ರಕರಣಗಳನ್ನು ಪತ್ತೆಹಚ್ಚುವತ್ತ ಗಮನ ಕೊಡಬೇಕು. ಈ ಬಾಂಗ್ಲಾದೇಶಿಗಳಿಗೆ ಅನಧಿಕೃತ ಆಧಾರ ಕಾರ್ಡ್ ಸೇರಿದಂತೆ ಎಲ್ಲ ಸೌಲಭ್ಯ ಒದಗಿಸಿಕೊಟ್ಟ ಏಜೆಂಟ್ಗಳು ಮತ್ತು ಅಧಿಕಾರಿಗಳ ಮೇಲೆ ಕಠಿಣ ಶಿಕ್ಷೆ ವಿಧಿಸಲು ಸರ್ಕಾರ ಕೂಡಲೇ ಮುಂದಾಗಬೇಕು. ಇಲ್ಲದಿದ್ದರೆ ಕಾಂಗ್ರೆಸ್ ಸರ್ಕಾರದ ಮತಬ್ಯಾಂಕ್ ರಾಜಕಾರಣಕ್ಕೆ ಕರಾವಳಿಯ ಜನರ ಜೀವ ಮತ್ತು ಸುರಕ್ಷತೆ ಬಲಿ ಆಗುತ್ತದೆ. ರಾಜ್ಯದ ಗೃಹ ಸಚಿವಾಲಯ ಇದರ ಹಿಂದಿರುವ ಕಾಣದ ಕೈಗಳನ್ನು ಪತ್ತೆ ಹಚ್ಚಿ ಗಂಭೀರ ಕ್ರಮವನ್ನು ಕೈಗೊಳ್ಳಬೇಕು ಎಂದು ಒತ್ತಾಯಿಸಿದ್ದಾರೆ.


