ಕುಕ್ಕೆ ಸುಬ್ರಹ್ಮಣ್ಯದಲ್ಲಿ ಸಚಿವ ಈಶ್ವರ್ ಖಂಡ್ರೆ ಹೇಳಿಕೆ: ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗೆ ಚೆಕ್ ಪೋಸ್ಟ್ ಸ್ಥಾಪನೆಗೆ ಆದೇಶ

ಜಿಲ್ಲಾ ಸುದ್ದಿ ಉಡುಪಿ ಕಾರವಾರ ಕುಂದಾಪುರ ಪುತ್ತೂರು ಮಂಗಳೂರು ಮಹಾನಗರ ರಾಜ್ಯ ಶಿರಸಿ

Spread the love

 ಕುಕ್ಕೆ ಸುಬ್ರಹ್ಮಣ್ಯ : ಸಂಪುಟ ವಿಸ್ತರಣೆ ಮುಖ್ಯಮಂತ್ರಿ ಅವರ ಪರಮಾಧಿಕಾರ ಆಗಿದೆ. ಈಗ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯಸಭಾ ಚುನಾವಣೆ ಕುರಿತು ವರಿಷ್ಠರ ಜತೆಗೆ ಚರ್ಚಿಸಲು ನವದೆಹಲಿಗೆ ತೆರಳಿದ್ದಾರೆ ಎಂದು ಅರಣ್ಯ ಸಚಿವ ಈಶ್ವರ ಖಂಡ್ರೆ ಅವರು ಮಂಗಳವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಬರಲು ಇರುವ ನಾಲ್ಕೂ ಪ್ರವೇಶ ರಸ್ತೆಗಳಲ್ಲಿ ಏಕಬಳಕೆ ಪ್ಲಾಸ್ಟಿಕ್ ತಪಾಸಣೆಗೆ ಚೆಕ್ ಪೋಸ್ಟ್ ಸ್ಥಾಪಿಸಲು ಆದೇಶ ನೀಡಲಾಗಿದೆ. ರಸ್ತೆಯ ಬದಿ ಪ್ಲಾಸ್ಟಿಕ್ ಬಾಟಲಿ, ತಟ್ಟೆ ಇತ್ಯಾದಿ ತ್ಯಾಜ್ಯಗಳು ಬಿದ್ದಿರುವುದನ್ನು ನೋಡಿದೆ. ಕೂಡಲೇ ಅಧಿಕಾರಿಗಳ ಸಭೆ ನಡೆಸಿ ಚೆಕ್ ಪೋಸ್ಟ್ ಆರಂಭಿಸಿ 2 ಹಂತದ ತಪಾಸಣೆ ಮಾಡುವಂತೆ ಸೂಚನೆ ನೀಡಲಾಗಿದೆ ಎಂದರು.

ರಾಜ್ಯದಲ್ಲಿ ಡೀಮ್ಡ್ ಅರಣ್ಯಕ್ಕೆ ಸಂಬಂಧಿಸಿದಂತೆ ಸಮಸ್ಯೆ ಇದ್ದು, ಬಿಜೆಪಿ ಅಧಿಕಾರದ ಅವಧಿಯಲ್ಲಿ 2022 ರಲ್ಲಿ ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಪ್ರಮಾಣ ಪತ್ರದಲ್ಲಿ 3.33 ಲಕ್ಷ ಹೆಕ್ಟೇರ್ ಭೂಮಿ ಡೀಮ್ಡ್ ಎಂದು ಉಲ್ಲೇಖಿಸಲಾಗಿದೆ. ಆದರೆ, ಇದರಲ್ಲೂ ಅಂಗನವಾಡಿ, ಸರ್ಕಾರಿ ಆಸ್ಪತ್ರೆ, ಪಟ್ಟಾ ಭೂಮಿ ಇದ್ದು, ಈ ಸಮಸ್ಯೆ ಪರಿಹರಿಸಲು ಕಂದಾಯ ಇಲಾಖೆ ಜತೆಯಲ್ಲಿ ಜಂಟಿ ಸರ್ವೆ ನಡೆಸುತ್ತಿರುವುದಾಗಿ ತಿಳಿಸಿದರು.

ಕಂದಾಯ ಇಲಾಖೆಯಲ್ಲಿ ಮೋಜಿಣಿದಾರರು ಕೆಲ ತಿಂಗಳಿಂದ ಮುಷ್ಕರ ನಡೆಸುತ್ತಿದ್ದಾರೆ. ಜತೆಗೆ ಸರ್ವೆಯರ್​​ಗಳ ಕೊರತೆ ಇರುವುದಾಗಿ ಉಡುಪಿ ಜಿಲ್ಲಾಧಿಕಾರಿ ತಿಳಿಸಿದ್ದಾರೆ. ಅರಣ್ಯ ಜಂಟಿ ಸರ್ವೆಗಾಗಿ ವಿಶೇಷವಾಗಿ ಸಿಬ್ಬಂದಿ ನಿಯೋಜಿಸಲು ತಿಳಿಸಿದ್ದು, ಈ ಬಗ್ಗೆ ಕಂದಾಯ ಸಚಿವರ ಜತೆಗೆ ಸಮಾಲೋಚಿಸುವುದಾಗಿ ತಿಳಿಸಿದರು.

ಮಾನವನ ಜೀವ ಅತ್ಯಮೂಲ್ಯ ಆಗಿದ್ದು, ಪ್ರಾಣಹಾನಿ ಆಗದಂತೆ ಕ್ರಮ ವಹಿಸಲು ಅರಣ್ಯಾಧಿಕಾರಿಗಳಿಗೆ ತಿಳಿಸಲಾಗಿದೆ. ವನ್ಯಜೀವಿಗಳ ಸಂಚಾರದ ಬಗ್ಗೆ ನಿಗಾ ಇಡಲು ಡ್ರೋನ್ ಸೇರಿದಂತೆ ಅತ್ಯಾಧುನಿಕ ಉಪಕರಣಗಳನ್ನು ಬಳಸಲಾಗುತ್ತಿದೆ. ಕಮಾಂಡ್ ಸೆಂಟರ್ ತೆರೆಯಲಾಗಿದೆ ಎಂದರು.

ಕುಕ್ಕೆ ಸುಬ್ರಹ್ಮಣ್ಯಕ್ಕೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಬರುತ್ತಾರೆ. ಅವರ ಮೇಲೆ ವನ್ಯಜೀವಿ ದಾಳಿ ಮಾಡದಂತೆ ಎಚ್ಚರ ವಹಿಸಲು ಮತ್ತು ಚಿರತೆ ಸಮಸ್ಯೆ ಇರುವ ಕಡೆಗೆ ಹೆಚ್ಚಿನ ಬೋನ್ ಇಡಲು, ಆನೆಗಳು ಬಾರದಂತೆ ಕಂದಕ ಕಾಮಗಾರಿ ಪೂರ್ಣಗೊಳಿಸಲು ಮತ್ತು ಸೌರ ತಂತಿ ಬೇಲಿ ಅಳವಡಿಸಲು ಅಧಿಕಾರಿಗಳಿಗೆ ಸೂಚಿಸಿದರು.

ಕುಮಾರಧಾರಾ ನದಿಗೆ ತ್ಯಾಜ್ಯ ನೇರವಾಗಿ ಹರಿಸುವವರ ವಿರುದ್ಧ ಕ್ರಮ ವಹಿಸಲಾಗುತ್ತದೆ. ಸ್ಥಳೀಯ ಸಂಸ್ಥೆಗಳು ಈ ಬಗ್ಗೆ ನಿಗಾ ಇಡಬೇಕು, ತ್ಯಾಜ್ಯ ಜಲ ಸಂಸ್ಕರಣಾ ಘಟಕಗಳ ಪರಿಶೀಲನೆ ಮಾಡಬೇಕು, ಯಾರೇ ಸಂಸ್ಕರಿಸದೆ ತ್ಯಾಜ್ಯ ನದಿಗೆ ಬಿಟ್ಟರೆ ಮೊದಲಿಗೆ ಎಚ್ಚರಿಕೆ ನೀಡಬೇಕು. ಇದೇ ತಪ್ಪು ಮುಂದುವರೆಸಿದರೆ ಕ್ರಿಮಿನಲ್ ಮೊಕದ್ದಮೆ ದಾಖಲಿಸಿ ಎಂದು ಸೂಚನೆ ನೀಡಿದರು.

ರಾಜ್ಯ ಗೇರು ಅಭಿವೃದ್ಧಿ ನಿಗಮದ ಅಧ್ಯಕ್ಷೆ ಮಮತಾ ಗಟ್ಟಿ, ಸುಬ್ರಹ್ಮಣ್ಯ ದೇವಸ್ಥಾನದ ಅಧ್ಯಕ್ಷ ಹರೀಶ್ ಇಂಜಾಡಿ, ಗ್ಯಾರಂಟಿ ಅನುಷ್ಠಾನ ಸಮಿತಿ ಅಧ್ಯಕ್ಷ ಸುಧೀರ್ ಕುಮಾರ್ ಶೆಟ್ಟಿ, ಕಡಬಾ ಬ್ಲಾಕ್ ಅಧ್ಯಕ್ಷ ಅಭಿಲಾಷ ಸೇರಿದಂತೆ ಹಲವರು ಇದ್ದರು.

 

Leave a Reply

Your email address will not be published. Required fields are marked *